ಬೆಳ್ತಂಗಡಿ: ಉಜಿರೆ ಗ್ರಾಮದ ಗುರಿಪಳ್ಳದಲ್ಲಿ ಇತ್ತೀಚೆಗೆ ನಡೆದ ಸಾರ್ವಜನಿಕರ ಎದುರು ಯುವತಿಯ ಬಟ್ಟೆ ಹರಿದು ಎಳೆದು ಅರೆಬೆತ್ತಲೆಗೊಳಿಸಿ ಅವಮಾನಿಸಿ ಹಾಗೂ ಉಳಿದ ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಕುರಿತು ತಪ್ಪಿತಸ್ತರಿಗೆ ಶಿಕ್ಷೆ ಹಾಗೂ ಸಂತ್ರಸ್ತೆಯರಿಗೆ ನ್ಯಾಯಕ್ಕಾಗಿ ಮೇ.9 ರಂದು ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರು ಅನಿರ್ಧಿಷ್ಟ ಕಾಲ ಧರಣಿ ನಡೆಸಲು ಎಲ್ಲಾ ಸಮಾನ ಮನಸ್ಕ ತೀರ್ಮಾನಿಸಿದೆ ಎಂದು ಮಾಜಿ ಶಾಸಕ ಕೆ ವಸಂತ ಬಂಗೇರ ತಿಳಿಸಿದರು.
ಅವರು ಬೆಳ್ತಂಗಡಿ ಗುರುನಾರಾಯಣ ಸಭಾಭವನದಲ್ಲಿ ಮೇ.4 ರಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಉಜಿರೆ ಗ್ರಾಮದ ಗುರಿಪಳ್ಳ ರಸ್ತೆಯ ಹಲಕ್ಕೆ ಎಂಬಲ್ಲಿ ನಿವೇಶನದ ವಿಚಾರವಾಗಿ ಗಲಾಟೆ ಮಾಡಲು ಬಂದ ದುಷ್ಕರ್ಮಿಗಳ ಗುಂಪು, ಸಾರ್ವಜನಿಕರು ಓಡಾಡುವ ಉಜಿರೆ ಗುರಿಪಳ್ಳ ರಸ್ತೆಯಲ್ಲಿಯೇ ಸಾರ್ವಜನಿಕರ ಎದುರು ಓರ್ವ ಯುವತಿಯ ಆಕೆ ಧರಿಸಿದ್ದ ಬಟ್ಟೆಯನ್ನು ಹರಿದು ಎಳೆದು ಬಟ್ಟೆಯನ್ನು ಹರಿದು ಎಳೆದು ಅರೆಬೆತ್ತಲೆಗೊಳಿಸಿ ಅವಮಾನಿಸಿರುವುದು ಹಾಗೂ ಉಳಿದ ಮಹಿಳೆಯರಿಗೂ ಹಲ್ಲೆ ನಡೆಸಿ ಅವಮಾನಿಸಿರುವುದು ಖಂಡನೀಯ. ಹಿಂದೂ ಹಿಂದೂ ನಾವೆಲ್ಲ ಒಂದು, ಮಹಿಳೆಯರೆಂದರೆ ಮಾತೆಗೆ ಸಮಾನರು ಎಂದು ಬಾಯಿ ಪಟಾಕಿ ಬಿಡುತ್ತಾ ಮಾತೆಯರ ಹಾಗೂ ಹಿಂದುಗಳ ಮಾನ ಬೀದಿ ಪಾಲು ಮಾಡುವ ಸಂಘಪರಿವಾರದ ಹೇಯಕೃತ್ಯ.
