ಅನಾವಶ್ಯಕ ಪ್ರತಿಭಟನೆಗಳನ್ನು ಮಾಡಿ ನಗರ ಪಂಚಾಯತ್ ಸಭೆಯನ್ನು ಹಾಳು ಮಾಡುವ ಹುನ್ನಾರ ಕಾಂಗ್ರೆಸ್ಸಿನವರದ್ದು : ಹರೀಶ್ ಕಂಜಿಪಿಲಿ

0

ಅನಾವಶ್ಯಕ ಚರ್ಚೆಗಳನ್ನು ತಂದು ನಾಟಕೀಯ ಪ್ರತಿಭಟನೆಗಳನ್ನು ಮಾಡಿ ನಗರ ಪಂಚಾಯತ್ ಸಭೆಯನ್ನು ಹಾಳು ಮಾಡುವ ಹುನ್ನಾರ ಕಾಂಗ್ರೆಸ್ಸಿನವರದ್ದಾಗಿದೆ.
ನಗರ ಪಂಚಾಯತ್ ಆಡಳಿತ ವ್ಯವಸ್ಥೆಯಲ್ಲಿ ಅಭಿವೃದ್ಧಿ ಕಾರ್ಯವನ್ನು ಸಹಿಸದೆ ಕಾಂಗ್ರೆಸ್ ಪಕ್ಷದ ಸದಸ್ಯರುಗಳು ನಗರ ಪಂಚಾಯತ್ ಸಭೆಯನ್ನು ಸುಶ್ರುತವಾಗಿ ನಡೆಸಲು ಬಿಡುತ್ತಿಲ್ಲ ಎಂದು ಸುಳ್ಯ ತಾಲೂಕು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ.

 

ಅವರು ಸುಳ್ಯ ಬಿಜೆಪಿ ಮಂಡಲ ಸಮಿತಿ ವತಿಯಿಂದ ಸುಳ್ಯ ಪ್ರೆಸ್ ಕ್ಲಬ್ಬಿನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
’ಕಳೆದ ಕೆಲ ದಿನಗಳ ಹಿಂದೆ ನಗರ ಪಂಚಾಯತ್ ನ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷದ ನಾಮನಿರ್ದೇಶಕ ಸದಸ್ಯರುಗಳ ಮತ್ತು ಕಾಂಗ್ರೆಸ್ ಪಕ್ಷದ ಸದಸ್ಯರಾಗಿರುವ ವೆಂಕಪ್ಪ ಗೌಡರ ನಡುವೆ ನಡೆದಿರುವ ಜಟಾಪಟಿಯನ್ನು ಕುರಿತು ಮಾತನಾಡಿ ಘಟನೆಯ ಬಗ್ಗೆ ಸ್ಪಷ್ಟನೆಯನ್ನು ನೀಡಿದರು.
ಸುಳ್ಯದ ಕಾಂಗ್ರೆಸ್ ಪಕ್ಷದ ನಾಯಕರುಗಳು ಅವರು ಮಾಡಿದ್ದೆಲ್ಲಾ ಸರಿ, ಆಡಳಿತ ಪಕ್ಷದವರು ಮಾಡುವುದು ಮಾತ್ರ ತಪ್ಪು ಎಂಬ ರೀತಿಯಲ್ಲಿ ವರ್ತಿಸುತ್ತಿದ್ದಾರೆ.

ನಗರ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಅವರೇ ತಪ್ಪನ್ನು ಮಾಡಿ ಅವರೇ ಪತ್ರಿಕಾಗೋಷ್ಠಿಯನ್ನು ಕರೆದು ಆಡಳಿತದಲ್ಲಿರುವ ಬಿಜೆಪಿ ಪಕ್ಷದ ಸದಸ್ಯರುಗಳ ಮೇಲೆ ತಪ್ಪನ್ನು ಹೊರಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಇದನ್ನು ಸುಳ್ಯ ಬಿಜೆಪಿ ಮಂಡಲ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ಹೇಳಿದರು.
ಶಾಸಕರು, ಸಂಸದರು ನಗರ ಸಭೆಯ ಸಾಮಾನ್ಯ ಸಭೆಗಳಿಗೆ ಬರಬೇಕೆಂದು ಆಗ್ರಹಿಸಿ ಕಪ್ಪು ಪಟ್ಟಿಯನ್ನು ಧರಿಸಿ ಧಿಕ್ಕಾರ ಕೂಗುವುದು, ಮೇಜಿನ ಮೇಲೆ ಮಲಗಿ ಪ್ರತಿಭಟನೆಯಲ್ಲಿ ತೊಡಗಿಸಿಕೊಳ್ಳುವ ಇವರು ರಾಜಕೀಯ ದುರುದ್ದೇಶ ಮಾತ್ರ ಇವರದ್ದಾಗಿದೆ ಎಂದು ಹೇಳಿದ್ದಾರೆ.

