Site icon Suddi Belthangady

ಆರಂಬೋಡಿ ಗ್ರಾಮ ಪಂಚಾಯತ್ ಗ್ರಾಮ ಸಭೆ; ಆರಂಬೋಡಿ ಶಾಲೆಯಲ್ಲಿ ದಾಖಲಾತಿ ಕಡತಗಳು ನಾಪತ್ತೆ ಬಹಿರಂಗ ಕರ್ತವ್ಯ ಲೋಪ ಎಂದ ಸಿಆರ್‌ಪಿ ರಾಜೇಶ್

ವೇಣೂರು: ಆರಂಬೋಡಿ ಸ.ಹಿ.ಪ್ರಾ. ಶಾಲೆಯಲ್ಲಿ ಜರಗಿದ ಆರಂಬೋಡಿ ಗ್ರಾ.ಪಂ.ನ2022-23ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯಲ್ಲಿ ಗ್ರಾ.ಪಂ. ಸದಸ್ಯ ರಮೇಶ್ ಮಂಜಿಲ ಅವರ ಪ್ರಶ್ನೆಗೆ ಉತ್ತರಿಸುತ್ತಾ ಅವರು ಮಾತನಾಡಿದರು.

ದಾಖಲಾತಿ ಪಡೆದು ವರ್ಗಾವಣೆಗೊಂಡಿರುವ ಮಕ್ಕಳ ದಾಖಲಾತಿ ಕಡತವಾಗಲಿ, ಹಾಜರಾತಿ ಕಡತವಾಗಲಿ ಇಲ್ಲದಿರುವ ವಿಚಾರ ಸಭೆಯಲ್ಲಿ ಪ್ರಸ್ತಾಪವಾಗಿ ಭಾರೀ ಚರ್ಚೆಗೆ ಗ್ರಾಸವಾಯಿತು. ಗ್ರಾ.ಪಂ. ಸದಸ್ಯ ರಮೇಶ್ ಮಂಜಿಲ ಅವರು ವಿಷಯ ಪ್ರಸ್ತಾಪಿಸಿ, ಆರಂಬೋಡಿ ಸ.ಹಿ.ಪ್ರಾ. ಶಾಲೆಯಲ್ಲಿ 1 ರಿಂದ 250 ಕ್ರಮಾಂಕದವರೆಗಿನ ಮಕ್ಕಳ ದಾಖಲಾತಿಯ ಬಗ್ಗೆ ಶಾಲೆಯಲ್ಲಿ ಯಾವುದೇ ಪುರಾವೆಗಳಿಲ್ಲ ಎನ್ನುವುದನ್ನು ಇಲ್ಲಿಯ ಶಿಕ್ಷಕರು ಒಪ್ಪಿಕೊಂಡಿದ್ದಾರೆ. ಅಂದು ವಿದ್ಯಾರ್ಜನೆ ಮಾಡಿದ ಇವರಿಗೆಲ್ಲ ಶಾಲೆಯಿಂದ ಯಾವುದೇ ದಾಖಲೆಗಳು ಲಭಿಸುತ್ತಿಲ್ಲ. ಇದಕ್ಕೆ ಸೂಕ್ತ ವ್ಯವಸ್ಥೆ ಆಗಬೇಕೆಂದು ಶಿಕ್ಷಣ ಇಲಾಖೆಯ ಅಧಿಕಾರಿಯಲ್ಲಿ ಆಗ್ರಹಿಸಿದರು.

ಆರಂಬೋಡಿ ಸ.ಹಿ.ಪ್ರಾ. ಶಾಲೆಯಲ್ಲಿ ಮಕ್ಕಳು ದಾಖಲಾತಿಯಾಗಿರುವ ಯಾವುದೇ ದಾಖಲೆಗಳು ಇಲ್ಲದಿರುವುದು ಬಹುದೊಡ್ಡ ದುರಂತ. ಇದೊಂದು ಕರ್ತವ್ಯ ಲೋಪವಾಗಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಯವರ ಗಮನಕ್ಕೆ ತಂದು ಪರ್ಯಾಯ ಕ್ರಮ ಕೈಗೊಳ್ಳುವುದಾಗಿ ಶಿಕ್ಷಣ ಇಲಾಖೆಯ ಸಿಆರ್‌ಪಿ ರಾಜೇಶ್ ಹೇಳಿದರು.

