Site icon Suddi Belthangady

ಅ.31 ರಂದು ಕೆ.ವಿ.ಜಿ. ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸಿಬಿಸಿಟಿ ಎಕ್ಸ್ ರೇ ಘಟಕ, ಸಂಶೋಧನಾ ಕೇಂದ್ರ, ಮತ್ತು ಔಷಧಾಲಯದ ಲೋಕಾರ್ಪಣೆ

 

ಸುಳ್ಯ:ಕೆ.ವಿ.ಜಿ. ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ನೂತನವಾಗಿ ಅಳವಡಿಸಲಾದ ಸಿಬಿಸಿಟಿ ಎಕ್ಸ್ ರೇ ಘಟಕ, ಸಂಶೋಧನಾ ಕೇಂದ್ರ, ಔಷಧಾಲಯ ಮತ್ತು ಅಟೋಮೇಷನ್‌ ಸಾಪ್ಟ್‌ವೇರ್ ಸಿಸ್ಟಂ‌ನ ಉದ್ಘಾಟನೆ ಅ.31ರಂದು ಅಮರಶ್ರೀ ಭಾಗ್‌ನ ಕೆವಿಜಿ ಸಮುದಾಯಭವನದಲ್ಲಿ ನಡೆಯಲಿದೆ. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಪ್ರಧಾನ ಕಾರ್ಯದರ್ಶಿ ಹಾಗು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ. ರೇಣುಕಾಪ್ರಸಾದ್ ಕೆ.ವಿ. ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ನವ ದೆಹಲಿಯ ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯರು ಹಾಗು ಗೋವಾದ ಸರಕಾರಿ ದಂತ ಮಹಾವಿದ್ಯಾಲಯದ ಡೀನ್ ಡಾ. ಇಡಾ ಡೆ ನೊರ‍್ಹೋನ್ನಾ ಡೆ ಎಟೈಡೆ ಹಾಗು ಮಂಗಳೂರಿನ ಎ.ಬಿ. ಶೆಟ್ಟಿ ದಂತ ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಡಾ. ಮಿತ್ರ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಉದ್ಘಾಟನೆಗೆ ಪೂರಕವಾಗಿ ಅ.23 ರಂದು ಶ್ರೀ ಗಣಪತಿ ಹವನವು ದಂತ ಮಹಾವಿದ್ಯಾಲಯದ ಆವರಣದಲ್ಲಿ ನಡೆಯಲಿದೆ.

ಅತ್ಯಾಧುನಿಕ ಎಕ್ಸ್‌ರೇ ವಿಭಾಗ:
ಕರ್ನಾಟಕ ರಾಜ್ಯದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾಗಿರುವ ಸುಳ್ಯದ ಕೆ.ವಿ.ಜಿ. ದಂತ ಮಹಾವಿದ್ಯಾಲಯವನ್ನು
ಅಮರ ಸುಳ್ಯದ ಶಿಲ್ಪಿ ಶಿಕ್ಷಣ ಬ್ರಹ್ಮ ಡಾ. ಕುರುಂಜಿ ವೆಂಕಟ್ರಮಣ ಗೌಡ ಅವರು 1991ರಲ್ಲಿ ಸ್ಥಾಪಿಸಿದರು. ಇದೀಗ ಹೊಸ ಈ ಎಕ್ಸರೇ ಘಟಕವು ದಂತ ಮಹಾವಿದ್ಯಾಲಯದ ವಿವಿಧ ವಿಭಾಗಗಳಲ್ಲಿ ಆಧುನಿಕ ಸೇವೆಯನ್ನು ಒದಗಿಸಲು ಅನುಕೂಲಕರವಾಗಿದೆ. ಸುಳ್ಯ, ಪುತ್ತೂರು, ಮಡಿಕೇರಿ, ಕಾಸರಗೋಡು ಮುಂತಾದ ಪಟ್ಟಣಗಳಲ್ಲಿ ಇರುವ ದಂತವೈದ್ಯರಿಗೂ ಈ ಯಂತ್ರ ಪ್ರಯೋಜನಕಾರಿಯಾಗಲಿದೆ. ಇದರ ಉಪಯೋಗ ಇಂಪ್ಲಾಂಟೋಲಜಿ, ಬಾಯಿಯ ವಿವಿಧ ಶಸ್ತ್ರಚಿಕಿತ್ಸೆ, ಬೇರುನಾಳ ಚಿಕಿತ್ಸೆ ಮೊದಲಾದ ವಿಶೇಷ ಚಿಕಿತ್ಸಾ ವಿಧಾನಗಳಲ್ಲಿ ಇದರ ಅವಶ್ಯಕತೆಯಿರುತ್ತದೆ. ಸಂಶೋಧನಾ ಕೇಂದ್ರವು ಸಂಶೋಧನಾ ಕ್ಷೇತ್ರದಲ್ಲಿ ಸಹಾಯಕವಾಗಲಿದೆ ಎಂದು ಕೆ.ವಿ.ಜಿ. ದಂತ ಮಹಾವಿದ್ಯಾಲಯದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಉಜ್ವಲ್ ಯು.ಜೆ., ಕೆ.ವಿ.ಜಿ. ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ.ಮೋಕ್ಷಾ ನಾಯಕ್ ಹಾಗೂ ಕೆ.ವಿ.ಜಿ. ದಂತ ಮಹಾವಿದ್ಯಾಲಯದ ಗವರ್ನಿಂಗ್ ಕೌನ್ಸಿಲ್ ಸದಸ್ಯರಾದ ಡಾ.ಮನೋಜ್ ಕುಮಾರ್ ಎ.ಡಿ. ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version