ನಮ್ಮ ಸಚಿವರ ನೇತೃತ್ವದಲ್ಲಿ ಸುಳ್ಯ ನಗರಕ್ಕೆ ಸಂಬಂಧಿಸಿದಂತೆ ನಗರದ ಜನತೆಯ ಬಹುತೇಕ ಮೂಲಭೂತ ಸಮಸ್ಯೆಗಳ ಬೇಡಿಕೆಗಳು ಈಡೇರಿದ್ದು, ನಗರದ ಬಹು ಮುಖ್ಯವಾದ ಕುಡಿಯುವ ನೀರಿನ ಯೋಜನೆ, ಕಸದ ಸಮಸ್ಯೆ, ರಸ್ತೆಗಳ ಸಮಸ್ಯೆ ಮುಂತಾದ ಸಮಸ್ಯೆಗಳನ್ನು ನಿವಾರಿಸುವಲ್ಲಿ ನಮ್ಮ ಶಾಸಕರು ನೂರಕ್ಕೆ ನೂರು ಪ್ರಯತ್ನವನ್ನು ಪಡುತ್ತಿದ್ದಾರೆ.
ಅದರಲ್ಲಿ ಕೆಲವು ಸಮಸ್ಯೆಗಳು ಈಗಾಗಲೇ ಪರಿಹಾರ ಕೂಡ ಕಂಡಿದೆ.ಆದರೆ ಕಾಂಗ್ರೆಸ್ ಪಕ್ಷದ ಸದಸ್ಯರುಗಳು ರಾಜಕೀಯ ದುರುದ್ದೇಶದಿಂದ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಅದರಲ್ಲಿ ಅವರ ರಾಜಕೀಯ ಬೇಳೆಯನ್ನು ಬೇಯಿಸಲು ನೋಡುತ್ತಿದ್ದಾರೆ ಎಂದು ಹೇಳಿದರು.
ನಗರ ಪಂಚಾಯತ್ ನಾಮನಿರ್ದೇಶಕ ಸದಸ್ಯ ಬೂಡು ರಾಧಾಕೃಷ್ಣರೈ ಮಾತನಾಡಿ, ನಾವು ಯಾರು ಕೂಡ ಸಭೆಯಲ್ಲಿ ಕೈ ಕೈ ಮಿಲಾಯಿಸಲು ಹೋಗಲಿಲ್ಲ. ಅನಾವಶ್ಯಕವಾಗಿ ನಗರ ಪಂಚಾಯತಿಯ ಎಲ್ಲಾ ಸಾಮಾನ್ಯ ಸಭೆಗಳಲ್ಲಿ ವೆಂಕಪ್ಪಗೌಡರು ಪ್ರತಿಭಟನೆಯ ಹೆಸರನ್ನು ಹೇಳಿ ಟ್ಯೂಬ್ ಲೈಟ್ ಹೊಡೆಯುವುದು, ಆಕ್ರೋಶ ಭರಿತರಾಗಿ ವರ್ತಿಸುವುದು, ಕಳೆದ ಸಭೆಯಲ್ಲಿ ಪ್ರತಿಭಟನೆಗೆ ಇಳಿದ ಅವರು ಸಭಾಧ್ಯಕ್ಷರ ಮೇಜಿನ ಮೇಲೆ ಇರುವ ಮೈಕ್ ಕಿತ್ತು ನಮ್ಮ ಮೇಲೆ ಹಲ್ಲೆಗೆ ಮುಂದಾಗಿರುವುದು, ಈ ರೀತಿ ಎಲ್ಲಾ ಮಾಡುವಾಗ ನಾವು ಪ್ರತಿರೋಧ ತೋರಿಸಿರುವುದು ಹೌದು, ಆದರೆ ಇದು ನಮ್ಮ ತಪ್ಪಲ್ಲ. ಸಭೆಯಲ್ಲಿ ಈ ರೀತಿಯ ವರ್ತನೆ ಮಾಡುವವರನ್ನು ಸಭೆಯಿಂದ ಹೊರಗೆ ಕಳಿಸಿ ಎಂದು ನಾವು ನಮ್ಮ ಅಧ್ಯಕ್ಷರ ಬಳಿ ಹೇಳಿದ್ದೇವೆ. ನಗರ ಪಂಚಾಯತಿ ಸಭೆಯಲ್ಲಿ ಒಬ್ಬ ವಿರೋಧ ಪಕ್ಷದ ಸದಸ್ಯರಾಗಿರುವವರು ಆರೋಗ್ಯಕರ ಚರ್ಚೆಗಳನ್ನು ಮಾಡುವುದು ಸಹಜ. ಆದರೆ ಈ ರೀತಿಯ ಡ್ರಾಮಗಳನ್ನು ಮಾಡುವುದು ಎಷ್ಟು ಸರಿ? ನಮ್ಮನ್ನು ನಾಮನಿರ್ದೇಶಕ ಸದಸ್ಯರೆಂದು ಕಡೆಗಣಿಸಿ ಮಾತನಾಡುವುದು ಅವರ ಹಿರಿಯತನಕ್ಕೆ ಸಂದ ವಿಷಯವಲ್ಲ ಎಂದು ಅವರು ಹೇಳಿದರು.

