Site icon Suddi Belthangady

ಪುರಾಣ ಸಾಹಿತ್ಯ ಸದಾ ಉಪಯುಕ್ತವಾದುದು – ಡಾ. ಶ್ರೀಧರ ಭಟ್ ಉಜಿರೆ

ಬೆಳಾಲು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್,ಚುಟುಕು ಸಾಹಿತ್ಯ ಪರಿಷತ್ ಮತ್ತು ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಬೆಳಾಲು ಶ್ರೀ ಧ ಮ ಪ್ರೌಡಶಾಲೆಯ ಆಶ್ರಯದಲ್ಲಿ “ಪುರಾಣ ಸಾಹಿತ್ಯ ಮತ್ತು ಜೀವನ ಮೌಲ್ಯಗಳು” ಎಂಬ ವಿಷಯದಲ್ಲಿ ಉಪನ್ಯಾಸ ಕಾರ್ಯಕ್ರಮ ಜರುಗಿತು.

ಉಜಿರೆ ಶ್ರೀ ಧ.ಮಂ ಕಾಲೇಜಿನ ಉಪನ್ಯಾಸಕರಾದ ಡಾ. ಶ್ರೀಧರ ಭಟ್ ರವರು ಉಪನ್ಯಾಸ ನೀಡುತ್ತಾ, ಪುರಾಣ ಸಾಹಿತ್ಯ ಸದಾ ಉಪಯುಕ್ತವಾದುದು. ಮನುಷ್ಯನಿಗೆ ಬೆಲೆ ಬರುವುದು ಮತ್ತು ಆತನನ್ನು ಸದಾ ನೆನಪು ಮಾಡಿಕೊಳ್ಳುವುದು ಆತನ ಸಾಧನೆ ಹಾಗೂ ಗುಣಗಳಿಂದಲೇ ಹೊರತು ವಸ್ತು ಸಂಗ್ರಹಗಳಿಂದಲ್ಲ. ಉತ್ತಮ ಜೀವನ ಮೌಲ್ಯಗಳನ್ನು ನಾವು ನಮ್ಮ ಜೊತೆಗಾರನಾಗಿಸಿಕೊಳ್ಳಬೇಕು. ಅಂತಹ ಗುಣ ಹಾಗೂ ಜೀವನ ಮೌಲ್ಯಗಳ ಪಾಠವನ್ನು ಪುರಾಣ ಸಾಹಿತ್ಯಗಳು ಮಾಡುತ್ತವೆ. ಅವು ಏನನ್ನು ಮಾಡಬೇಕು – ಮಾಡಬಾರದು, ಹೇಗಿರಬೇಕು – ಹೇಗಿರಬಾರದು ಎಂಬುದರ ಮಾರ್ಗದರ್ಶನವನ್ನೂ ಮಾಡುತ್ತವೆ. ಹಾಗಾಗಿ ನಾವು ಪುರಾಣ ಸಾಹಿತ್ಯಗಳನ್ನು ಅಧ್ಯಯನ ಮಾಡುವುದರ ಮೂಲಕ ನಮ್ಮ ನ್ಯಾಯ ನಿರ್ಣಯ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟರು.

ಸಭೆಯ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯರೂ ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯೂ ಆಗಿರುವ ರಾಮಕೃಷ್ಣ ಭಟ್ ರವರು ವಹಿಸಿದ್ದರು. ಅತಿಥಿಗಳಾಗಿ ಶಾಲೆಯ ಪೋಷಕ ಸಂಗದ ಅಧ್ಯಕ್ಷರಾದ ಸುಲೈಮಾನ್ ಭೀಮಂಡೆ ಮತ್ತು ನಿವೃತ್ತ ಪ್ರಾಂಶುಪಾಲರಾದ ಯು. ವಿಶ್ವೇಶ್ವರ ಭಟ್ ರವರು ಆಗಮಿಸಿದ್ದರು.

ಬೆಳ್ತಂಗಡಿ ತಾಲೂಕು ಅಖಿಲ ಭಾರತೀಯ ಪರಿಷತ್ತಿನ ಅಧ್ಯಕ್ಷರಾದ ಪ್ರೊ. ಗಣಪತಿ ಭಟ್ ಕುಳಮರ್ವರವರು ಸ್ವಾಗತಿಸಿ, ಶಿಕ್ಷಕಿ ವಾರಿಜ ಎಸ್ ಗೌಡರು ವಂದಿಸಿದರು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಬೆಳ್ತಂಗಡಿ ತಾಲೂಕು ಸಮಿತಿಯ ಕಾರ್ಯದರ್ಶಿ ಶ್ರೀಮತಿ ಸುಭಾಷಿಣಿಯವರು ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಎಲ್ಲ ಶಿಕ್ಷಕ ಸಿಬ್ಬಂದಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Exit mobile version