ಬೆಳ್ತಂಗಡಿ: ದೇಶದಲ್ಲೇ ವಿನೂತನವಾದ ಕತ್ತೆ ಹಾಲು ಮಾರಾಟ ಮಾಡುವ ಡೈರಿ ಫಾರ್ಮೊಂದು ಮಂಗಳೂರಿನಲ್ಲಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ.
ರಾಜ್ಯದ ರೈತರಿಗೆ ಇನ್ನು ಮುಂದೆ ಕತ್ತೆಗಳ ಸಾಕಣೆ ಹಾಗೂ ಹಾಲು ಉತ್ಪಾದನೆಯನ್ನು ವಿಶಿಷ್ಟ ಹೈನು ಉದ್ಯಮವಾಗಿ ಪ್ರಾರಂಭಿಸುವ ಅವಕಾಶ ಲಭಿಸಿದೆ. ಶ್ರೇಷ್ಠ ಪೌಷ್ಠಿಕಾಂಶಗಳನ್ನು ಹೊಂದಿರುವ ಕತ್ತೆ ಹಾಲಿಗೆ ಕೊರೊನಾ ಸಾಂಕ್ರಾಮಿಕ ರೋಗ ಬಂದ ಅನಂತರ ಎಲ್ಲಿಲ್ಲದ ಬೇಡಿಕೆ ಬಂದಿದೆ.
ಭಾರತದಲ್ಲಿ ಸದ್ಯಕ್ಕೆ ಒಂದು ಲೀಟರ್ ಕತ್ತೆ ಹಾಲಿಗೆ ಮಾರುಕಟ್ಟೆಯಲ್ಲಿ 5 ರಿಂದ 10 ಸಾವಿರ ರೂ ಇದ್ದು, ವಿದೇಶದಲ್ಲಿಯೂ ಒಂದು ಲೀಟರ್ ಕತ್ತೆ ಹಾಲು ಬರೋಬ್ಬರಿ 12 ಸಾವಿರ ರೂ ವರೆಗೆ ಮಾರಾಟವಾಗುತ್ತಿದೆ. ಕತ್ತೆ ಹಾಲಿಗೆ ಚಿನ್ನದಂತ ಬೆಲೆ ಬಂದಿರುವುದು ಹಾಗೂ ಪ್ರಾಣಿಗಳ ಹಾಲಿನ ಪೈಕಿ ಕತ್ತೆ ಹಾಲು ಸೌಂದರ್ಯ ವರ್ಧಕ, ಅತ್ಯಧಿಕ ಪ್ರೋಟಿನ್ ಅಂಶ ಒಳಗೊಂಡಿರುವುದು ನಾನಾ ಸಂಶೋಧನೆಗಳಿಂದ ದೃಢವಾಗುತ್ತಿದ್ದಂತೆ ಕತ್ತೆ ಸಾಕಣೆಯನ್ನೇ ಹೈನುಗಾರಿಕೆ ರೀತಿ ಉದ್ಯಮವಾಗಿ ಬೆಳೆಸುವುದಕ್ಕೆ ವಿಪುಲ ಅವಕಾಶಗಳು ತೆರೆದುಕೊಳ್ಳುತ್ತಿದೆ.