Site icon Suddi Belthangady

ಸಂಸ್ಕಾರ ಮತ್ತು ಸಂಸ್ಕೃತಿಗೆ ಮೌಲ್ಯ ಶಿಕ್ಷಣವೇ ಆಧಾರ- ಡಾಕ್ಟರ್ ಸರೋಜಿನಿ ಆಚಾರ್

ಪುಂಜಾಲಕಟ್ಟೆ:  ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ಬದುಕಿನಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಅಳವಡಿಸಿಕೊಂಡಾಗ ಅವನ ಬದುಕು ಮೌಲ್ಯಾಧಾರಿತ ಬದುಕಾಗುತ್ತದೆ. ಅಂತಹ ಕಾರ್ಯವನ್ನು ಮಾಡುತ್ತಿರುವ ಸಂಸ್ಥೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ಆಗಿರುತ್ತದೆ. ಈ ಕಾರ್ಯವನ್ನು ಮಾಡುತ್ತಿರುವ ಈ ಸಂಸ್ಥೆಯ ಅಧ್ಯಕ್ಷರಾದ ಪೂಜ್ಯ ರಾಜಶ್ರೀ ಡಾ. ಡಿ ವೀರೇಂದ್ರ ಹೆಗ್ಡೆಯವರ ದೂರದರ್ಶತ್ವವೇ ಕಾರಣವಾಗಿದೆ. ಇಂತಹ ಕಾರ್ಯವನ್ನು ನಮ್ಮ ಸಂಸ್ಥೆಯಲ್ಲಿ ಇಂದು ಹಮ್ಮಿಕೊಂಡಿರುವುದು ಇದು ನಮ್ಮ ಮಕ್ಕಳ ಭಾಗ್ಯವೇ ಸರಿ. ಇಂತಹ ಕಾರ್ಯವು ನಿರಂತರವಾಗಿ ಸಾಗುತ್ತಿರಲಿ – ಎಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆಯ ಪದವಿ ಪೂರ್ವ ಕಾಲೇಜು ವಿಭಾಗದ ಪ್ರಾಂಶುಪಾಲರಾದ ಸರೋಜಿನಿ ಆಚಾರ್ ರವರು ಹೇಳಿದರು.

ಅವರು ನ. 12ರಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆಯ ಪ್ರೌಢಶಾಲಾ ವಿಭಾಗದಲ್ಲಿ ಹಮ್ಮಿಕೊಳ್ಳಲಾದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಶಾಂತಿವನ ಟ್ರಸ್ಟ್ ಆಯೋಜಿಸಿರುವ ಪ್ರಾಥಮಿಕ ಶಾಲಾ ವಿಭಾಗದ ಜ್ಞಾನವಿಕಾಸ ಹಾಗೂ ಪ್ರೌಢಶಾಲಾ ವಿಭಾಗದ ಜ್ಞಾನಪ್ರಕಾಶ ಎಂಬ ಶಿರೋನಾಮೆ ಹೊತ್ತಿರುವ ಮೌಲ್ಯಾಧಾರಿತ ಪುಸ್ತಕದ ಬೆಳ್ತಂಗಡಿ ತಾಲೂಕು ಮಟ್ಟದ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ಈ ಸಮಾರಂಭದ ಅಧ್ಯಕ್ಷತೆಯನ್ನು ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲರಾದ ಬಿ. ಉದಯಕುಮಾರ್ ಮದ್ದ ವಹಿಸಿಕೊಂಡು ಸಭೆಯನ್ನು ಮುನ್ನಡೆಸಿದರು. ಈ ಕಾರ್ಯಕ್ರಮದ ಮೂಲ ಉದ್ದೇಶ, ಟ್ರಸ್ಟ್ ನಡೆದು ಬಂದ ದಾರಿ, ಮುಂದೆ ನಡೆಯುವ ಸ್ಪರ್ಧೆಯ ವಿವರ ಇದೆಲ್ಲವನ್ನು ಪ್ರಾಸ್ತಾವಿಕ ಮಾತಿನಲ್ಲಿ ಟ್ರಸ್ಟ್ ನಿರ್ದೇಶಕರಾದ ಡಾಕ್ಟರ್ ಐ ಶಶಿಕಾಂತ್ ಜೈನ್ ವಿವರಿಸಿದರು.
ವೇದಿಕೆಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್, ಪುಂಜಾಲಕಟ್ಟೆಯ ಪ್ರಾಥಮಿಕ ಶಾಲೆ ವಿಭಾಗದ ಮುಖ್ಯೋಪಾಧ್ಯಾಯರಾದ ಸುರೇಶ್ ಶೆಟ್ಟಿ, ಪುಂಜಾಲಕಟ್ಟೆ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಚೇತನ, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕೋಶಾಧಿಕಾರಿ ಶಿವಬಾಳು ಕರಾಯ ಮುಂತಾದವರು ಉಪಸ್ಥಿತರಿದ್ದು ಸಮಯೋಚಿತವಾಗಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಸರ್ವರನ್ನು ಸಂಸ್ಥೆಯ ಸಹ ಶಿಕ್ಷಕರಾದ ಧರಣೇಂದ್ರ ಕೆ ಸ್ವಾಗತಿಸಿ, ಸಂಸ್ಥೆಯ ಕನ್ನಡ ಶಿಕ್ಷಕಿಯಾದ ಶಾಂತ ಎಸ್ ಧನ್ಯವಾದ ಸಲ್ಲಿಸಿ, ಸಂಸ್ಥೆಯ ವಿಜ್ಞಾನ ಶಿಕ್ಷಕರು ಮತ್ತು ಈ ಸ್ಪರ್ಧೆಯ ತಾಲೂಕು ನೋಡಲ್ ಅಧಿಕಾರಿಯಾದ ನಿರಂಜನ್ ಜೈನ್ ಐ ಇವರು ನಿರೂಪಿಸಿದರು.

Exit mobile version