ಚೊಕ್ಕಾಡಿ ಪದವು ಮೈದಾನದಲ್ಲಿ ಸಾಮೂಹಿಕ ಗೋಪೂಜೆ

0

 

ಒಡಿಯೂರು ಶ್ರೀ ಯವರಿಂದ ಗೋವಿನ ಪೂಜೆ – ಆಶೀರ್ವಚನ

ಕತ್ತಲ್ ಸಾರ್ ರವರ ದಿಕ್ಸೂಚಿ ಭಾಷಣ, ವಿಠಲ ನಾಯಕ್ ರಿಂದ ಗೀತಾ ಸಾಹಿತ್ಯ ಸಂಭ್ರಮ

ವಿಶ್ವ ಹಿಂದೂ ಪರಿಷದ್ ಬಜರಂಗದಳ ವಜ್ರಕಾಯ ಶಾಖೆ ಪದವು ಚೊಕ್ಕಾಡಿ, ಸುಳ್ಯ ಪ್ರಖಂಡ ಇದರ ವತಿಯಿಂದ ನ.5 ರಂದು ಪದವು ಮೈದಾನದಲ್ಲಿ ಸಾಮೂಹಿಕ ಗೋಪೂಜೆ ಹಾಗೂ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು.
ಸಂಜೆ ಕಾತ್ಯಾಯಿನಿ ಭಜನಾ ಮಂಡಳಿ ಕೆದಿಕಾನ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.

 

ಬಳಿಕ ಧಾರ್ಮಿಕ ಸಭೆಯು ಹಿರಿಯ ಪ್ರಗತಿಪರ ಕೃಷಿಕ ಗಣಪಯ್ಯ ಆನೆಕಾರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಗಮಿಸಿ ಗೋಪೂಜೆಯನ್ನು ನೆರವೇರಿಸಿ ಆಶೀರ್ವಚನ ನೀಡಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ದಿಕ್ಸೂಚಿ ಭಾಷಣ ಮಾಡಿದರು. ವಿ.ಹೆಚ್.ಪಿ.ಅಧ್ಯಕ್ಷ ಸೋಮಶೇಖರ ಪೈಕ, ಬಜರಂಗದಳ ಜಿಲ್ಲಾ ಸಹ ಸಂಯೋಜಕ್ ಲತೀಶ್ ಗುಂಡ್ಯ, ಬಜರಂಗದಳ ಗೋರಕ್ಷಾ ಪ್ರಮುಖ್ ಅರವಿಂದ ಸುಳ್ಯ, ‌ದುರ್ಗಾವಾಹಿನಿ ಸಂಯೋಜಕಿ ನಮಿತಾ ಪ್ರವೀಣ್ ರಾವ್, ಕುಕ್ಕುಜಡ್ಕ ಸೊಸೈಟಿ ಮಾಜಿ ಅಧ್ಯಕ್ಷ ರಾಘವೇಂದ್ರ ಪಿ.ಕೆ, ವಜ್ರಕಾಯ ಶಾಖೆಯ ಅಧ್ಯಕ್ಷ ಭೋಜಪ್ಪ ಗೌಡ, ಕಾರ್ಯದರ್ಶಿ ಸುದರ್ಶನ ಪಿ.ಎಸ್, ಸಂಚಾಲಕ ಸತೀಶ್ ಪಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಹಿರಿಯ ನಾಟಿ ವೈದ್ಯೆ ಶ್ರೀಮತಿ ಶೇಷಮ್ಮ ಕುಕ್ಕುಜಡ್ಕ ಮತ್ತು ಆರೋಗ್ಯ ಮಿತ್ರ ಮುರಳಿ ನಳಿಯಾರು ರವರನ್ನು ಸಂಘಟನೆಯ ವತಿಯಿಂದ ಸನ್ಮಾನಿಸಲಾಯಿತು.

ಆರೋಗ್ಯ ಮಿತ್ರ ಮುರಳಿ ನಳಿಯಾರು ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಅಭಿಷೇಕ್ ಮಂಡೆಕೋಲು ವೈಯುಕ್ತಿಕ ಗೀತೆ ಹಾಡಿದರು.ಸಂಘಟನೆಯ ಸುಳ್ಯ ನಗರ ಸಂಚಾಲಕ ವರ್ಷಿತ್ ಚೊಕ್ಕಾಡಿ ವಂದಿಸಿದರು. ತೀರ್ಥೇಶ್ ಯಾದವ್ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಕಲಾವಿದ ವಿಠಲ ನಾಯಕ್ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಂಡಿತು.
ಆಗಮಿಸಿದ ಎಲ್ಲರಿಗೂ ರಾತ್ರಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.
ವಿಶ್ವ ಹಿಂದೂ ಪರಿಷದ್ ಬಜರಂಗದಳ ವಜ್ರ ಕಾಯ ಶಾಖೆಯ ಕಾರ್ಯಕರ್ತರು, ಚೊಕ್ಕಾಡಿ ಗರುಡ ಯುವಕ ಮಂಡಲದ ಸದಸ್ಯರು ಸ್ವಯಂ ಸೇವಕರಾಗಿ ಸಹಕರಿಸಿದರು. ಸಹಸ್ರಾರು ಸಂಖ್ಯೆಯಲ್ಲಿ ಜನಸ್ತೋಮ ಸೇರಿದ್ದರು.

ಸುಳ್ಯ ಸುದ್ದಿ ಚಾನೆಲ್ ಮೂಲಕ ನೇರ ಪ್ರಸಾರ ಮಾಡಲಾಗಿತ್ತು.