ಉಜಿರೆ ಅರೆಬೆತ್ತಲೆ ಪ್ರಕರಣದ ಆರೋಪಿಯಲ್ಲಿ ಓರ್ವ ಬಿಜೆಪಿ ಎಸ್.ಟಿ ಮೋರ್ಚದ ಜಿಲ್ಲಾಧ್ಯಕ್ಷ ಹಾಗೂ ಉಳಿದವರು ಆತನ ತಂಡ. ಆದ್ದರಿಂದ ಇಲ್ಲಿಯ ಶಾಸಕರು ಈ ಆರೋಪಿಗಳನ್ನು ಅಡಗಿಸಿಟ್ಟಿರುವುದು ಮಹಿಳಾ ದೌರ್ಜನ್ಯಕ್ಕೆ ಬಿಜೆಪಿಯದ್ದೇ ಕುಮ್ಮಕ್ಕು ಎಂಬುವುದು ಸಾಬೀತಾಗಿದೆ.
ಸರಕಾರಿ ಜಮೀನಿನಲ್ಲಿ ಇರುವ ವಾಸದ ಮನೆಯನ್ನು ತೆಗೆಯಬೇಕು ಎನ್ನಲು ಇವರು ಯಾರು? ಸರಕಾರಿ ಜಮೀನಿನಲ್ಲಿ ಮನೆ ಇರುವುದಕ್ಕೆ 94ಸಿ ಅಡಿ ಹಕ್ಕು ಪತ್ರ ಇದ್ದೂ ಕೂಡ ಮಹಿಳೆಗೆ ರಕ್ಷಣೆ ನೀಡಬೇಕಾದ ಇಲಾಖೆ ಆರೋಪಿಗಳ ಪರ ನಿಂತಿರುವಂತೆ ಅನುಮಾನ ಕಾಡತೊಡಗಿದೆ. ಈ ಉಜಿರೆಯ ಈ ಸಮಾಜ ಘಾತುಕ ಶಕ್ತಿಗಳು ಹಕ್ಕಿನ ಭೂಮಿಯಲ್ಲಿ ಇರಬಾರದೆಂದು ಬಡ ಮಹಿಳೆಯರ ಬಟ್ಟೆ ಬಿಚ್ಚುತ್ತಾರೆ ಅದೂ ಬಿಜೆಪಿ ಪಕ್ಷದ ಎಸ್.ಟಿ ಮೋರ್ಚದ ಜಿಲ್ಲಾಧ್ಯಕ್ಷರ ನಾಯಕತ್ವದಲ್ಲಿ ನಡೆಯುತ್ತದೆ ಎಂದರೆ ಇವರಿಗೆ ತಾಯಂದಿರ ಮೇಲೆ, ಹಿಂದುಗಳ ಮೇಲೆ ಕಾನೂನಿನ ಮೇಲೆ ನಂಬಿಕೆ ಇಲ್ಲದವರೆಂದೇ ಭಾವಿಸಬೇಕಾಗಿದೆ ಯುವತಿಯ ಮಾನಹಾನಿ ಮಾಡಿದ್ದನ್ನು ಸೌಜನ್ಯಕ್ಕಾದರೂ ಖಂಡಿಸದ ಹಾಗೂ ಮಹಿಳೆಗೆ ಸಾಂತ್ವನ ಹೇಳದ ಎಫ್.ಐ.ಆರ್ ಆಗಿ 10 ದಿನ ಕಳೆದರೂ ಆರೋಪಿಗಳ ಬಂಧನಕ್ಕೆ ಆಗ್ರಹಿಸದ ಶಾಸಕರ ನಡೆ ಕೂಡ ಹಿಂದು ವಿರೋಧಿ, ಮಹಿಳಾ ವಿರೋಧಿ ನಡೆಯಾಗಿದ್ದು ಬಿಜೆಪಿ ಆಳಿತ ಈಗ ಮಹಿಳಾ ದೌರ್ಜನ್ಯ ಸರಕಾರ ಆಗಿದೆ ಇದು ಖಂಡನೀಯ.
