ದಲಿತ ನಾಯಕ ಡೀಕಯ್ಯರವರ ನಿಗೂಢ ಸಾವಿನ ಪ್ರಕರಣ: ಸಿಐಡಿ ತನಿಖೆಗೆ ವಹಿಸಿದ ರಾಜ್ಯ ಸರಕಾರ

0


ಬೆಳ್ತಂಗಡಿ : ಬಹುಜನ ಚಳವಳಿಯ ನೇತಾರರಾಗಿದ್ದ ಬಿಎಸ್‌ಎನ್‌ಎಲ್‌ನ ನಿವೃತ್ತ ಉದ್ಯೋಗಿ ಪಿ. ಡೀಕಯ್ಯರವರ ನಿಗೂಢ ಸಾವಿನ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿ ರಾಜ್ಯ ಸರಕಾರ ಆದೇಶಿಸಿದೆ. ಕಳೆದ ಜುಲೈ 6ರಂದು ಮನೆಯಲ್ಲಿ ಒಬ್ಬಂಟಿಯಾಗಿದ್ದ ವೇಳೆ ಕುಸಿದು ಬಿದ್ದು ತಲೆಗೆ ಗಾಯಗೊಂಡ ಸ್ಥಿತಿಯಲ್ಲಿದ್ದ ಡೀಕಯ್ಯರವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳ ಬಳಿಕ ಅವರು ಆಸ್ಪತ್ರೆಯಲ್ಲಿ ನಿಧನ ಹೊಂದ್ದಿರು. ಮನೆಯವರ ಒಪ್ಪಿಗೆಯಂತೆ ಅಂಗಾಂಗಗಳ ದಾನ ಮಾಡಿದ ಬಳಿಕ ಜು. 9ರಂದು ಬೌದ್ಧ ಧರ್ಮದ ಪ್ರಕಾರ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಪೊಯ್ಯದಲ್ಲಿ ದಫನ ಕಾರ್ಯ ನಡೆದಿತ್ತು. ಜು.15ರಂದು ಡೀಕಯ್ಯ ಅವರ ಮನೆಯವರು ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಬೆಳ್ತಂಗಡಿ ಪೋಲಿಸ್ ಠಾಣೆಗೆ ದೂರು ನೀಡಿದ್ದರಿಂದ ಜು. 18ರಂದು ತಹಶೀಲ್ದಾರ್ ನೇತೃತ್ವದಲ್ಲಿ ಶವವನ್ನು ಹೊರ ತೆಗೆದು ಶವ ಪರೀಕ್ಷೆ ಮಾಡಲಾಗಿತ್ತು. ಘಟನೆಯ ಬಗ್ಗೆ ವಿಸ್ತೃತ ತನಿಖೆ ನಡೆಸಿದ್ದ ಬೆಳ್ತಂಗಡಿ ಪೊಲೀಸರು ಮನೆಯವರ ದೂರಿನ ಆಧಾರದಲ್ಲಿ ತನಿಖೆ ನಡೆಸಿ ಹಲವರನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ಮಧ್ಯೆ ಡೀಕಯ್ಯ ಅವರ ಕುಟುಂಬಸ್ಥರು ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿ ಪ್ರಕರಣದ ಬಗ್ಗೆ ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂದು ಸಿಐಡಿ ತನಿಖೆಗೆ ಒತ್ತಾಯಿಸಿದ್ದರು. ಇದೀಗ ಘಟನೆಯ ಬಗ್ಗೆ ರಾಜ್ಯ ಸರಕಾರ ಸಿಐಡಿ ತನಿಖೆಗೆ ಆದೇಶಿಸಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯಿಂದ ಪ್ರಕರಣದ ದಾಖಲೆಗಳನ್ನು ಸಿಒಡಿ ಇಲಾಖೆಗೆ ಒಪ್ಪಿಸುವಂತೆ ಆದೇಶಿಸಿದೆ.

ಡೀಕಯ್ಯರವರ ನಿಗೂಢ ಸಾವು-ಹಲವು ಅನುಮಾನ:

ಅಂಬೇಡ್ಕರ್‌ವಾದಿಯಾಗಿದ್ದ ಮತ್ತು ಬಿಎಸ್‌ಎನ್‌ಎಲ್ ಉಪ್ಪಿನಂಗಡಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದ ಪಿ. ಡೀಕಯ್ಯರವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುಜನ ಚಳುವಳಿಯನ್ನು ಕಟ್ಟಿ ಬೆಳೆಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ದ.ಕ. ಜಿಲ್ಲೆಯ ಗ್ರಾಮ ಗ್ರಾಮಗಳಲ್ಲಿ ಸಂಚರಿಸಿ ಅವರು ಚಳವಳಿ ನಡೆಸಿದ್ದರು. ತುಳುನಾಡಿನಲ್ಲಿ ತಮ್ಮದೇ ಶೈಲಿಯಲ್ಲಿ ಬಹುಜನ ಚಳವಳಿಯನ್ನು ಕಟ್ಟಿದ್ದ ಅವರು ಸಾಕಷ್ಟು ಯುವ ನಾಯಕರನ್ನು ಸೃಷ್ಟಿಸಿದ್ದರು. ಕಾನದ ಕಟದರ ಇತಿಹಾಸದ ಕುರಿತು ಅಧ್ಯಯನ ಮಾಡಿ ಪುಸ್ತಕ ಬರೆದಿದ್ದ ಡೀಕಯ್ಯರು ಬರಹಗಾರರು ಕೂಡ ಆಗಿದ್ದರು. ಅವರ ಬರಹಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದ ಪಿ. ಡೀಕಯ್ಯನವರ ಕುಟುಂಬಸ್ಥರು ಅವರ ಅಂಗಾಂಗಗಳನ್ನು ದಾನ ಮಾಡಿ ಹಲವರ ಬದುಕಿಗೆ ದಾರಿ ತೋರಿದ್ದರು. ಅವರ ಅಂಗಾಂಗಗಳ ದಾನದ ಪ್ರಕ್ರಿಯೆಗಳು ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯಲ್ಲಿ ನಡೆದಿತ್ತು. ಸಮಾಜ ಪರಿವರ್ತನಾ ಚಳವಳಿಯ ನಾಯಕರಾಗಿದ್ದ ಪಿ. ಡೀಕಯ್ಯರವರ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಅವರ ಕುಟುಂಬಸ್ಥರು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದರಿಂದ ಅವರ ಮೃತದೇಹವನ್ನು ದಫನ ಮಾಡಲಾಗಿದ್ದ ಕಣಿಯೂರು ಗ್ರಾಮದ ಪೊಯ್ಯ ಎಂಬಲ್ಲಿಂದ ಮೇಲಕ್ಕೆತ್ತಿ ತಹಶೀಲ್ದಾರ್ ಸುಪರ್ದಿಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು.

