Site icon Suddi Belthangady

ದಸರಾ ಹೆಚ್ಚುವರಿ ರಜೆ ಇಡೀ ಜಿಲ್ಲೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಆದೇಶ

 

 

ದಸರಾ ಹಬ್ಬಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ಈ ಹಿಂದೆ ಮಂಗಳೂರು ತಾಲೂಕು ವ್ಯಾಪ್ತಿಯ ಶಾಲೆಗಳಿಗೆ ಸೆ.28ರಿಂದ ಅಕ್ಟೋಬರ್ 1ರವರೆಗೆ ನೀಡಲಾಗಿದ್ದ ಹೆಚ್ಚುವರಿ ನಾಲ್ಕು ದಿನಗಳ ರಜೆಯನ್ನು ದ.ಕ.ಜಿಲ್ಲಾ ವ್ಯಾಪ್ತಿಗೆ ವಿಸ್ತರಿಸಿ ದ.ಕ.ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

 

ಈಗಾಗಲೆ ರಾಜ್ಯದ ಎಲ್ಲಾ ಶಾಲೆಗಳಿಗೆ ಶೈಕ್ಷಣಿಕ ಮಾರ್ಗಸೂಚಿಯಂತೆ ಅಕ್ಟೋಬರ್ 3ರಿಂದ ಅಕ್ಟೋಬರ್ 16ರವರೆಗೆ ರಜೆಯನ್ನು ನಿಗದಿಪಡಿಸಲಾಗಿದೆ. ಈ ಮಧ್ಯೆ ಸೆ.26ರಿಂದ ಆರಂಭಗೊಳ್ಳುವ ಮಂಗಳೂರು ದಸರಾ ಹಬ್ಬದ ಹಿನ್ನೆಲೆಯಲ್ಲಿ ಸೆ.26ರಿಂದಲೇ ರಜೆ ನೀಡುವಂತೆ ಪೋಷಕರು, ಜನಪ್ರತಿನಿಧಿಗಳು ಸರಕಾರಕ್ಕೆ ಮನವಿ ಮಾಡಿದ್ದರು. ಅದಕ್ಕೆ ಶಿಕ್ಷಣ ಸಚಿವರು ಪೂರಕವಾಗಿ ಸ್ಪಂದಿಸಿದ್ದರೂ ಕೂಡ ರಾಜ್ಯ ಸರಕಾರವು ಶುಕ್ರವಾರ ಪರಿಷ್ಕೃತ ಆದೇಶ ಹೊರಡಿಸಿ ಮಂಗಳೂರು ತಾಲೂಕು ವ್ಯಾಪ್ತಿಯ ಎಲ್ಲಾ ಸರಕಾರಿ, ಅನುದಾನಿತ, ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಸೆ.28ರಿಂದ ಅಕ್ಟೋಬರ್ 1ರವರೆಗೆ ರಜೆಯನ್ನು ಘೋಷಿಸಿತ್ತು. ಇದೀಗ ಅದನ್ನು ದ.ಕ.ಜಿಲ್ಲೆಗೆ ವಿಸ್ತರಿಸಲಾಗಿದೆ.

ಅಕ್ಟೋಬರ್ 2ರ ರವಿವಾರ ಕಡ್ಡಾಯವಾಗಿ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಆಯೋಜಿಸುವಂತೆ ಸೂಚಿಸಲಾಗಿದೆ. ಅಲ್ಲದೆ ವಿದ್ಯಾರ್ಥಿಗಳಿಗೆ ನೀಡಲಾದ ಈ ನಾಲ್ಕು ಹೆಚ್ಚುವರಿ ರಜೆಗಳನ್ನು ನವೆಂಬರ್‌ ತಿಂಗಳಿನ ನಾಲ್ಕು ಶನಿವಾರ ಪೂರ್ಣ ದಿನದ ತರಗತಿ ಮತ್ತು ಎರಡು ರವಿವಾರ ಪೂರ್ಣ ಶಾಲಾ ಕೆಲಸದ ದಿನಗಳಾಗಿ ನಡೆಸಿ ರಜೆಯನ್ನು ಸರಿದೂಗಿಸುವಂತೆ ಆದೇಶದಲ್ಲಿ ತಿಳಿಸಿದ್ದಾರೆ.

Exit mobile version