Site icon Suddi Belthangady

ಸುಳ್ಯ ಗಣೇಶೋತ್ಸವ ಧಾರ್ಮಿಕ ಸಭೆ

 

 

ಸಾವಿರಾರು ವರ್ಷದ ರಾಮರಾಜ್ಯದ ಕನಸು ನನಸಾಗುವ ಪರ್ವ ಕಾಲ ಸನ್ನಿಹಿತವಾಗುತ್ತಿದೆ : ಕಶೆಕೋಡಿ

ವೈದಿಕ ಕೈಂಕರ್ಯದಲ್ಲಿ ವೈಜ್ಞಾನಿಕತೆ ಇದೆ. ಶ್ಲೋಕ ಹವನಗಳಲ್ಲಿ ತಂತ್ರಜ್ಞಾನ ಇರುವುದು. ನಮ್ಮಲ್ಲಿರುವ ವೈದಿಕ ತಂತ್ರಜ್ಞಾನದ ಮುಂದೆ ವಿಜ್ಞಾನಿಗಳ ಸಾಧನೆ ಏನು ಇಲ್ಲ. ಗಣೇಶೋತ್ಸವದಂತಹ ಧಾರ್ಮಿಕ ಕಾರ್ಯದಲ್ಲಿ ಅಳಿಲ ಸೇವೆಯಲ್ಲಿ ತೊಡಗಿಸಿಕೊಂಡಾಗ ಫಲಶ್ರುತಿ ಇದ್ದೆ ಇರುವುದು.ಅನುಕರಣೆಯಿಂದ ಜೀವನದಲ್ಲಿ ಎಲ್ಲವನ್ನೂಕಳೆದುಕೊಳ್ಳಬೇಕಾಗಬಹುದು
ಎಂದು ಸುಳ್ಯದಲ್ಲಿ ನಡೆದ 65 ನೇ ವರ್ಷದ ಗಣೇಶೋತ್ಸವದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ರವರು ಉಪನ್ಯಾಸ ನೀಡಿದರು.

 

ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ ಮತ್ತು ಸಾರ್ವಜನಿಕ ದೇವತಾರಾಧನಾ ಸಮಿತಿ ಇದರ ಆಶ್ರಯದಲ್ಲಿ ನಡೆಯುತ್ತಿರುವ 65 ನೇ ವರ್ಷದ ಗಣೇಶೋತ್ಸವದಲ್ಲಿ ಅವರು ಉಪನ್ಯಾಸ ನೀಡಿದರು.

ಆದರ್ಶ ಪುರುಷ ರಾಮಚಂದ್ರ ಭರತ ವರ್ಷವನ್ನು ಅಳಬೇಕಾದರೆ ದುಷ್ಟ ರಾಕ್ಷಸರನ್ನು ಅವರಿರುವ ಮಣ್ಣಿನ ಮೇಲೆ ದಾಳಿ ಮಾಡಿ ಸಂಹರಿಸಿದನು. ಪ್ರಸ್ತುತ ನಮ್ಮ ದೇಶದ ಮೇಲೆ ಆಕ್ರಮಿಸುವ ದುಷ್ಟ ಶಕ್ತಿಗಳನ್ನು ಮಟ್ಟ ಹಾಕಲು ಅವರ ಮಣ್ಣಿಗೆ ಹೋಗಿ ನಾಶ ಪಡಿಸಬಲ್ಲ ಸಾಮರ್ಥ್ಯ ಭಾರತ ದೇಶ ಹೊಂದಿದೆ.
11 ಸಾವಿರ ವರ್ಷಗಳ ಕಾಲ ರಾಮಚಂದ್ರ ಪ್ರಭು ಭರತವರ್ಷವನ್ನಾಳಿದ್ದಾನೆ. ನಾವೆಲ್ಲರೂ ಪುಣ್ಯವಂತರು ಇದೀಗ ರಾಮರಾಜ್ಯದ ಕನಸು ಸಾಕಾರಗೊಳ್ಳುತ್ತಿರುವ ಸಕಾಲ ಸನ್ನಿಹಿತವಾಗಿದೆ. ನಮ್ಮ ದೇಶ ಕೃಷಿ ಪ್ರಧಾನ ದೇಶ ಇನ್ನೂ ಆಗಿಲ್ಲ. ನಮ್ಮ ಬೆಳೆಗಳಿಗೆ ನಾವೇ ಮೌಲ್ಯ ನಿಗದಿಪಡಿಸುವ ದಿನ ಬಂತೆಂದರೆ ಆಗ ಕೃಷಿ ಪ್ರಧಾನ ದೇಶ ಎಂದು ಕರೆಯಬಹುದು. ಧರ್ಮಪಾಶ,ಅಂಕುಶ, ದಂತ, ಮೋಕ್ಷವೆಂಬ ಪ್ರತೀಕದ ವಿದ್ಯೆಗೆ ಅಧಿಪತಿಯಾಗಿರುವ ಗಣೇಶನ ಆರಾಧನೆಯ ಅಳಿಲ ಸೇವೆಯಲ್ಲಿ ಭಾಗಿಯಾಗಿ ಕೃತಾರ್ಥತೆಯನ್ನು ಪಡೆಯೋಣ ಎಂದು ಅವರು ಕರೆ ನೀಡಿದರು.

ವೇದಿಕೆಯಲ್ಲಿ ಸಿದ್ಧಿವಿನಾಯಕ ಸೇವಾ ಸಮಿತಿ ಗೌರವಾಧ್ಯಕ್ಷ ಗೋಪಾಲಕೃಷ್ಣ ಕೆ.ಎಸ್, ಹಿರಿಯರಾದ ಐಡಿಯಲ್ ಅಟೋ ವರ್ಕ್ಸ್ ಮಾಲಕ ಭಾಸ್ಕರ ಐಡಿಯಲ್ ಉಪಸ್ಥಿತರಿದ್ದರು.

ಸಮಿತಿ ಪ್ರಧಾನ ಕಾರ್ಯದರ್ಶಿ ಶಶಿಧರ ಎಂ.ಜೆ.ಕೊಯಿಕುಳಿ ಸ್ವಾಗತಿಸಿದರು. ಗೋಪಾಲಕೃಷ್ಣ ಕೆ.ಎಸ್.ವಂದಿಸಿದರು. ಶ್ರೀಮತಿ ಲತಾಶ್ರೀ ಸುಪ್ರಿತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ ಶಾರದಾ ಆರ್ಟ್ಸ್ ಐಸಿರಿ ಕಲಾವಿದೆರ್ ಮಂಜೇಶ್ವರ ಇವರಿಂದ ತುಳು ಹಾಸ್ಯಮಯ ನಾಟಕ “ಮಲ್ಲ ಸಂಗತಿಯೇ” ಪ್ರದರ್ಶನಗೊಂಡಿತು. ಸಾವಿರಾರು ಸಂಖ್ಯೆಯಲ್ಲಿ ಕಲಾಭಿಮಾನಿಗಳು ಸೇರಿದ್ದರು.

 

Exit mobile version