Site icon Suddi Belthangady

ವೇಣೂರು ಕಾಲೇಜು: ಪ್ರತಿಭಾ ಪುರಸ್ಕಾರ, ತರಗತಿ ಕೊಠಡಿಗಳ ಉದ್ಘಾಟನೆ

ವೇಣೂರು: ಇಲ್ಲಿಯ ಸ.ಪ.ಪೂ. ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಅನುದಾನದಡಿ ನಿರ್ಮಿಸಲಾದ ತರಗತಿ ಕೊಠಡಿಗಳ ಉದ್ಘಾಟನೆ ಸಮಾರಂಭವು ನ.22ರಂದು ಕಾಲೇಜಿನ ಸುವರ್ಣ ಸ್ಮೃತಿ ಸಭಾಭವನದಲ್ಲಿ ಜರುಗಿತು.

ವೇಣೂರು ಗ್ರಾ.ಪಂ. ಅಧ್ಯಕ್ಷರಾದ ನೇಮಯ್ಯ ಕುಲಾಲ್ ಅವರು ಅಧ್ಯಕ್ಷತೆ ವಹಿಸಿದ್ದರು. ದ.ಕ. ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಸಿ.ಡಿ. ಜಯಣ್ಣ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಸುಂದರ ಹೆಗ್ಡೆ ಬಿ.ಇ., ಮಂಗಳೂರು ಎಂಆರ್‌ಪಿಎಲ್‌ನ ಜನರಲ್ ಮೆನೇಜರ್ ಕೇಶವ ಕುಮಾರ್‌ ಕೆ., ವೇಣೂರು ಗ್ರಾ.ಪಂ. ಉಪಾಧ್ಯಕ್ಷೆ ಪುಷ್ಪಾ ಡಿ., ಸದಸ್ಯರಾದ ಶುಭ, ದಿನೇಶ್ ತಾರಿಪಡ್ಪು, ಸಂಭಾಷಿಣಿ, ಮಲ್ಲಿಕಾ ಹೆಗ್ಡೆ, ವಿದ್ಯಾರ್ಥಿ ಸಂಘದ ನಾಯಕ ಸಮ್ಯಕ್, ನಾಯಕಿ ತನುಶ್ರೀ ಉಪಸ್ಥಿತರಿದ್ದರು.

ಉದ್ಘಾಟನೆಗೊಂಡ ಕಾಮಗಾರಿಗಳು:
ಎಂಆರ್‌ಪಿಎಲ್‌ನ ಸಿಎಸ್‌ಆರ್ ನಿಧಿ ಹಾಗೂ ನಬಾರ್ಡ್ ಯೋಜನೆಯಡಿ ನಿರ್ಮಾಣಗೊಂಡ ತರಗತಿ ಕೊಠಡಿಗಳು ಹಾಗೂ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ನಿರ್ಮಿಸಲಾದ ವಿದ್ಯುತ್ತೀಕರಣ ಕಾಮಗಾರಿಯ ಉದ್ಘಾಟನೆ ನೆರವೇರಿತು. ವೇಣೂರು ಸಿಎ ಬ್ಯಾಂಕ್, ಕಾಲೇಜು ಸಂಚಿತ ನಿಧಿ, ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಸಹಕಾರದಲ್ಲಿ ನಿರ್ಮಿಸಲಾದ ರಸಾಯನಶಾಸ್ತ್ರ ವಿಭಾಗದ ಪ್ರಯೋಗಾಲಯದ ಪ್ಲಾಟ್‌ಪಾರ್ಮ್ ಅದರ ಉದ್ಘಾಟನೆಯೂ ಜರುಗಿತು.

ಸಮ್ಮಾನ-ಪ್ರತಿಭಾ ಪುರಸ್ಕಾರ-ಬಹುಮಾನ ವಿತರಣೆ:
ತರಗತಿ ಕೊಠಡಿ ನಿರ್ಮಾಣಕ್ಕೆ ಅನುದಾನ ನೀಡಿದ ಎಂಆರ್‌ಪಿಎಲ್‌ನ ಜನರಲ್ ಮೆನೇಜರ್ ಕೇಶವ ಕುಮಾರ್ ಕೆ., ರಸಾಯನಶಾಸ್ತ್ರ ವಿಭಾಗದ ಪ್ರಯೋಗಾಲಯದ ಪ್ಲಾಟ್‌ಪಾರ್ಮ್ ನಿರ್ಮಾಣಕ್ಕೆ ಅನುದಾನ ಒದಗಿಸಿದ ಸಿ.ಎ. ಬ್ಯಾಂಕ್ ಅಧ್ಯಕ್ಷ ಸುಂದರ ಹೆಗ್ಡೆ ಬಿ.ಇ. ಹಾಗೂ ಕಟ್ಟಡದ ಗುತ್ತಿಗೆದಾರ ಪ್ರಕಾಶ್ ಜೈನ್ ಸಿದ್ದಕಟ್ಟೆ ಅವರನ್ನು ಸಮ್ಮಾನಿಸಲಾಯಿತು. 2020-21 ಮತ್ತು 2021-೨22ನೇ ಸಾಲಿನಲ್ಲಿ ಶೈಕ್ಷಣಿಕವಾಗಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಆಟೋಟ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು. ಪ್ರತಿಭಾ ಪುರಸ್ಕಾರದ ನಿರ್ವಹಣೆಯನ್ನು ಉಪನ್ಯಾಸಕಿ ತಾರಮತಿ ಶೆಟ್ಟಿ ನಿರ್ವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ವಿಜೇತರ ಬಹುಮಾನ ವಿತರಣೆಯ ನಿರ್ವಹಣೆಯನ್ನು ಉಪನ್ಯಾಸಕಿ ಸುರೇಖಾ, ಆಟೋಟಗಳ ವಿಜೇತರ ಪಟ್ಟಿಯನ್ನು ಉಪನ್ಯಾಸಕಿ ನಳಿನಾಕ್ಷಿ ವಾಚಿಸಿದರು.

ಕಾಲೇಜಿನ ಪ್ರಾಚಾರ್ಯ ಗಂಗಾಧರ ಅವರು ಸ್ವಾಗತಿಸಿ, ಪ್ರಸ್ತಾವಿಸಿದರು. ಉಪನ್ಯಾಸಕಿ ಶಾಲಿನಿ ಬಿ. ಕರ್ಕೇರಾ ನಿರೂಪಿಸಿ, ಉಪನ್ಯಾಸಕಿ ಸೆಲಿನ್ ಪಿ.ಜೆ. ವಂದಿಸಿದರು.

Exit mobile version