Site icon Suddi Belthangady

ರೈತರ ಕುಮ್ಕಿ ಜಮೀನನ್ನು ಇತರರಿಗೆ ನೀಡಲು ಹುನ್ನಾರ ನೀಡುತ್ತಿರುವ ಕಂದಾಯ ಇಲಾಖೆ ರೈತ ಸಂಘ ಆರೋಪ: ಪತ್ರಿಕಾ ಗೋಷ್ಠಿ


ಬೆಳ್ತಂಗಡಿ : ಕಣಿಯೂರು ಗ್ರಾಮದ ರೈತರುಗಳಾದ ನಾರಾಯಣ ರಾವ್ ಕೊಲ್ಲಾಜೆ, ರಾಜೀವ್ ಭಟ್ ಹಾಗೂ ಪರಿಶಿಷ್ಟ ಜಾತಿಯ ಮತ್ರ ಇವರುಗಳ ಖದಿಂ ವರ್ಗದ ಜಾಗದಲ್ಲಿ ಕೃಷಿ ಮಾಡಿ ಕೊಂಡಿದ್ದು ಅಲ್ಲದೆ ಈ ಪೈಕಿ ಅಂದಾಜು 1 ಎಕ್ರೆ ಯಷ್ಟುನ್ನು ಸರಕಾರಿ ಪ್ರೌಢ ಮತ್ತು ಪದವಿ ಪೂರ್ವ ಕಾಲೇಜಿಗೆ ನೀಡಿದ್ದರು. ಸುಮಾರು 7.50 ಎಕ್ರೆ ಜಮೀನಿನಲ್ಲಿ ತೆಂಗು, ಅಡಿಕೆ, ರಬ್ಬರ್, ಮಾವು ಅಲ್ಲದೆ ರಬ್ಬರ್ ಹಾಲಿನ ಡೈರಿ, ಕೃಷಿ ಕೂಲಿ ಕಾರ್ಮಿಕರ ವಸತಿ ಕಟ್ಟಡ, ಪಂಪು ಸೆಟ್ ಬಾವಿ, ಕೊಳವೆ ಬಾವಿ ಎಲ್ಲಾ ಕೃಷಿ ಚಟುವಟಿಕೆ ಮಾಡುತ್ತಿದ್ದು ಈ ಜಾಗವನ್ನು ನಿವೃತ್ತ ಯೋಧರಿಗೆ ಮಂಜೂರು ಮಾಡಿರುವ ಕಂದಾಯ ಇಲಾಖೆ ರೈತರಿಗೆ ಅನ್ಯಾಯ ಮಾಡಿದೆ ಎಂದು ರಾಜ್ಯ ರೈತ ಸಂಘ ದ ಪ್ರಧಾನ ಕಾರ್ಯದರ್ಶಿ ರವಿ ಕಿರಣ್ ಪುಣಚ ಹೇಳಿದರು.

ಕಂದಾಯ ಇಲಾಖೆಯ ಅಧಿಕಾರಿಗಳು ಮಾಡಿರುವ ಈ ಹುನ್ನಾರ ಸರಿ ಪಡಿಸದೇ ಇದ್ದರೆ ಪುತ್ತೂರು ಉಪ ವಿಭಾಗಾಧಿಕಾರಿಗಳ ಕಚೇರಿ ಮುಂದೆ ರೈತ ಸಂಘದಿಂದ ಪ್ರತಿಭಟನೆ ನಡೆಸಲಾಗುವದು. ನಾರಾಯಣ ರಾವ್ ರವರು ಸದ್ರಿ ಜಾಗದಲ್ಲಿ ಗೇರು ಹಾಗೂ ಇತರ ಕೃಷಿ ಮಾಡಿ ಕೊಂಡಿದ್ದು ಈ ಜಾಗ ಮಂಜೂರು ಮಾಡುವಂತೆ ಅಕ್ರಮ ಸಕ್ರಮಕ್ಕೂ ಮನವಿ ಮಾಡಿದ್ದಾರೆ. ಇವರಿಗೆ ನ್ಯಾಯ ಸಿಗದಿದ್ದರೆ ಎಲ್ಲಾ ರೈತರು ಒಟ್ಟು ಸೇರಿ ಪ್ರತಿಭಟನೆ ಮಾಡುತ್ತೇವೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಕಾರ್ಮಿಕ ಮುಖಂಡ ಬಿ. ಎಂ. ಭಟ್, ರೈತ ಸಂಘ ದ. ಕ. ಜಿಲ್ಲಾ ಅಧ್ಯಕ್ಷ ಒಸ್ವಾಲ್ಡ್ ಫೆರ್ನಾಂಡಿಸ್, ಕಾರ್ಮಿಕ ಮುಖಂಡ ರಾಮಣ್ಣ ವಿಟ್ಲ, ರೈತ ಯುವ ಘಟಕ ಅಧ್ಯಕ್ಷ ಆದಿತ್ಯ ಕೊಲ್ಲಾಜೆ, ಜಿಲ್ಲಾ ಯುವ ರೈತ ಘಟಕದ ಗೌರವ ಅಧ್ಯಕ್ಷ ಸುರೇಂದ್ರ ಕೊರ್ಯ ಉಪಸ್ಥಿತರಿದ್ದರು.

Exit mobile version