Site icon Suddi Belthangady

ಅ.16: ಕನಕಮಜಲು ಸಹಕಾರ ಸಂಘದ ಶತಮಾನೋತ್ಸವ ಮತ್ತು ಅಡ್ಕಾರು ಗೋದಾಮು ಕಟ್ಟಡದ ಉದ್ಘಾಟನೆ ಹಿನ್ನೆಲೆ

 

ಸಹಕಾರ ಸಂಘದ ವತಿಯಿಂದ ಪತ್ರಿಕಾಗೋಷ್ಠಿ

ಶತ ಸಂವತ್ಸರಗಳನ್ನು ದಾಟಿ ಮುನ್ನಡೆಯುತ್ತಿರುವ ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಮಾರಂಭ ಹಾಗೂ ಅಡ್ಕಾರಿನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಗೋದಾಮು ಕಟ್ಟಡದ ಉದ್ಘಾಟನೆಯು ಅ.16ರಂದು ಜಾಲ್ಸೂರು ಗ್ರಾಮದ ಅಡ್ಕಾರಿನಲ್ಲಿ ಜರುಗಲಿದೆ ಎಂದು ಸಹಕಾರ ಸಂಘದ ಅಧ್ಯಕ್ಷ ಡಾ. ಗೋಪಾಲಕೃಷ್ಣ ಭಟ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಇಂದು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕನಕಮಜಲು ಪ್ರಾ.ಕೃ. ಪ.ಸ.ಸಂಘವು 1918ರಲ್ಲಿ ಸ್ಥಾಪನೆಗೊಂಡಿತ್ತು. ಮೊದಲಿಗೆ ಜಾಲ್ಸೂರು ಹಾಗೂ ಕನಕಮಜಲಿನಲ್ಲಿ ಪ್ರತ್ಯೇಕ ಪ್ರತ್ಯೇಕವಾಗಿ ಸಂಘವು ಸ್ಥಾಪನೆಗೊಂಡಿದ್ದು, ನಂತರದ ದಿನಗಳಲ್ಲಿ ಎರಡೂ ಸಹಕಾರಿ ಸಂಘಗಳು ವಿಲೀನಗೊಂಡು ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಜಾಲ್ಸೂರು ಎಂದು ನಾಮಕರಣಗೊಂಡಿದ್ದು, ಸಂಘವು ಈಗ ಶತಮಾನದ ಸಂಭ್ರಮದಲ್ಲಿದೆ ಎಂದರು.
ಕನಕಮಜಲಿನ ಪ್ರಧಾನ ಕಛೇರಿಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ.


ಅಡ್ಕಾರು ನೂತನ ಗೋದಾಮು ಕಟ್ಟಡವನ್ನು ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಉದ್ಘಾಟಿಸಲಿದ್ದಾರೆ. ಸಭಾ ಕಾರ್ಯಕ್ರಮವನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಅವರು ಉದ್ಘಾಟಿಸಲಿದ್ದಾರೆ. ಸಚಿವ ಎಸ್. ಅಂಗಾರ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲು ಅವರು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಅಪರಾಹ್ನ ಸಮಾರೋಪ ಸಮಾರಂಭ ನಡೆಯಲಿದ್ದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸೇರಿದಂತೆ ಗಣ್ಯ ಅತಿಥಿಗಳು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಸಹಕಾರ ಸಂಘದ ಉಪಾಧ್ಯಕ್ಷ ನಾರಾಯಣ ಬೊಮ್ಮೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಹಿತ್ ಕುಮಾರ್ ಕುದ್ಕುಳಿ, ನಿರ್ದೇಶಕರುಗಳಾದ ಕರುಣಾಕರ ರೈ ಕುಕ್ಕಂದೂರು, ಗಣೇಶ್ ಅಂಬಾಡಿಮೂಲೆ ಮೂಲೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Exit mobile version