“ಭವ್ಯ ಭಾರತದ ನಿರ್ಮಾಣಕ್ಕೆ ಯುವಕರು ಸೇನಾನಿಗಳಾಗಬೇಕು. ಸನಾತನ ಹಿಂದೂ ಧರ್ಮಕ್ಕೆ ನಾಶವೆಂಬುದಿಲ್ಲ.ವಿಶ್ವ ಹಿಂದೂ ಪರಿಷದ್ ಬಜರಂಗದಳ ದುರ್ಗಾವಾಹಿನಿ ಸಂಘಟನೆಗಳು ಧರ್ಮ ರಕ್ಷಣೆಯೊಂದಿಗೆ ದೇಶ ಕಟ್ಟುವ ಕಾಯಕಕ್ಕೆ ಕಟಿ ಬದ್ಧರಾಗಿವೆ. ಸ್ವದೇಶಿಯ ಗೋವಿನ ಎದುರು ಯಾವ ಆಸ್ಪತ್ರೆಯು ಸರಿ ಸಾಟಿಯಾಗಲಾರದು. ಗೋಮಾತೆಯಲ್ಲಿ ಅದ್ಭುತವಾದ ಋಣಾತ್ಮಕ ಶಕ್ತಿ ತುಂಬಿದೆ. ಆತ್ಮಜ್ಯೋತಿ (ಉಡಲ್ದ್ ತುಡರ್) ಯಿಂದ ಬದುಕಿನ ಕತ್ತಲನ್ನು ಹೋಗಲಾಡಿಸಲು ಸಾಧ್ಯವಿದೆ – ಒಡಿಯೂರು ಶ್ರೀ

“ನಾವು ವಜ್ರಕಾಯರಾಗಬೇಕೆಂದಾದರೆ ಗೋಮಾತೆಯ ನಿತ್ಯ ಪೂಜೆಯನ್ನು ಅಳವಡಿಸಿಕೊಂಡರೆ ಮಾತ್ರ ಸಾಧ್ಯ. ದುರ್ಭಿಕ್ಷ ಮರಣದಿಂದ ಮುಕ್ತಿ ಹೊಂದಬೇಕಾದರೆ ಗೋವಿನ ಪೂಜೆಯಾಗಬೇಕು.ಜಗತ್ತಿನ ಮಾತೆ ಗೋಮಾತೆ. ಹಬ್ಬ ಹರಿದಿನಗಳ ಆಚರಣೆಯಲ್ಲಿ ಆರೋಗ್ಯ ಪೂರ್ಣ ಮಹತ್ವವಿದೆ. ಪಂಚಗವ್ಯ ರೋಗ ನಿರೋಧಕ ಶಕ್ತಿ ಗೋವಿನಲ್ಲಿ ಅಡಕವಾಗಿದೆ. ಗೋಮಾತೆ ಮುನಿದರೆ ಮನುಜ ಸಂತತಿಗೆ ಬದುಕಿಲ್ಲ.ಪ್ರತಿ ಮನೆಯಲ್ಲಿ ಗೋವಿನ ಆರಾಧನೆಯಾಗಲಿ. ತುಳುನಾಡಿನ ತುಳು ಭಾಷಿಗರಿಗೆ ಚಳಿಯೆಂಬುದಿಲ್ಲ ಅವರಿಗೆ ಚಳಿಗಾಲವಿಲ್ಲ ಎರಡೇ ಕಾಲ ಅದು ಬೇಸಿಗೆ ಕಾಲ ಮತ್ತು ಮಳೆಗಾಲ. ತುಳು ಭಾಷೆಗೆ 2500 ವರ್ಷದ ಇತಿಹಾಸವಿದೆ. ಭಾರತಾಂಬೆಯ ಪುತ್ರಿ ತುಳು ಮಾತೆ, ತುಳು ಭಾಷೆ ಅಧಿಕೃತ ರಾಜ್ಯ ಭಾಷೆಯಾಗಿ ಹೊರ ಹೊಮ್ಮುವಂತಾಗಲೇಬೇಕು.
-ದಯಾನಂದ ಕತ್ತಲ್ ಸಾರ್

ಚೊಕ್ಕಾಡಿ ಪದವು ಎಂಬ ಪ್ರದೇಶ ಗೋಮಾಳವಾಗಿತ್ತು. ಇವತ್ತು ಅದೇ ಪ್ರದೇಶದಲ್ಲಿ ಕೇಸರಿ ಶಾಲು ಧರಿಸಿದ ಯುವಕರ ತಂಡ ವಿಶಿಷ್ಟವಾದ ಕಲ್ಪನೆಯೊಂದಿಗೆ ಗೋಮಾತೆಯನ್ನು ಪೂಜಿಸುವ ಕಾರ್ಯವನ್ನು 6 ವರ್ಷಗಳಿಂದ ಕೈಗೆತ್ತಿಕೊಂಡು ಈ ಊರಿನ ಹಿನ್ನೆಲೆ ಇತಿಹಾಸವನ್ನು ಎತ್ತಿ ಹಿಡಿಯುವ ಕಾರ್ಯಕ್ಕೆ ಸಜ್ಜಾಗಿರುವುದು ಅಭಿನಂದನೀಯ- ಗಣಪಯ್ಯ ಆನೆಕಾರ್

ಆರನೇ ವರ್ಷದ ಗೋಪೂಜನಾ ಕಾರ್ಯಕ್ರಮದಲ್ಲಿ ಆರು ಬಗೆಯ ವಿಶೇಷತೆ ಇರುವುದು. ಸಂಘಟನೆಯ ಯುವಕರ ಶ್ರಮ ನಿಷ್ಠೆ ಕಾಯಕ ಹಿಂದೂ ಸಮಾಜದ ಉಳಿವಿಗೆ ಪೂರಕವಾಗಿದೆ – ರಾಘವೇಂದ್ರ ಪಿ.ಕೆ

LEAVE A REPLY

Please enter your comment!
Please enter your name here