Site icon Suddi Belthangady

ಹೊಸಂಗಡಿ: ಶಾಲೆಯ ಹಾಸ್ಟೇಲ್‌ನಲ್ಲಿ ಅವ್ಯವಸ್ಥೆ ಮಾಜಿ ಶಾಸಕ ವಸಂತ ಬಂಗೇರ ಭೇಟಿ, ಸರಿಪಡಿಸಲು ಸೂಚನೆ

ವೇಣೂರು: ಹೊಸಂಗಡಿಯಲ್ಲಿರುವ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯ ಹಾಸ್ಟೇಲ್‌ಗೆ ಶುಕ್ರವಾರ ಭೇಟಿ ನೀಡಿದ ಮಾಜಿ ಶಾಸಕ ಕೆ. ವಸಂತ ಬಂಗೇರ ಅವರು ಶುಚಿತ್ವ ಕಾಪಾಡುವಂತೆ ವಿನಂತಿಸಿ, ಮಕ್ಕಳಿಗೆ ಗುಣಮಟ್ಟದ ಆಹಾರವನ್ನು ನೀಡುವಂತೆ ಸೂಚನೆ ನೀಡಿದರು.


ಶಾಲೆಯ ಪ್ರಾಚಾರ್ಯರ ವಸತಿ ಗೃಹದಲ್ಲಿ ಕ್ವಿಂಟಾಲ್ ಗೋಧಿಯನ್ನು ಗೋಣಿಚೀಲದಲ್ಲಿ ಸಂಗ್ರಹಿಸಲಾಗಿದ್ದು, ಹುಳಗಳಾಗಿ ಉಪಯೋಗಕ್ಕೆ ಭಾರದ ರೀತಿಯಲ್ಲಿತ್ತು. ಅಲ್ಲದೆ ಹಾಸ್ಟೇಲ್‌ನ ಶೇಖರಣಾ ಕೊಠಡಿಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿದ್ದ ರವೆ, ಅಡುಗೆ ಕೋಣೆಯಲ್ಲಿದ್ದ ಒಣ ಮೆಣಸು, ಹುಳಿಯಲ್ಲೂ ಹುಳಗಳು ಕಾಣಿಸಿಕೊಂಡಿದ್ದು, ಹಾಸ್ಟೇಲ್ ವಾರ್ಡನ್ ಹಾಗೂ ಪ್ರಭಾರ ಪ್ರಾಚಾರ್ಯರನ್ನು ತರಾಟೆಗೆ ತೆಗೆದುಕೊಂಡರು. ಈ ರೀತಿಯಲ್ಲಿ ಹಾಳಾದ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ನೀಡುವುದರಿಂದ ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀಳುವುದಿಲ್ಲವೇ ಎಂದು ಪ್ರಶ್ನಿಸಿದ ಮಾಜಿ ಶಾಸಕರು, ಶುಚಿತ್ವವುಳ್ಳ ಆಹಾರ ಪದಾರ್ಥಗಳನ್ನೇ ಮಕ್ಕಳಿಗೆ ನೀಡಿ ಸ್ವಚ್ಛತೆಗೆ ಮಹತ್ವ ನೀಡುವಂತೆ ಸೂಚಿಸಿದರು.

ತಮ್ಮ ಶಾಲೆಯಲ್ಲಿ ಖಾಲಿಯಿರುವ ಪ್ರಾಚಾರ್ಯರು, ಹಾಸ್ಟೇಲ್ ವಾರ್ಡನ್ ಹುದ್ದೆ ಹಾಗೂ ಹೆಚ್ಚುವರಿ ಸಿಬ್ಬಂದಿಯ ಅಗತ್ಯತೆಯ ಬಗ್ಗೆ ಶಾಸಕರಿಗೆ ತಿಳಿಸಿ, ಅದರ ಪ್ರತಿಯನ್ನು ನನಗೂ ಕಳುಹಿಸಿ ಈ ಬಗ್ಗೆ ಒತ್ತು ನೀಡುತ್ತೇನೆ ಎಂದರು. ಸ್ವಚ್ಛತೆಯ ಕೊರತೆ ಮತ್ತು ಕಳಪೆ ಆಹಾರ ಪದಾರ್ಥಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾರೆ ಎನ್ನುವ ವಿದ್ಯಾರ್ಥಿಗಳ ಪೋಷಕರಿಂದ ಮೌಖಿಕ ದೂರು ಬಂದ ಹಿನ್ನೆಲೆಯಲ್ಲಿ ಭೇಟಿ ನೀಡಿ ಎಚ್ಚರಿಕೆ ನೀಡಿದ್ದೇನೆ ಎಂದು ವಸಂತ ಬಂಗೇರ ತಿಳಿಸಿದರು.

ಬೆಳ್ತಂಗಡಿ ಸಮಾಜಕಲ್ಯಾಣ ಅಧಿಕಾರಿ ಹೇಮಚಂದ್ರ, ಜಿ.ಪಂ. ಮಾಜಿ ಉಪಾಧ್ಯಕ್ಷ ಪಿ. ಧರಣೇಂದ್ರ ಕುಮಾರ್, ನ್ಯಾಯವಾದಿ ಮನೋಹರ ಇಲಂತಿಲ, ಹರಿಪ್ರಸಾದ್ ಪಿ., ಶ್ರೀಪತಿ ಉಪಾಧ್ಯಾಯ, ಸಂದೀಪ್ ನೀರಲೆ ಮತ್ತಿತರರು ಇದ್ದರು.

Exit mobile version