ಬೆಳ್ತಂಗಡಿ: ಇದೀಗ ಸದ್ದು ಮಾಡುತ್ತಿರುವ ಟೊಮೆಟೋ ಜ್ವರ ಅಥವಾ ಟೊಮೆಟೋ ಫ್ಲೂ ಒಂದು ವೈರಾಣುವಿನಿಂದ ಹರಡುವ ಸೋಂಕು ಜ್ವರವಾಗಿದ್ದು ಐದು ವರ್ಷಗಳಿಗಿಂತ ಕೆಳಗಿರುವ ಮಕ್ಕಳಲ್ಲಿ ಈ ಜ್ವರ ಕಾಣಿಸಿಕೊಳ್ಳುತ್ತಿದೆ. ಸುಮಾರು 80 ಮಕ್ಕಳಲ್ಲಿ ಈ ಜ್ವರ ಕಾಣಿಸಿಕೊಂಡಿದ್ದು ಕರ್ನಾಟಕ ಕೂಡಲೇ ಜ್ವರದ ಬಗ್ಗೆ ಪ್ರಕಟಣೆ ಹೊರಡಿಸಿ. ಬಾಯಿಯಲ್ಲಿ ಮತ್ತು ನಾಲಗೆಯಲ್ಲಿಯೂ ಕೆಲವೊಂದು ರೋಗಿಗಳಲ್ಲಿ ಗುಳ್ಳೆ ಕಾಣಿಸಿಕೊಂಡ ಬಗ್ಗೆ ವರದಿಯಾಗಿದೆ. ಹೆಚ್ಚಾಗಿ ಕೈ ಕಾಲು , ಹೊಟ್ಟೆಭಾಗದಲ್ಲಿ ದೊಡ್ಡದಾದ ಕೆಂಪು ಗುಳ್ಳೆಗಳು ಕಂಡು ಬರುತ್ತದೆ. ಮಕ್ಕಳಲ್ಲಿ ಜ್ವರ ಬಂದ ತಕ್ಷಣವೇ ವೈದ್ಯರಲ್ಲಿ ತೋರಿಸಿಕೊಳ್ಳಿ ಎಂದು ಎಚ್ಚರಿಕೆ ನೀಡಿದೆ.
ಜ್ವರದ ಲಕ್ಷಣಗಳು:
ವಿಪರೀತ ಜ್ವರ, ಸುಸ್ತು ಮತ್ತು ಮೈಕೈನೋವು.
ಚರ್ಮದಲ್ಲಿ ಕೆಂಪು ಗುಳ್ಳೆಗಳು ಮತ್ತು ತುರಿಕೆ ಕಂಡು ಬರುತ್ತದೆ.
ವಿಪರೀತ ನಿರ್ಜಲೀಕರಣ
ಗಂಟು ನೋವು, ಹೊಟ್ಟೆಯಲ್ಲಿ ನೋವು ಇರಬಹುದು.
ವಾಂತಿ, ವಾಕರಿಕೆ ಕಂಡು ಬರುವುದು.
ಕೆಮ್ಮು, ಅಕ್ಷಿ ಹಾಗೂ ಮೂಗಿನಲ್ಲಿ ದ್ರವ ಸೋರುವಿಕೆ.
ಭೇದಿ ಕೂಡಾ ಕಂಡುಬರಬಹುದು.
ವಿಪರೀತ ಜ್ವರವಿದ್ದಲ್ಲಿ ಕಾಲು ಕೈಗಳಲ್ಲಿ ಚರ್ಮದ ಬಣ್ಣ ಬದಲಾಗುವು ಸಾಧ್ಯತೆ ಇರುತ್ತದೆ.
ಮುನ್ನೆಚ್ಚರಿಕಾ ಕ್ರಮಗಳು?
ಎಲ್ಲಾ ವೈರಾಣು ಸೋಂಕಿನಂತೆ ಈ ಜ್ವರವು ಸಾಂಕ್ರಾಮಿಕವಾಗಿ ವೇಗವಾಗಿ ಹರಡುತ್ತದೆ. ಈ ಕಾರಣದಿಂದ ಅಂತಹಾ ವ್ಯಕ್ತಿಯನ್ನು ಬೇರೆಯವರಿಂದ ಬೇರ್ಪಡಿಸಿ ಇಡತಕ್ಕದ್ದು. ಇಂತಹ ವ್ಯಕ್ತಿಗಳು ಬಳಸಿದ ಬಟ್ಟೆ, ತಟ್ಟೆ ಹಾಗೂ ಇನ್ನಿತರ ವಸ್ತುಗಳನ್ನು ಸರಿಯಾಗಿ ತೊಳೆದು ಸೋಂಕು ನಾಶಕ ದ್ರಾವಣ ಬಳಸಿದ ಬಳಿಕವೇ ಇತರರು ಬಳಸತಕ್ಕದ್ದು.
ಮೈಮೇಲೆ ಬಿದ್ದ ಕೆಂಪು ಗುಳ್ಳೆಗಳನ್ನು ಅದರ ಪಾಡಿಗೆ ಬಿಡಬೇಕು . ಗುಳ್ಳೆಗಳನ್ನು ಉಗುರಿನಿಂದ ಒಡೆಯಬಾರದು.
ಮಕ್ಕಳಿಗೆ ಸಾಕಷ್ಟು ದ್ರವಾಹಾರ, ಜ್ಯೂಸ್ ಮತ್ತು ನೈಸರ್ಗಿಕ ಪಾನೀಯ ನೀಡತಕ್ಕದ್ದು.
ಮಕ್ಕಳಲ್ಲಿ ವಿಶೇಷವಾಗಿ ವಿಶ್ರಾಂತಿ ಅತೀ ಅಗತ್ಯ.
ಇದು ತನ್ನಿಂತಾನೆ ಗುಣವಾಗುವ ಜ್ವರವಾಗಿದ್ದು ಒಂದು ವಾರದಲ್ಲಿ ಕಡಿಮೆಯಾಗುತ್ತದೆ. ಯಾವುದೇ ನಿರ್ದಿಷ್ಟ ಚಿಕಿತ್ಸೆ ಇರುವುದಿಲ್ಲ