Site icon Suddi Belthangady

ಶಾಲೆ ಸ್ಥಳಾಂತರವಾದಾಗ ಕೆಲ ದಾಖಲೆಗಳು ಅಸ್ತವ್ಯಸ್ತ: ದಾಖಲೆಗಳು ನಾಪತ್ತೆ ಆರೋಪಕ್ಕೆ ಆರಂಬೋಡಿ ಶಾಲೆಯ ಮುಖ್ಯಶಿಕ್ಷಕಿ ಹೇಳಿಕೆ

ವೇಣೂರು: ಆರಂಬೋಡಿ ಸ.ಉ.ಪ್ರಾ. ಶಾಲೆಯು 1938ರಲ್ಲಿ ಹೊಕ್ಕಾಡಿಗೋಳಿಯಲ್ಲಿ ಆರಂಭವಾಗಿದ್ದು, ಅಲ್ಲಿಂದ ಆರಂಬೋಡಿಗೆ ಸ್ಥಳಾಂತರವಾಗಿದ್ದ ವೇಳೆ 1938 ರಿಂದ 1960ರವರೆಗಿನ ಕೆಲವು ದಾಖಲೆಗಳು ಅಸ್ತವ್ಯಸ್ತಗೊಂಡಿದ್ದು, ಅದನ್ನು ಸಾಧ್ಯವಾದಷ್ಟು ಹೊಸ ದಾಖಲಾತಿ ಪುಸ್ತಕದಲ್ಲಿ ಬರೆಯಲಾಗಿದೆ ಎಂದು ಆರಂಬೋಡಿ ಸ.ಉ.ಪ್ರಾ. ಶಾಲೆಯ ಮುಖ್ಯ ಶಿಕ್ಷಕಿ ಸುಶೀಲ ಪ್ರತಿಕ್ರಿಯೆ ನೀಡಿದ್ದಾರೆ.

ಆರಂಬೋಡಿ ಶಾಲೆಯಲ್ಲಿ ಅ. 12ರಂದು ಜರಗಿದ ಆರಂಬೋಡಿ ಗ್ರಾ.ಪಂ.ನ ಗ್ರಾಮಸಭೆಯಲ್ಲಿ ಗ್ರಾ.ಪಂ. ಸದಸ್ಯ ರಮೇಶ್ ಮಂಜಿಲ ಅವರು ವಿಷಯ ಪ್ರಸ್ತಾಪಿಸಿ, ಆರಂಬೋಡಿ ಸ.ಹಿ.ಪ್ರಾ. ಶಾಲೆಯಲ್ಲಿ 1 ರಿಂದ ಸರಿಸುಮಾರು 250 ಕ್ರಮಾಂಕದವರೆಗಿನ ಮಕ್ಕಳ ದಾಖಲಾತಿಯ ಬಗ್ಗೆ ಶಾಲೆಯಲ್ಲಿ ಯಾವುದೇ ಪುರಾವೆಗಳಿಲ್ಲ. ಈ ಅವಧಿಯಲ್ಲಿ ವಿದ್ಯಾರ್ಜನೆ ಮಾಡಿದ ವಿದ್ಯಾರ್ಥಿಗಳಿಗೆಲ್ಲ ಶಾಲೆಯಿಂದ ಯಾವುದೇ ದಾಖಲೆಗಳು ಲಭಿಸುತ್ತಿಲ್ಲ. ಇದರಿಂದ ವಿದ್ಯಾರ್ಹತೆ ಪ್ರಮಾಣಪತ್ರ, ಜನನ ಪ್ರಮಾಣ ಪತ್ರ, ಪಾಸ್‌ಪೋರ್ಟ್ ಮುಂತಾದ ಪ್ರಮಾಣಪತ್ರಗಳನ್ನು ಪಡೆಯಲು ಸಾಧ್ಯವಾಗದೆ ಸಮಸ್ಯೆ ಅನುಭವಿಸುವಂತಾಗಿದೆ, ಇದಕ್ಕೆ ಸೂಕ್ತ ವ್ಯವಸ್ಥೆ ಆಗಬೇಕೆಂದು ಶಿಕ್ಷಣ ಇಲಾಖೆಯ ಅಧಿಕಾರಿಯಲ್ಲಿ ಆಗ್ರಹಿಸಿದ್ದರು. ಈ ವರದಿ  ಸುದ್ದಿ ವೈಬ್‌ಸೈಟ್‌ನಲ್ಲಿ ಪ್ರಕಟಗೊಂಡಿತ್ತು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಶಾಲೆಯ ಮುಖ್ಯ ಶಿಕ್ಷಕಿ ನಮ್ಮ ಪ್ರತಿನಿಧಿಯಲ್ಲಿ ಪ್ರತಿಕ್ರಿಯಿಸಿದ್ದು, 1960ರಿಂದ ಇಲ್ಲಿಯವರೆಗಿನ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲಾಗಿದೆ. ನನ್ನಿಂದ ಏನೂ ಲೋಪವಾಗಿಲ್ಲ ಎಂದಿದ್ದಾರೆ. ಶತಮಾನ ಕಳೆದ ಶಾಲೆಗಳಲ್ಲೂ ಅತ್ಯಂತ ಮೌಲ್ಯ ಹೊಂದಿರುವ ದಾಖಲಾತಿ ಕಡತಗಳನ್ನು ಸುರಕ್ಷಿತವಾಗಿ ಸಂರಕ್ಷಿಸಿರುವಾಗ ಈ ಶಾಲೆಯಲ್ಲಿ ಆರಂಭದ ದಾಖಲಾತಿಗಳನ್ನು ಅಂದಿನ ಸಿಬ್ಬಂದಿ ಸುರಕ್ಷಿತ ರೀತಿಯಲ್ಲಿ ಕಾಪಾಡುವಲ್ಲಿ ಎಡವಿರುವುದು ದುರಂತ.

Exit mobile version