ಕುಡಿಯುವ ನೀರಿಗೆ ಉಚಿತ ವಿದ್ಯುತ್ ಕಲ್ಪಿಸಿ
ಸರಕಾರ ಕೃಷಿ ಚಟುವಟಿಕೆಗೆ ನೀಡುತ್ತಿರುವ ಉಚಿತ ವಿದ್ಯುತ್‌ನಂತೆ,  ಪಂಚಾಯತ್‌ನ ಕುಡಿಯುವ ನೀರಿನ ಪಂಪ್ ಮತ್ತು ಸ್ಥಾವರಗಳಿಗೆ ಉಚಿತ ವಿದ್ಯುತ್ ನೀಡಬೇಕು. ಈ ಮೂಲಕ ಗ್ರಾಮಸ್ಥರಿಗೆ ಕುಡಿಯುವ ನೀರನ್ನು ಉಚಿತವಾಗಿ ಕಲ್ಪಿಸಬೇಕು. ಶಾಲೆಗಳಲ್ಲಿ ಜರಗುವ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ವಲಯ ಮಟ್ಟದಿಂದಲೇ ಸರಕಾರ ಅನುದಾನ ಒದಗಿಸಬೇಕೆಂದು ಮಾಜಿ ಸದಸ್ಯ ಹರೀಶ್ ಕುಮಾರ್ ಆಗ್ರಹಿಸಿದರು. ಅಡುಗೆ ಸಿಬ್ಬಂದಿಗಳಿಗೆ ಕಳೆದ 3 ತಿಂಗಳಿನಿಂದ ವೇತನ ಪಾವತಿಯಾಗದಿರುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು.
ಗ್ರಾ.ಪಂ. ಅಧ್ಯಕ್ಷೆ ವಿಜಯಾ ರಮೇಶ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ಅವರು ಮಾರ್ಗದರ್ಶಿ ಅಧಿಕಾರಿಯಾಗಿ ಸಭೆಯನ್ನು ನಡೆಸಿಕೊಟ್ಟರು. ಗ್ರಾ.ಪಂ. ಉಪಾಧ್ಯಕ್ಷ ಪ್ರವೀಣ್‌ಚಂದ್ರ ಜೈನ್, ಗ್ರಾ.ಪಂ. ಸದಸ್ಯರಾದ ಪ್ರಭಾಕರ ಎಚ್., ಸತೀಶ್ ಮಠ, ಸುರೇಂದ್ರ ಶೆಟ್ಟಿ, ಲೀಲಾ ನೀರಪಲ್ಕೆ, ಮೋಹಿನಿ, ಸುದರ್ಶನ ಹಕ್ಕೇರಿ, ಗೀತಾ, ತೇಜಸ್ವಿನಿ, ದೀಕ್ಷಿತಾ ದೇವಾಡಿಗ ನಡುಕುಮೇರು, ವಿವಿಧ ಇಲಾಖಾಧಿಕಾರಿಗಳು, ಪಂಚಾಯತು ಸಿಬ್ಬಂದಿ ಉಪಸ್ಥಿತರಿದ್ದರು.
ಪಂ. ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಸ್ವಾಗತಿಸಿ, ಸಭೆಯನ್ನು ನಿರ್ವಹಿಸಿದರು. ಪಂ. ಸಿಬ್ಬಂದಿ ಪದ್ಮನಾಭ ಅವರು ವಾರ್ಡ್‌ಸಭೆಯ ಬೇಡಿಕೆ ಹಾಗೂ ಜಮಾ ಖರ್ಚಿನ ವಿವರ ವಾಚಿಸಿದರು.

 

Exit mobile version