ಮತಾಂತರ ನಿಷೇಧ ಕಾಯ್ದೆ ಹಿಂಪಡೆಯಲು ಒತ್ತಾಯಿಸಿ ಬೆಳ್ತಂಗಡಿಯಲ್ಲಿ ಸಿಪಿಐಎಂ ಪ್ರತಿಭಟನೆ


ಬೆಳ್ತಂಗಡಿ : ರಾಜ್ಯದ ಬಿಜೆಪಿ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಮತಾಂತರ ನಿಷೇಧ ಕಾಯ್ದೆ ಸಂವಿಧಾನ ವಿರೋಧಿ ಕಾಯ್ದೆ ಎಂದು ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ನ್ಯಾಯವಾದಿ ಶಿವಕುಮಾರ್ ಎಸ್. ಎಂ ಹೇಳಿದರು.

ಅವರು ಬೆಳ್ತಂಗಡಿ ಮಿನಿ ವಿಧಾನಸೌಧದ ಎದುರು ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ನಡೆದ ಮತಾಂತರ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯಲು ಒತ್ತಾಯಿಸಿ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.

ಬಿಜೆಪಿ ಸರ್ಕಾರ ಜಾರಿಗೊಳಿಸಿದ ಮತಾಂತರ ನಿಷೇಧ ಕಾಯಿದೆಯು ಸಮಾಜದಲ್ಲಿ ಧರ್ಮ, ಧರ್ಮಗಳ ನಡುವೆ ಅಪನಂಬಿಕೆ ಮೂಡಿಸಿ, ಅಶಾಂತಿ ಸೃಷ್ಟಿಸುವಂತಿದೆ. ಸಂಘಪರಿವಾರ ಈ ಕಾಯ್ದೆಯನ್ನು ದುರುಪಯೋಗ ಮಾಡಿಕೊಂಡು ಅಮಾಯಕರ ಮೇಲೆ ದಾಳಿ, ದೌರ್ಜನ್ಯ ನಡೆಸುವ ಸಾಧ್ಯತೆಯಿದೆ ಎಂದು ಆರೋಪಿಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಿಪಿಐ(ಎಂ) ನಾಯಕ ಶೇಖರ್ ಲಾಯಿಲ ಹಿಂದೂ ಧರ್ಮದಲ್ಲಿರುವ ಅಸ್ಪೃಶ್ಯತೆ, ದಬ್ಬಾಳಿಕೆ, ದೌರ್ಜನ್ಯವನ್ನು ತೊಡೆದುಹಾಕಲು ಕಠಿಣ ಕಾಯ್ದೆ, ಕಾನೂನುಗಳನ್ನು ಜಾರಿಗೆ ತರುವ ಬದಲಾಗಿ ಹಿಂದೂ ಧರ್ಮದ ಅಸಮಾನತೆಯನ್ನು ವಿರೋಧಿಸಿ ಸಂವಿಧಾನ ಬದ್ದವಾಗಿ ಇನ್ನೊಂದು ಧರ್ಮವನ್ನು ಸ್ವೀಕರಿಸಿದರೆ ತಪ್ಪು ಹೇಗಾಗುತ್ತದೆ ಎಂದು ಪ್ರಶ್ನಿಸಿದ ಅವರು ದೇಶದ ಸಂವಿಧಾನ ಒಬ್ಬ ವ್ಯಕ್ತಿ ತನ್ನ ಮತ, ಧರ್ಮವನ್ನು ತನಗೆ ತನ್ನ ಇಷ್ಟದಂತೆ ಬದಲಾಯಿಸಲು ಅನುವು ಮಾಡಿಕೊಡುತ್ತದೆ ಎಂಬ ಸಾಮಾನ್ಯ ಜ್ಞಾನ ಇಲ್ಲದವರಂತೆ ಸಂವಿಧಾನದ ಮೇಲೆ ಸವಾರಿ ನಡೆಸುವ ಈ ಕಾಯ್ದೆಯನ್ನು ತಕ್ಷಣ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಸಿಪಿಐ(ಎಂ) ತಾಲೂಕು ಸಮಿತಿ ಮುಖಂಡರಾದ ವಸಂತ ನಡ, ನ್ಯಾಯವಾದಿ ಸುಕನ್ಯಾ ಹೆಚ್, ಸುಧಾ ಕೆ ರಾವ್, ಕೆ.ಜೆ ಜೋಸ್ ಕಳೆಂಜ, ಬೇಬಿ ಕಳೆಂಜ, ಜಯನ್ ಮುಂಡಾಜೆ, ಡಿವೈಎಫ್‌ಐ ತಾಲೂಕು ಮುಖಂಡರಾದ ಸುಜೀತ್ ಉಜಿರೆ, ಸಂಜೀವ ಆರ್ ಅತ್ತಾಜೆ, ಸುಹಾಸ್ ಬೆಳ್ತಂಗಡಿ, ಸುದೀಪ್ ಬೆಳ್ತಂಗಡಿ ವಹಿಸಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.