ಕೊಕ್ಕಡದಲ್ಲಿ ನಡೆದಿದ್ದ ಅಪ್ರಾಪ್ತೆ ಮೇಲಿನ ದೌರ್ಜನ್ಯ ಪ್ರಕರಣ: ಆರೋಪಿ ಪದ್ಮನಾಭನಿಗೆ ಜೈಲು ಶಿಕ್ಷೆ

0

ಕೊಕ್ಕಡ: ಕೊಕ್ಕಡದಲ್ಲಿ  ನಡೆದಿದ್ದ ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಸಾಬೀತಾದ ಹಿನ್ನೆಲೆಯಲ್ಲಿ ಕೊಕ್ಕಡದ ಪದ್ಮನಾಭ ಎಂಬಾತನಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ(ಪೋಕ್ಸೋ)ಎಫ್‌ಟಿಎಸ್‌ಸಿ 1 ನ್ಯಾಯಾಲಯ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ.

2019 ರ ಆಗಸ್ಟ್ 17 ರಂದು ಮಧ್ಯಾಹ್ನ ತನ್ನ ಶಾಲೆಯಲ್ಲಿ ಸ್ಪೆಷಲ್ ಕ್ಲಾಸ್ ಮುಗಿಸಿ ಮನೆಯ ಕಡೆಗೆ ಹೋಗುತ್ತಿದ್ದ ಅಪ್ರಾಪ್ತ ಬಾಲಕಿ ಕೊಕ್ಕಡ ಹಳ್ಳಿಂಗೇರಿ ಎಂಬಲ್ಲಿಗೆ ತಲುಪಿದಾಗ ದಾರಿಯ ಬದಿಯಲ್ಲಿ ನಿಂತಿದ್ದ ಪದ್ಮನಾಭ ನೊಂದ ಬಾಲಕಿಯನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ ಲೈಂಗಿಕ ಉದ್ದೇಶದಿಂದ ಆಕೆಯ ಮಾನಕ್ಕೆ ಕುಂದುಂಟಾಗುವಂತೆ ಆಕೆಯ ಕೈ ಹಿಡಿದು ಎಳೆದು ನೀನು ನನ್ನ ಜೊತೆ ಬಾ, ಏನೂ ಆಗುವುದಿಲ್ಲ ಎಂದು ಹೇಳಿದ್ದ ಎಂದು ಆರೋಪಿಸಲಾಗಿತ್ತು.

ಈ ವೇಳೆ ನೊಂದ ಬಾಲಕಿ ಹೆದರಿ ಆರೋಪಿತನ ಹಿಡಿತದಿಂದ ಕೊಸರಿ ಬಿಡಿಸಿಕೊಂಡು ತನ್ನ ಗೆಳತಿಯ ಮನೆಯ ಕಡೆಗೆ ಓಡಿ ಮನೆಯಲ್ಲಿದ್ದ ಗೆಳತಿಯನ್ನು ಕರೆದು ಆಕೆಯಲ್ಲಿ ವಿಷಯ ತಿಳಿಸಿದಾಗ ಆಕೆ ನೊಂದ ಬಾಲಕಿಯನ್ನು ಮನೆಯ ಒಳಗೆ ಕರೆದುಕೊಂಡು ಹೋಗಿ ಅಲ್ಲಿದ್ದ ತನ್ನ ತಂದೆ ಗೆ ಘಟನೆ ಬಗ್ಗೆ ತಿಳಿಸಿದ್ದರು. ಈ ಸಮಯದಲ್ಲಿ ಪದ್ಮನಾಭ ಬಾಲಕಿಯನ್ನು ಹಿಂಬಾಲಿಸಿಕೊಂಡು ಅವಳ ಗೆಳತಿಯ ಮನೆಯ ಬಳಿ ಬಂದು ಗೆಳತಿಯ ತಂದೆಗೆ ಅವಾಚ್ಯ ಶಬ್ದಗಳಿಂದ ಬೈದು ಹುಡುಗಿಯನ್ನು ನಿಮ್ಮ ಮನೆಗೆ ಯಾಕೆ ಸೇರಿಸಿಕೊಂಡೆ, ಅವಳನ್ನು ಹೊರಗೆ ಕಳುಹಿಸು ಎಂಬುದಾಗಿ ಹೇಳಿದ್ದ ಎಂದು ಆರೋಪಿಸಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ತನಿಖೆ ಪೂರ್ಣಗೊಳಿಸಿದ ಧರ್ಮಸ್ಥಳ ಪೊಲೀಸ್ ಠಾಣಾ ಎಸ್.ಐ. ಚಂದ್ರಶೇಖರ್ ಅವರು ಆರೋಪಿ ಪದ್ಮನಾಭನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶೆ ಮಂಜುಳಾ ಇಟ್ಟಿರವರು ಆರೋಪಿ ಪದ್ಮನಾಭನನ್ನು ಅಪರಾಧಿ ಎಂದು ಘೋಷಿಸಿ ಆತನಿಗೆ ಪೋಕ್ಸೋ ಕಾಯ್ದೆ ಕಲಂ 12ರಡಿ ಅಪರಾಧಕ್ಕೆ 3 ವರ್ಷ ಸಾಧಾರಣ ಶಿಕ್ಷೆ ಮತ್ತು ದಂಡ, ಐಪಿಸಿ 354(ಡಿ)ರಡಿಯ ಅಪರಾಧಕ್ಕಾಗಿ 3 ವರ್ಷ ಸಾಧಾರಣ ಶಿಕ್ಷೆ ಮತ್ತು ದಂಡ ಮತ್ತು ಐಪಿಸಿ 341ರಡಿಯ ಅಪರಾಧಕ್ಕಾಗಿ ಒಂದು ವರ್ಷ ಸಾಧಾರಣ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೆ ನೊಂದ ಬಾಲಕಿಗೆ ಪರಿಹಾರ ನೀಡುವಂತೆಯೂ ಆದೇಶಿಸಿದ್ದಾರೆ. ಪ್ರಾಸಿಕ್ಯೂಶನ್ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಸಹನಾದೇವಿ ವಾದಿಸಿದ್ದರು.

LEAVE A REPLY

Please enter your comment!
Please enter your name here