ನಾಳೆ ಎಸ್ .ಡಿ.ಎಂ ಕಾಲೇಜು ವಠಾರದಲ್ಲಿ ಡಾ.ಬಿ.ಯಶೋವರ್ಮರ ಪಾರ್ಥೀವ ಶರೀರದ ದರ್ಶನ-ಚಾರ್ಮಾಡಿಯಿಂದ ವಾಹನದ ಜಾಥಾ-

 

ಉಜಿರೆ:ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ.ಯಶೋವರ್ಮರವರ ಪಾರ್ಥೀವ ಶರೀರವನ್ನು ನಾಳೆ ಉಜಿರೆಗೆ ತರಲಾಗುತ್ತಿದೆ. ಶಿಸ್ತಿನ ಮಾರ್ಗದರ್ಶಕರಾದ ಡಾ.ಬಿ.ಯಶೋವರ್ಮರನ್ನು ಗೌರವಯುತವಾಗಿ ಬೀಳ್ಕೊಡುವ ಕುರಿತು ಉಜಿರೆ ಎಸ್ ಡಿ ಎಂ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ಸಮಾಲೋಚನ ಸಭೆ ನಡೆಯಿತು. ಶಾಸಕ ಹರೀಶ್ ಪೂಂಜರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಯಶೋವರ್ಮರ ಪಾರ್ಥೀವ ಶರೀರದ ಅಂತಿಮ ದರ್ಶನದ ವ್ಯವಸ್ಥೆ ಬಗ್ಗೆ ಚರ್ಚಿಸಲಾಯಿತು.
ಪಾರ್ಥೀವ ಶರೀರ ಬೆಂಗಳೂರಿನಿಂದ ಬೆಳಗ್ಗೆ ಹೊರಟು ಮಧ್ಯಾಹ್ನ 12.30 ರ ಸುಮಾರಿಗೆ ಚಾರ್ಮಾಡಿ ತಲುಪಲಿದೆ. ನಂತರ ಚಾರ್ಮಾಡಿಯಿಂದ ವಾಹನ ಜಾಥದ ಮೂಲಕ ಉಜಿರೆಗೆ ತಲುಪಿ, ಉಜಿರೆಯಿಂದ ಪಾದಯಾತ್ರೆಯ ಮೂಲಕ ಕಾಲೇಜಿನ ಆವರಣಕ್ಕೆ ಕರೆತಂದು ಅಂತಿಮ‌ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.
ಮಧ್ಯಾಹ್ನ 2 ರಿಂದ 5:30 ರವರೆಗೆ ಕಾಲೇಜಿನ ಆವರಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಅಂತಿಮ ದರ್ಶನದ ನಂತರ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರ ನಡೆಯಲಿದೆ.

ಪ್ರೊಫೆಸರ್ ಯಶೋವರ್ಮರವರ ಅಂತಿಮ  ದರ್ಶನ ವ್ಯವಸ್ಥೆಯ ಕುರಿತಂತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರು ಸ್ಥಳ ಪರಿಶೀಲನೆ ನಡೆಸಿದರು. ಮೃತರ ಗೌರವಾರ್ಥ ಪ್ರೊಫೆಸರ್ ಯಶೋವರ್ಮರವರ ಅಂತಿಮ ದರ್ಶನ ಪಡೆಯಲು ನಾಳೆ ಮುಂಜಾನೆ 12 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಉಜಿರೆ ಪೇಟೆಯ ಎಲ್ಲ ಅಂಗಡಿ ಮುಗ್ಗಟ್ಟುಗಳನ್ನು ಸ್ಥಗಿತಗೊಳಿಸುವುದಾಗಿ ವರ್ತಕ ಸಂಘದ ಅಧ್ಯಕ್ಷರಾದ ಅರವಿಂದ್ ಕಾರಂತರವರು ತಿಳಿಸಿರುತ್ತಾರೆ. ಇದೇ ಸಂದರ್ಭ ಉಜಿರೆ ಪೇಟೆಯಲ್ಲಿ ಹರತಾಳ ಆಚರಿಸುವುದಾಗಿ ಉಜಿರೆ ಆಟೋರಿಕ್ಷಾ ಮಾಲಕ ಚಾಲಕ ಸಂಘ ಮತ್ತು ಗ್ಯಾರೇಜ್ ಮಾಲಕರ ಸಂಘವು ನಿರ್ಧರಿಸಿರುತ್ತದೆ. ಈ ಸಂಬಂಧ ಉಜಿರೆ ಕಾಲೇಜಿನಲ್ಲಿ ನಡೆದ ಸಮಾಲೋಚನಾ ಸಭೆಯ ನೇತೃತ್ವ ವಹಿಸಿ ಮಾತನಾಡಿದ ಶಾಸಕರು ಉಜಿರೆ ಗ್ರಾಮವಲ್ಲದೆ ಇಡೀ ನಾಡಿನ ಶಿಕ್ಷಣ ವ್ಯವಸ್ಥೆಗೆ ಪ್ರೊಫೆಸರ್ ಯಶೋವರ್ಮರವರು ಅನನ್ಯ ಕಾಣಿಕೆಯನ್ನು ನೀಡಿದ್ದು, ಅವರ ಅಂತಿಮ ಯಾತ್ರೆಯು ಗೌರವಯುತವಾಗಿ ನಡೆಸುವಂತೆ ಸಹಕಾರ ನೀಡಬೇಕೆಂದು ಕೋರಿದರು. ಸಭೆಯಲ್ಲಿ ಉಜಿರೆ ಗ್ರಾಮದ ಹಿರಿಯ ನಾಗರಿಕರು ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲರು ಮತ್ತಿತರ ಅಧಿಕಾರಿಗಳು, ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿಗಳು,  ಶರತ್‌ಕೃಷ್ಣ ಪಡ್ಡೆಟ್ಟಾಯ, ಲಕ್ಷ್ಮೀ ಗ್ರೂಪ್‌ನ  ಮೋಹನ್, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಬೆಳ್ತಂಗಡಿ ಆರಕ್ಷಕ ಠಾಣೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.