Site icon Suddi Belthangady

ಚೆಂಬು : ಕುಡಿಯುವ ನೀರಿನ ಘಟಕದ ಪಂಪ್ 6 ತಿಂಗಳ ಹಿಂದೆ ಕಳವು – ಇನ್ನೂ ಪತ್ತೆಯಿಲ್ಲ

 

ಘಟಕದ ಶೀಘ್ರ ದುರಸ್ಥಿಗೆ ಗ್ರಾಮಸ್ಥರ ಆಗ್ರಹ

ಚೆಂಬು ಗ್ರಾಮದ ಆನೆಹಳ್ಳದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದ ಪಂಪ್ ಕಳವಾದ ಘಟನೆ ಆರು ತಿಂಗಳ ಹಿಂದೆ ನಡೆದಿದ್ದು, ಇದುವರೆಗೆ ಪತ್ತೆಯಾಗದ ಹಿನ್ನೆಲೆಯಲ್ಲಿ ಈಗ ಅದು ಚರ್ಚೆಯ ವಿಚಾರವಾಗಿದೆ.


ಈ ಯೋಜನೆಯು 2019 ರಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಇದರಿಂದ 2 ರೂ.ಗೆ 20 ಲೀ. ನೀರನ್ನು ಚೆಂಬು ಗ್ರಾಮಸ್ಥರಲ್ಲದೆ, ಕಲ್ಲುಗುಂಡಿಯವರು ಕೂಡಾ ತೆಗೆದುಕೊಂಡು ಹೋಗುತ್ತಿದ್ದರು. ಆರು ತಿಂಗಳ ಹಿಂದೆ ಈ ಘಟಕದ ಶುದ್ಧೀಕರಣದ ಪಂಪ್ ಕಳವಾಗಿದ್ದು, ಈ ಬಗ್ಗೆ ಪಂಚಾಯತ್‌ನ ಅಧ್ಯಕ್ಷರು ಮತ್ತು ಪಿಡಿಒ ನಿರ್ಣಯ ಮಾಡಿ, ಸಿಬ್ಬಂದಿಗಳ ಮೂಲಕ ಸಂಪಾಜೆ ಪೊಲೀಸ್ ಠಾಣೆಗೆ ದೂರು ಕೊಡಿಸಿದ್ದರು. ಆದರೆ ಇದುವರೆಗೆ ಪಂಪು ಪತ್ತೆಯಾಗಿಲ್ಲ.
ಇದೀಗ ಈ ಶುದ್ಧ ಕುಡಿಯುವ ನೀರಿನ ಘಟಕದ ಪಂಪು ಕಳವು ವಿಚಾರ ಚೆಂಬು ಗ್ರಾಮದ ಗ್ರಾಮ ವಿಕಾಸ ವಾಟ್ಸಾಪ್ ಗುಂಪಿನಲ್ಲಿ ಚರ್ಚೆಯಾಗತೊಡಗಿತಲ್ಲದೆ,
ಹರೀಶ್ ಊರುಬೈಲು, ನಾಗೇಶ್, ದಿನೇಶ್ ಸಣ್ಣಮನೆ ಮುಂತಾದವರು ಊರವರ ಪರವಾಗಿ ಸಂಪಾಜೆ ಪೋಲೀಸ್ ಠಾಣೆಗೆ ಪಂಪ್ ಕಳವಿನ ಬಗ್ಗೆ ದೂರು ನೀಡಿದ್ದಾರೆ.
” ಪಂಚಾಯತ್‌ನವರು ಪೋಲೀಸರಿಗೆ ದೂರು ನೀಡಿರುವುದಿಲ್ಲ. ಆದ್ದರಿಂದ ಪತ್ತೆಯಾಗಿಲ್ಲ. ಕಳವಾದ ಪಂಪ್ ಯಾರು ಕೊಂಡೊಯ್ದಿದ್ದಾರೆ ಎಂದು ಊರವರಿಗೆ ತಿಳಿಯಬೇಕು ” ಎಂದು ಅವರು ಮಾಧ್ಯಮದವರಿಗೆ ತಿಳಿಸಿದ್ದಾರೆ.
ಈ ಬಗ್ಗೆ ಪಂಚಾಯತ್ ಅಧ್ಯಕ್ಷರನ್ನು ಸಂಪರ್ಕಿಸಿ ವಿಚಾರಿಸಿದಾಗ ” ನಾವು 6 ತಿಂಗಳ ಹಿಂದೆ ಕಳವಾದ ಕೂಡಲೇ ಪಂಚಾಯತ್‌ನಲ್ಲಿ ಚರ್ಚಿಸಿ, ಕಾರ್ಯದರ್ಶಿ ಕುಮಾರ ಮತ್ತು ಘಟಕದ ನಿರ್ವಾಹಕ ವಿನೋದ್ ಆನೆಹಳ್ಳ ಮೂಲಕ ದೂರು ಕೊಡಿಸಿದ್ದೇವೆ ” ಎಂದು ತಿಳಿಸಿದರು. ಪಂಚಾಯತ್ ನ ಇತರ ಕೆಲವು ಸದಸ್ಯರು ಕೂಡ ಪೋಲೀಸ್ ದೂರು ನೀಡಿರುವುದನ್ನು ದೃಢ ಪಡಿಸಿದ್ದಾರೆ.
ಸಂಪಾಜೆ ಪೋಲೀಸ್ ಹೊರಠಾಣೆಗೆ ದೂರು ಕೊಟ್ಟಾಗ ಪೋಲೀಸರು ಸ್ಥಳಕ್ಕೆ ಬಂದು ನೋಡಿ ಹೋಗಿದ್ದರೆಂದೂ, ಬಳಿಕ ಪಂಚಾಯತ್ ನವರು ಬೆನ್ನು ಬೀಳದ ಕಾರಣ ಪೋಲೀಸ್ ತನಿಖೆ ಪ್ರಗತಿ ಕಂಡಿಲ್ಲವೆಂದೂ ಹೇಳಲಾಗುತ್ತಿದೆ.

Exit mobile version