Site icon Suddi Belthangady

ರೈತನ ಕೃಷಿ ಜಮೀನನ್ನು ಕಾನೂನು ಬಾಹಿರವಾಗಿ ಮೂರನೇ ವ್ಯಕ್ತಿಗೆ ಮಂಜೂರು ಮಾಡಿರುವುದರ ವಿರುದ್ಧ ಹೋರಾಟ, ಪತ್ರಿಕಾಗೋಷ್ಠಿ


ಬೆಳ್ತಂಗಡಿ: ಕಣಿಯೂರು ಗ್ರಾಮದ ಪದ್ಮುಂಜದ ಸರ್ವೆ ನಂಬ್ರ 113ರಲ್ಲಿ ರೈತನ ಕೃಷಿ ಜಮೀನನ್ನು ಮೂರನೇ ವ್ಯಕ್ತಿಗೆ ಕಾನೂನು ಬಾಹಿರವಾಗಿ ಮಂಜೂರು ಮಾಡಿರುವುದರ ವಿರುದ್ಧ ಜಿಲ್ಲಾ ಮಟ್ಟದಲ್ಲಿ ಹೋರಾಟ ನಡೆಸುವುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಹೇಳಿದರು.

ಅವರು ನ.14 ರಂದು ಬೆಳ್ತಂಗಡಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ರೈತ 45 ವರ್ಷಗಳಿಂದಲೂ ಅನುಭೋಗ ಹೊಂದಿ ಗೇರು, ಅಡಿಕೆ, ಮಾವು ಇನ್ನಿತರ ಬೆಳೆಗಳನ್ನು ಬೆಳೆಯುತ್ತಿದ್ದು, ಕುಮ್ಕಿ ಹಕ್ಕನ್ನು ವಿರಹಿತಗೊಳಿಸದೇ ಯಾವುದೇ ಮ್ಯುಟೇಶನ್ ಇಲ್ಲದೇ ಕೇವಲ ಪಹಣಿಯಲ್ಲಿ `ವಿಲಿಯವರಿಗೆ’ಎಂದು ದಾಖಲಾತಿಯನ್ನು ಮಾಡಿ ಅದನ್ನು ಮಿಲಿಟರಿಯವರಿಗೆ ಕಾದಿರಿಸಿದ ಭೂಮಿ ಎಂಬ ನೆಪದಲ್ಲಿ ಮಂಜೂರಾತಿ ನೀಡಿ ರೈತ ಕುಟುಂಬವನ್ನು ವಂಚಿಸಿದೆ ಎಂದು ಆರೋಪಿಸಿದರು.

ರೈತರ ಅಕ್ರಮ-ಸಕ್ರಮ ಅರ್ಜಿಯನ್ನು ವಜಾಗೊಳಿಸಿ ಮೂರನೇ ವ್ಯಕ್ತಿಗೆ ಮಂಜೂರು ಮಾಡುವಲ್ಲಿ ನೀಡಿದ ವರದಿಯನ್ನು ಪ್ರಶ್ನಿಸಿ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ ಮನವಿಗೆ ನ್ಯಾಯಾಲಯ ಸ್ಟೇಟಸ್ಕೋ ನೀಡಿದೆ. ಆದರೂ ಕಂದಾಯ ಇಲಾಖೆ ಭೂ ಸ್ವಾಧೀನಕ್ಕೆ ಮುಂದಾಗಿ, ನ್ಯಾಯಾಲಯದ ತಡಯಾಜ್ಞೆ ನೀಡಿದಾಗ ಪ್ರಕ್ರಿಯೆಯನ್ನು ನಿಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ಪ.ಜಾತಿ ಮತ್ತು ಪಂಗಡದ ವ್ಯಕ್ತಿಗಳಿಬ್ಬರನ್ನು ಜಾತಿ ನಿಂಧನೆ ಮಾಡಿದ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು, ದೂರು ದಾಖಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡೀಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಪ್ರೇಮನಾಥ ಶೆಟ್ಟಿ ಬಾಳ್ತಿಲ, ಕಾರ್ಮಿಕ ಮುಖಂಡ ರಾಮಣ್ಣ ವಿಟ್ಲ, ದಲಿತ ಹಕ್ಕುಗಳ ಸಮಿತಿ ಮುಖಂಡ ಶೇಖರ ಲಾಯಿಲ, ಯುವ ರೈತ ಘಟಕ ಜಿಲ್ಲಾಧ್ಯಕ್ಷ ಆದಿತ್ಯನಾರಾಯಣ ಕೊಲ್ಲಾಜೆ, ಜಿಲ್ಲಾ ಗೌರವಾಧ್ಯಕ್ಷ ಸುರೇಂದ್ರ ಕೋರ್ಯ ಉಪಸ್ಥಿತರಿದ್ದರು.

Exit mobile version