ಉಜಿರೆಯಲ್ಲಿ ಮಹಿಳಾ ದೌರ್ಜನ್ಯ ಎಸಗಿದ ಆರೋಪಿಗಳನ್ನು ತಕ್ಷಣ ಬಂಧಿಸಬೇಕು, ಮಹಿಳೆಯರಿಗೆ ಸಂತ್ರಸ್ತ ಕುಟುಂಬಗಳಿಗೆ ರಕ್ಷಣೆ ಒದಗಿಸಬೇಕು ಹಾಗೂ ಅವರಿಗೆ ಮೂರು ಕುಟುಂಬಗಳಿಗೂ ಸರಕಾರವೇ ಹೊಸ ಮನೆ ಕಟ್ಟಿಕೊಡಬೇಕು ಎಂದು ಒತ್ತಾಯಿಸಿ ಅನಿರ್ಧಿಷ್ಟ ಕಾಲ ಧರಣಿ ನಡೆಸಲು ಸಮಾನ ಮನಸ್ಕ ಸಂಘಟನೆಗಳು ತೀರ್ಮಾನಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೇ.9 ರಂದು ನಡೆಯಲಿರುವ ಅನಿರ್ಧಿಷ್ಟಾವಧಿ ಧರಣಿಯಲ್ಲಿ ವಿಧಾನ ಪರಿಷತ್ ಶಾಸಕ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಪಕ್ಷದ ವಿವಿಧ ನಾಯಕರುಗಳು , ಕಮ್ಯುನಿಸ್ಟ್ ಪಕ್ಷದವರು, ಉಜಿರೆಯ ಮಹಿಳಾ ಹೋರಾಟ ಸಮಿತಿ, ಜನವಾಧಿ ಮಹಿಳಾ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು ಭಾಗಿಯಾಗಲಿದ್ದಾರೆ ಎಂದರು.
ಕಮ್ಯುನಿಸ್ಟ್ ಪಕ್ಷದ ನಾಯಕ ಬಿಎಂ ಭಟ್ ಮಾತನಾಡಿ ಬಿಜೆಪಿ ಪಕ್ಷ ಹಿಂದುಗಳ ರಕ್ಷಣೆ ಮಾಡುತ್ತೇವೆಂದು ಹೇಳುತ್ತಾ ಹಿಂದೂ ದಲಿತರು ಮಹಿಳಾ ವಿರೋಧಿ ಚಟುವಟಿಕೆಗಳು ಮಾಡುತ್ತಿದೆ ಎಂದರು.
ಉಜಿರೆ ಸಂತ್ರಸ್ತೆ ಯ ಸಹೋದರಿ ಜ್ಯೋತಿ ಮಾತನಾಡಿ ನಮ್ಮ ಸಮಾಜದ ನಾಯಕರು ನ್ಯಾಯ ಕೊಡುತ್ತೇನೆಂದು ಹೇಳಿ ಈವರೆಗೆ ನಮ್ಮ ಮನೆಗೂ ಬರಲಿಲ್ಲ. ಮಾನಸಿಕವಾಗಿ ನಮ್ಮ ಮನೆಯವರು ಕಷ್ಟದಲ್ಲಿದ್ದಾರೆ ಈ ಘಟನೆಗೆ ಕಾರಣವಾದ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿಯೂ ತಾರತಮ್ಯ ಮಾಡುತ್ತಿದ್ದಾರೆ ಶೀಘ್ರವಾಗಿ ಅವರನ್ನು ಬಂಧಿಸಿ ನಮಗೆ ನ್ಯಾಯ ಕೊಡಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪ್ರದೇಶ ಸಮಿತಿ ಬೆಳ್ತಂಗಡಿ ಗ್ರಾಮೀಣ ಅಧ್ಯಕ್ಷ ರಂಜನ್ ಜಿ ಗೌಡ, ಬ್ಲಾಕ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್ ಕೆ, ಜನವಾದಿ ಮಹಿಳಾ ಸಂಘಟನೆಯ ತಾಲೂಕು ಸಮಿತಿ ಸಂಚಾಲಕಿ ಕಿರಣ್ ಪ್ರಭಾ, ಮಹಿಳಾ ದೌರ್ಜನ್ಯ ವಿರೋಧಿ ಹೋರಾಟ ಸಮಿತಿಯ ಸಂಚಾಲಕಿ ಅನಿತಾ , ನೆಬಿಸಾ ಉಪಸ್ಥಿತರಿದ್ದರು.