ಕುತ್ಲೂರು : ಸಮುಚಿತ ವಸ್ತುಗಳು ಚಿಕ್ಕದಾದರೂ ಸರಿಯಾದ ಉಪಯೋಗವಾದಾಗ ಅದ್ಭುತ ಫಲಿತಾಂಶ ನೀಡುತ್ತದೆ. ಇಂದು ಸರ್ಕಾರಿ ಶಾಲೆಗಳು ಸರ್ಕಾರ ಮತ್ತು ದಾನಿಗಳಿಂದ ಬಹಳಷ್ಟು ಅನುದಾನಗಳ ಮೂಲಕ ಅತ್ಯುತ್ತಮ ವ್ಯವಸ್ಥೆಗಳನ್ನು ಪಡೆದುಕೊಳ್ಳುತ್ತಿವೆ. ಹಾಗಾಗಿ ಖಾಸಗಿ ಶಾಲೆಗಳೊಂದಿಗೆ ನಿಮ್ಮನ್ನು ತುಲನೆ ಮಾಡಿಕೊಳ್ಳದಿರಿ. ನಿಮಗೇನು ಸಿಗುತ್ತದೋ ಅದನ್ನು ಸಂತಸದಿಂದ ಸ್ವೀಕರಿಸಿ, ಸರಿಯಾದ ರೀತಿಯಲ್ಲಿ ಉಪಯೋಗಿಸಿ. ನಿಮಗೆ ಉಚಿತವಾಗಿ ಸಿಕ್ಕಿದ ಈ ಪುಸ್ತಕವನ್ನು ಸುರಕ್ಷಿತವಾಗಿ ಜ್ಞಾನಾರ್ಜನೆಯ ದೃಷ್ಟಿಯಿಂದ ಉಪಯೋಗಿಸಿ ಅದ್ಭುತ ಫಲಿತಾಂಶವನ್ನು ಪಡೆಯಿರಿ ಎಂದು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷೆ ರೋಟೇರಿಯನ್ ಮನೋರಮಾ ಭಟ್ ನುಡಿದರು.
ಅವರು ಮೇ 25 ರಂದು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಕುತ್ಲೂರು ಇಲ್ಲಿ ನಡೆದ ವರ್ಷದ ಪ್ರಥಮ ಪೋಷಕರ ಸಭೆಯಲ್ಲಿ 20,000 ರೂಪಾಯಿ ಮೌಲ್ಯದ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಿ ಮಾತನಾಡಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀರಾಮಚಂದ್ರ ಭಟ್ ಅಧ್ಯಕ್ಷತೆ ವಹಿಸಿದ್ದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾಲತ, ಗ್ರಾಮ ಪಂಚಾಯತ್ ಸದಸ್ಯೆ ಮೀನಾ, ರೋಟರಿ ಕಾರ್ಯ ದರ್ಶಿ ರೋಟೇರಿಯನ್ ರಕ್ಷಾ ರಾಘನೇಶ್, ಸದಸ್ಯರಾದ ರೋಟೇರಿಯನ್ ಉಮಾ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ಸುಮನಾ ಜಿ ಅವರು ಸ್ವಾಗತಿಸಿದ ಈ ಕಾರ್ಯಕ್ರಮದಲ್ಲಿ ಸಹಶಿಕ್ಷಕಿ ರೂಪ ಕುಮಾರಿ ಮಳೆಬಿಲ್ಲು ಮತ್ತು ಕಲಿಕಾ ಚೇತರಿಕೆ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಕ ಪ್ರಶಾಂತ್ ನಿರೂಪಿಸಿ, ಗೌರವ ಶಿಕ್ಷಕಿ ರಶ್ಮಿ ವಂದಿಸಿದರು.
ಶಾಲಾ ಶಿಕ್ಷಕರು, ಪೋಷಕರು ಸಭೆಯಲ್ಲಿ ಹಾಜರಿದ್ದು ಸಹಕರಿಸಿದರು.