ಬೆಳ್ತಂಗಡಿ ತಾಲೂಕಿನ ಗರ್ಡಾಡಿಯ ತನ್ನ ಮನೆಯಲ್ಲಿ ಡೀಕಯ್ಯರವರು ರಾತ್ರಿ ಕುಸಿದು ಬಿದ್ದಿದ್ದ ವೇಳೆ ಅವರ ಪತ್ನಿ, ಹಿರಿಯ ಸಾಹಿತಿ ಅತ್ರಾಡಿ ಅಮೃತಾ ಶೆಟ್ಟಿಯವರು ಪದ್ಮುಂಜದ ಪೊಯ್ಯದಲ್ಲಿರುವ ಡೀಕಯ್ಯರ ಮೂಲ ಮನೆಯಲ್ಲಿದ್ದರು. ಗರ್ಡಾಡಿಯ ಮನೆಯಲ್ಲಿ ಡೀಕಯ್ಯ ಅವರು ಒಬ್ಬರೇ ಇದ್ದರು. ಬೆಳಗ್ಗೆ ಅವರ ಪತ್ನಿ ಅತ್ರಾಡಿ ಅಮೃತಾ ಶೆಟ್ಟಿಯವರು ಗರ್ಡಾಡಿಯ ಮನೆಗೆ ಹೋದಾಗ ಡೀಕಯ್ಯರವರು ಕುಸಿದು ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಕಂಡು ಬಂದಿತ್ತು. ತಕ್ಷಣ ಅವರನ್ನು ಅದೇ ಸ್ಥಿತಿಯಲ್ಲಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದಾದ ನಂತರ ವೆಂಟಿಲೆಂಟರ್‌ನಲ್ಲಿದ್ದ ಅವರು 24 ಗಂಟೆಗಳ ಬಳಿಕ ಕೊನೆಯುಸಿರೆಳೆದಿದ್ದರು.

ಮೃತ ಶರೀರವನ್ನು ಕಣಿಯೂರು ಗ್ರಾಮದ ಪದ್ಮುಂಜ ಬಳಿಯ ಪೊಯ್ಯದ ಮೂಲ ಮನೆಗೆ ತಂದು ದಫನ ಮಾಡಲಾಗಿತ್ತು. ಬಳಿಕ ಅವರ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ, ಮೃತರ ತಾಯಿಯ ಕುಟುಂಬಸ್ಥರ ಪರವಾಗಿ ಡೀಕಯ್ಯ ಅವರ ಸಹೋದರಿಯ ಗಂಡ ಪದ್ಮನಾಭರವರು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದರು. ಡೀಕಯ್ಯರ ಅಕಾಲಿಕ ಅಪಘಾತಕಾರಿ ಅಸಹಜ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಕೇಳಿಕೊಂಡಿದ್ದರು. ದೂರು ಸ್ವೀಕರಿಸಿದ್ದ ಬೆಳ್ತಂಗಡಿ ಪೊಲೀಸರು ಅದರ ಮುಂದಿನ ಪ್ರಕ್ರಿಯೆಗಾಗಿ ಪುತ್ತೂರು ಉಪವಿಭಾಗಾಧಿಕಾರಿಯವರಿಗೆ ಮಾಹಿತಿ ಹಸ್ತಾಂತರಿಸಿದ್ದರು. ಪುತ್ತೂರು ಉಪವಿಭಾಗಾಧಿಕಾರಿಯವರ ಆದೇಶದಂತೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನ್ವಿಕಂ ನೇತೃತದಲ್ಲಿ ಮೃತದೇಹವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿತ್ತು. ದ.ಕ. ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಪೊರೋನಿಕ್ಸ್ ತಜ್ಞರಾದ ಡಾ. ರಶ್ಮಿ ಹಾಗೂ ಸಿಬ್ಬಂದಿಗಳು, ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಶ್ಮಿ ನೇತೃತ್ವದಲ್ಲಿ ಸ್ಥಳದಲ್ಲೇ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿತ್ತು. ಈ ಸಂದರ್ಭ ಬೆಳ್ತಂಗಡಿ ಪೊಲೀಸ್ ಉಪನಿರೀಕ್ಷಕ ನಂದಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದರು. ಡೀಕಯ್ಯರವರ ನಿಗೂಢ ಸಾವಿನ ಕುರಿತು ಹಲವು ಅನುಮಾನ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಇದೀಗ ರಾಜ್ಯ ಸರಕಾರ ಸಿಐಡಿಗೆ ವಹಿಸಿದೆ.

LEAVE A REPLY

Please enter your comment!
Please enter your name here