Site icon Suddi Belthangady

ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ಎನ್ನುವುದು ಅಪ್ಪಟ ಸುಳ್ಳು : ಕಟ್ಟಡ ಕಾರ್ಮಿಕರ ಸಂಘ ಪ್ರತಿಪಾದನೆ

ಸರಕಾರವು ಕಟ್ಟಡ ಕಾರ್ಮಿಕರಿಗೆ ಉಚಿತವಾಗಿ ಬಸ್ ಪಾಸ್ ವಿತರಿಸುತ್ತದೆ ಎನ್ನುವುದು ಅಪ್ಪಟ ಸುಳ್ಳು. ಸರಕಾರವು ಇದಕ್ಕಾಗಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಒಬ್ಬ ಕಾರ್ಮಿಕನಿಗೆ 14೦೦ ರೂ.ಗಳಂತೆ ಪಡೆಯುತ್ತಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಫೆಡರೇಶನ್ ಸುಳ್ಯ ತಾಲೂಕು ಸಮಿತಿ ತಿಳಿಸಿದೆಯಲ್ಲದೆ ಸರಕಾರದ ಉಚಿತ ಹೇಳಿಕೆಯನ್ನು ಖಂಡಿಸಿದೆ.


ಕಟ್ಟಡ ಕಾರ್ಮಿಕರಿಗೆ ಸರಕಾರ ಉಚಿತವಾಗಿ ಬಸ್ ಪಾಸ್ ಕೊಡುತ್ತಿದೆ ಎಂದಾದರೆ ಕಟ್ಟಡ ಕಾರ್ಮಿಕರು ಸ್ವಂತ ದುಡಿಮೆಯ ಹಣದಿಂದ ನೀಡಿದ ವಂತಿಗೆಯೂ ಸೇರಿರುವ ಕಲ್ಯಾಣ ಮಂಡಳಿ ಖಾತೆಯಿಂದ ಸರಕಾರ ಹಣ ಪಡೆಯುತ್ತಿರುವುದೇಕೆ? ಎಂದು ಪ್ರಶ್ನಿಸಿದ ಕಟ್ಟಡ ಕಾರ್ಮಿಕರ ಸಂಗಟನೆಯ ಗೌರವಾಧ್ಯಕ್ಷ ಕೆ.ಪಿ.ಜಾನಿಯವರು ಸರಕಾರ ಕಾರ್ಮಿಕರ ಸಂಘಟನೆಗಳನ್ನು ದುರ್ಬಲಗೊಳಿಸಿ ನಾಶಪಡಿಸಲು ನೋಡುತ್ತಿದೆ. ಬಸ್ ಪಾಸ್ ಸೇರಿದಂತೆ ಕಲ್ಯಾಣ ಮಂಡಳಿಯಿಂದ ದೊರಕುವ ಇತರ ಸೌಲಭ್ಯಗಳಿಗೆ ಅರ್ಜಿ ಅಪ್‌ಲೋಡ್ ಮಾಡುವ ಅಧಿಕಾರವನ್ನು ಸಂಘಟನೆಗಳಿಗೆ ನೀಡದೆ ಖಾಸಗಿ ಸೈಬರ್‌ಗಳಿಗೆ ಮಾತ್ರ ನೀಡುತ್ತಿದೆ ಇದು ಕಾರ್ಮಿಕ ಸಂಘಟನೆಯನ್ನು ವ್ಯವಸ್ಥಿತವಾಗಿ ತುಳಿಯಲು ಮಾಡುತ್ತಿರುವ ಪ್ರಯತ್ನ. ಒಂದು ವೇಳೆ ಎಲ್ಲಾ ಕಾರ್ಮಿಕರು ಸೈಬರ್ ಸೆಂಟರ್‌ಗಳ ಮೂಲಕವೇ ಅರ್ಜಿಗಳನ್ನು ಹಾಕುವಂತಾಗಿ ಕಾರ್ಮಿಕ ಸಂಘಟನೆಗಳ ಕಚೇರಿಯನ್ನು ಸಂಪರ್ಕಿಸದಿರುವ ವ್ಯವಸ್ಥೆ ಆದರೆ ಮುಂದೆ ಸರಕಾರ ಕಾರ್ಮಿಕರಿಗೆ ತೊಂದರೆ ಮಾಡಿದಾಗ ಅದನ್ನು ಕೇಳಲು ಮತ್ತು ಪ್ರತಿಭಟನೆ ಮಾಡಲು ಸೈಬರ್ ಸೆಂಟರ್‌ಗಳ ಮಾಲಕರು ಬರುತ್ತಾರೆಯೇ? ಎಂದು ಅವರು ಪ್ರಶ್ನಿಸಿದ್ದಾರೆ. ಸಿಐಟಿಯು ಎಡಪಂಥೀಯ ಹಿನ್ನಲೆಯ ಕಾರ್ಮಿಕ ಸಂಘಟನೆ ಎಂಬುದು ಸರಕಾರದ ನಿಲುವಾದರೆ ಸರಕಾರ ನಡೆಸುವ ಪಕ್ಷಗಳು ಕಾರ್ಮಿಕ ಸಂಘಟನೆ ಕಟ್ಟಿಕೊಂಡು ಅವರ ಪರವಾಗಿ ದುಡಿಯಲಿ ಎಂದು ಹೇಳಿದ ಕೆ.ಪಿ.ಜಾನಿಯವರು, ೨೦೧೯ರಿಂದ ಈಚೆಗೆ ಮದುವೆ, ವಿದ್ಯಾರ್ಥಿ ವೇತನ, ಆರೋಗ್ಯ ಚಿಕಿತ್ಸೆಗಳಿಗೆ ಸಂಬಂಧಿಸಿದ 6೦೦೦೦ ದಷ್ಟು ಅರ್ಜಿಗಳು ವಿಲೇವಾರಿಯಾಗದೆ ಬಾಕಿಯಾಗಿದೆ. ಕಾರ್ಮಿಕರ ಪೆನ್ಷನ್, ಮೆಡಿಕಲ್ ಸೌಲಭ್ಯ, ಮಕ್ಕಳ ವಿದ್ಯಾರ್ಥಿವೇತನ, ವಿವಾಹಕ್ಕೆ ನೆರವು ಮೊದಲಾದ ಅಗತ್ಯಗಳಿಗಾಗಿ ಕಾಯ್ದಿರಿಸಿದ ಹಣದಿಂದ ವರ್ಷಕ್ಕೆ 168 ಕೋಟಿ ರೂ.ನಷ್ಟು ಕೇವಲ ಬಸ್ ಪಾಸ್‌ನ ಹೆಸರಲ್ಲಿ ತೆಗೆದರೆ ಬಡ ಕಾರ್ಮಿಕರ ಭವಿಷ್ಯದ ಯೋಜನೆಗಳಿಗೆ ಮತ್ತೇನು ಉಳಿಯಲಿದೆ? ಈಗಾಗಲೇ ಸರಕಾರ ೧ ಲಕ್ಷ ಜನರಿಗೆ ಬಸ್ ಪಾಸ್ ವಿತರಿಸಿರುವುದಾಗಿ ಹೇಳುತ್ತಿದೆ. ನಮ್ಮ ಸಿಐಟಿಯು ಸಂಘಟನೆಯ ಶೇ. 99  ಕಾರ್ಮಿಕರಿಗೆ ಈ ಸೌಲಭ್ಯ ದೊರೆತಿಲ್ಲ. ಹಾಗಾದರೆ ಯಾರಿಗೆ ಹೋಗಿದೆ? ಈ ಎಲ್ಲಾ ವಿಚಾರಗಳನ್ನು ಮುಂದಿಟ್ಟು ತೀವ್ರತರವಾದ ಹೋರಾಟವನ್ನು ಕಟ್ಟಡ ಕಾರ್ಮಿಕರ ಪೆಢರೇಶನ್ ಮಾಡಲಿದೆ ಎಂದು ಅವರು ಹೇಳಿದರು.
ಕಟ್ಟಡ ಕಾರ್ಮಿಕರ ಪೆಢರೇಶನ್‌ನ ಸುಳ್ಯ ತಾಲೂಕು ಅಧ್ಯಕ್ಷ ವಿಶ್ವನಾಥ ನೆಲ್ಲಿಬಂಗಾರಡ್ಕ, ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಜಯನಗರ, ಖಜಾಂಜಿ ಗಣೇಶ್ ವಿ. ಕೊಡಿಯಾಲಬೈಲು, ಜೊತೆ ಕಾರ್ಯದರ್ಶಿ ವಿಜಯ್ ಮಾಲತೇಶ್ ಮೇಸ್ತ್ರಿ, ಉಪಾಧ್ಯಕ್ಷ ಶಿವರಾಮ ಗೌಡ, ಕೃಷಿ ದಿನಗೂಲಿ ಮತ್ತು ಉದ್ಯೋಗ ಖಾತರಿ ಕಾರ್ಮಿಕ ಸಂಘದ ಸಂಪಾಜೆ ವಲಯಾಧ್ಯಕ್ಷ ವಸಂತ ಪೆಲತ್ತಡ್ಕ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Exit mobile version