ಮತ್ತೋರ್ವ ನಾಮನಿರ್ದೇಶಕ ಸದಸ್ಯ ರೋಹಿತ್ ಕೋಯಿಂಗೋಡಿ ಮಾತನಾಡಿ, ನಮ್ಮ ಶಾಸಕರ ಬಳಿ ಅವರ ವಾರ್ಡಿಗೆ ಏನಾದರೂ ಯೋಜನೆ ತರಬೇಕೆಂದು ಇದ್ದರೆ ಅವರಿಗೆ ಶಾಸಕರನ್ನು ಭೇಟಿಯಾಗಿ ಮಾತನಾಡಬಹುದು. ಅದನ್ನು ಬಿಟ್ಟು ನಗರ ಪಂಚಾಯತ್ ಸಭೆಯಲ್ಲಿ ಗೊಂದಲ, ಗದ್ದಲ ಮಾಡುವುದು ಸರಿಯಲ್ಲ. ವೆಂಕಪ್ಪ ಗೌಡರಿಗೆ ಬೇಕಾದಾಗ ದೈವಸ್ಥಾನದ ಕಾರ್ಯಕ್ರಮಗಳು, ಕ್ರೀಡಾ ಕಾರ್ಯಕ್ರಮಗಳ ವಿಷಯಗಳಲ್ಲಿ ಶಾಸಕರ ಬಳಿ ಹೋಗಿ ಅನುದಾನವನ್ನು ತರುತ್ತಾರೆ. ಅದೇ ರೀತಿ
ಇವರ ವಾರ್ಡಿನ ಅಭಿವೃದ್ಧಿಯ ಬಗ್ಗೆ ಮಾತು ಬಂದಾಗ ಶಾಸಕರನ್ನು ಭೇಟಿಯಾಗಿ ಯೋಜನೆಗಳನ್ನು ತರಬಹುದಲ್ಲವೇ? ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪಕ್ಷದ ಮುಖಂಡರುಗಳಾದ ಸೋಮನಾಥ ಪೂಜಾರಿ, ಬಾಲಗೋಪಾಲ ಸೇರ್ಕಜೆ, ಸುನಿಲ್ ಕೇರ್ಪಳ, ಮಹೇಶ್ ಕುಮಾರ್ ಮೇನಾಲ, ಜಿನ್ನಪ್ಪ ಪೂಜಾರಿ, ಶೀನಪ್ಪ ಬಯಂಬು, ವಿಜಯ ಹರ್ಲಡ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here