Site icon Suddi Belthangady

ಕಪ್ ಕತಾರ್: ಪಿಫಾ ವರ್ಲ್ಡ್ ಮೆಡಿಕಲ್ ಟೀಮಿಗೆ ತುಳುನಾಡಿನ ಕುವರಿ ಪ್ರತಿಭಾ ಆಯ್ಕೆ

ಹೊಕ್ಕಡಿಗೋಳಿ: ಮೂಲತ ಬಂಟ್ವಾಳ ತಾಲೂಕಿನ ಪ್ರತಿಭಾ ಎನ್.ದರ್ಖಾಸು ಅವರಿಗೆ ವರ್ಲ್ಡ್ ಕಪ್ ಮೆಡಿಕಲ್ ಟೀಮಿನಲ್ಲಿ ಸೇವೆ ಸಲ್ಲಿಸುವ ಅವಕಾಶ ಒದಗಿ ಬಂದಿದೆ.

ಕತಾರ್ ಪಿಫಾ ವರ್ಲ್ಡ್ ಕಪ್ ಮೆಡಿಕಲ್ ಟೀಮಿಗೆ ಸೇವೆ ಸಲ್ಲಿಸಲು ತುಳುನಾಡಿನ ಕುವರಿ ಪ್ರತಿಭಾರವರು ಆಯ್ಕೆಯಾಗಿದ್ದು ಎಲ್ಲರಲ್ಲೂ ಸಂತಸ ವ್ಯಕ್ತವಾಗಿದೆ.

ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಡಂಬೆಟ್ಟು ಗ್ರಾಮದ ದೋಟ ದರ್ಖಾಸು ನಿವಾಸಿ ನವೀನ್ ಪೂಜಾರಿಯವರ ಪತ್ನಿ ಪ್ರತಿಭಾ ಎನ್.ದರ್ಖಾಸು ಎಂಬವರು ಇದೀಗ ಕತಾರಿನ ವರ್ಲ್ಡ್ ಕಪ್ ಮೆಡಿಕಲ್ ಟೀಮಿನಲ್ಲಿ ಸೇವೆ ಸಲ್ಲಿಸಲು ಆಯ್ಕೆಯಾದವರು.

ಈ ಮೂಲಕ ಇವರು ವರ್ಲ್ಡ್ ಕಪ್ ಮೆಡಿಕಲ್ ಟೀಮಿಗೆ ಆಯ್ಕೆಯಾದ ಕರ್ನಾಟಕದ ಏಕೈಕ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಸಿದ್ಧಕಟ್ಟೆ ಸೂರಂಡೆ ನಿವಾಸಿಗಳಾದ ನಾರಾಯಣ ಪೂಜಾರಿ ಮತ್ತು ಶ್ರೀಮತಿ ದಂಪತಿಗಳ‌ ಪುತ್ರಿಯಾದ ಪ್ರತಿಭಾ ಅವರು ವಾಮದಪದವು ಸಮೀಪದ ಕುಡಂಬೆಟ್ಟು ದೋಟ ದರ್ಖಾಸು ನಿವಾಸಿ ನವೀನ್ ಪೂಜಾರಿಯವರನ್ನು ವಿವಾಹವಾಗಿದ್ದು, ಸಂಸಾರ ಸಹಿತ ಕಳೆದ ಕೆಲವು ವರ್ಷಗಳಿಂದ ದೋಹಾ ಕತಾರಿನಲ್ಲಿ ನೆಲೆಯಾಗಿದ್ದಾರೆ.

ಪ್ರತಿಭಾ ಎನ್.ದರ್ಖಾಸು ಅವರು ಕತಾರಿನ ಹಾಮದ್ ಮೆಡಿಕಲ್ ಕಾರ್ಪೋರೇಶನ್ ಸರಕಾರಿ ಅಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಕೊರೊನಾ ಸಹಿತ ಇತರ ಸಂದರ್ಭದಲ್ಲಿನ ಇವರ ವಿಶೇಷ ಸೇವೆಯನ್ನು ಗುರುತಿಸಿ ಈಗಾಗಲೇ ಗೌರವಿಸಲಾಗಿತ್ತು.

ಇದೀಗ ಇವರು ಆರೋಗ್ಯ ಸೇವಾ ಕ್ಷೇತ್ರದಲ್ಲಿ ಸಲ್ಲಿಸಿದ ಅನನ್ಯ ಸೇವೆಯನ್ನು ಪರಿಗಣಿಸಿ ಕತಾರ್ ಪಿಫಾ ವರ್ಲ್ಡ್ ಕಪ್ ಮೆಡಿಕಲ್ ಟೀಮಿನಲ್ಲಿ ನರ್ಸಿಂಗ್ ಇನ್ಚಾರ್ಜ್ ಆಗಿ ಸೇವೆ ಸಲ್ಲಿಸಲು ಆಯ್ಕೆ ಮಾಡಲಾಗಿದೆ.

ಈ ಅಪೂರ್ವ ಸೇವೆಗೆ ಆಯ್ಕೆಯಾದ ಪ್ರತಿಭಾ ಎನ್.ದರ್ಖಾಸು ಅವರಿಗೆ ತುಳುನಾಡಿನಾದ್ಯಾಂತ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Exit mobile version