Site icon Suddi Belthangady

ಜನರ ಬಳಿಗೆ ಆಡಳಿತ ಸೇವೆ : ಅಕ್ರಮ ಸಕ್ರಮ ಅರ್ಜಿ ಪಂಚಾಯತ್ ಗಳಲ್ಲೇ ವಿಲೇವಾರಿ-ಶಾಸಕ ಹರೀಶ್ ಪೂಂಜ: ನ.22- ಡಿ 1ರತನಕ 20 ಪಂಚಾಯತ್ ಗಳಲ್ಲಿ ಪ್ರಥಮ ಹಂತದ ಅರ್ಜಿಗಳ ವಿಲೇವಾರಿ

ಬೆಳ್ತಂಗಡಿ: ಸರ್ಕಾರಿ ಜಮೀನಿನಲ್ಲಿ ದೀರ್ಘಕಾಲದಿಂದ ಕೃಷಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವ ರೈತಾಪಿ ಬಂಧುಗಳಿಗೆ ಆಯಾ ಜಮೀನನ್ನು ಸಕ್ರಮಗೊಳಿಸುವ ಅಕ್ರಮ ಸಕ್ರಮ ಅರ್ಜಿಗಳ ವಿಲೇವಾರಿಯನ್ನು ಆಯಾಯ ಪಂಚಾಯತ್ ಮಟ್ಟಗಳಲ್ಲಿ ನಡೆಸಲು ತೀರ್ಮಾನಿಸಿದ್ದು, ನ.22ರಿಂದ ಆರಂಭಗೊಳ್ಳುವ ಈ ಪ್ರಕ್ರಿಯೆ ಡಿ.1ರತನಕ ಪ್ರಥಮ ಹಂತದಲ್ಲಿ ಆಯ್ದ ಪಂಚಾಯತ್ ಗಳಲ್ಲಿ ನಡೆಯಲಿದೆ. ಈ ವಿನೂತನ ಪ್ರಯೋಗದಿಂದ ಗರಿಷ್ಠ ಸಂಖ್ಯೆಯ ಕೃಷಿಕ ಬಂಧುಗಳಿಗೆ ಕ್ಷಿಪ್ತ ಹಾಗೂ ಕ್ಲಪ್ತ ಸಮಯದಲ್ಲಿ ಜಮೀನಿನ ಸಕ್ರಮಗೊಳಿಸುವ ಆದೇಶ ಲಭ್ಯವಾಗಲಿದೆ.  ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ನ.12ರಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ವಿವಿಧ ಕಾನೂನಾತ್ಮಕ ಸಮಸ್ಯೆಗಳಿಂದ ವಿಳಂಬವಾಗಿರುವ ಎಲ್ಲಾ 94ಸಿ ಅರ್ಜಿಗಳನ್ನು ಡಿಸೆಂಬರ್ದ ತಿಂಗಳೊಳಗೆ ವಿಲೇವಾರಿ ಮಾಡಿ ಎಲ್ಲರಿಗೂ ಹಕ್ಕು ಪತ್ರ ವಿತರಿಸಲಾಗುವುದು. ಅರಣ್ಯ ಹಾಗೂ ಇನ್ನಿತರ ತೊಡಕುಗಳಿಂದಾಗಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮನೆ ಕಟ್ಟಿ ವಾಸ ಮಾಡುತ್ತಿರುವ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲು ತೊಡಕಾಗಿದೆ. ಈ ಬಗ್ಗೆ ಈಗಾಗಲೆ ಅಧಿಕಾರಿಗಳಲ್ಲಿ ಮಾಹಿತಿ ಪಡೆಯಲಾಗಿದ್ದು ಡಿಸೆಂಬರ್ ಒಳಗೆ ತಾಲೂಕಿನ ಎಲ್ಲಾ 94ಸಿ ಅರ್ಜಿಗಳ ವಿಲೇವಾರಿ ಮಾಡಿ ಸಮಸ್ಯೆ ಇತ್ಯರ್ಥಗೊಳಿಸಲಾಗುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಹರೀಶ್ ಪೂಂಜ ಮತ್ತು ಅಕ್ರಮ ಸಕ್ರಮ ಸಮಿತಿ ಸದಸ್ಯ ಜಯಂತ ಕೋಟ್ಯಾನ್ ಉಪಸ್ಥಿತರಿದ್ದರು.

Exit mobile version