ಧರ್ಮಸ್ಥಳ : ಪ್ರತಿ ವರ್ಷವೂ ಗಣರಾಜ್ಯೋತ್ಸವ ಪೆರೇಡಿನಲ್ಲಿ ಧಾರ್ಮಿಕ, ಸಾಮಾಜಿಕ ಶೈಕ್ಷಣಿಕ ಕ್ರಾಂತಿಕಾರರ ಸ್ತಬ್ಧ ಚಿತ್ರವನ್ನು ಅಳವಡಿಸುವುದು ಸರಕಾರದ ರೂಢಿಯಾಗಿದೆ. ಅದೇ ರೀತಿ ಈ ವರ್ಷವೂ ಕೂಡ ಈ ವಿಚಾರವನ್ನು ಪುನರ್ ಪರಿಶೀಲಿಸಬೇಕೆಂದು ಕರ್ನಾಟಕ ಸರಕಾರದ ಮೂಲಕ ಕೇಂದ್ರ ಸರಕಾರವನ್ನು ಒತ್ತಾಯಿಸುತ್ತೇನೆ ಎಂದು ಕನ್ಯಾಡಿ ಶ್ರೀರಾಮಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ತಮ್ಮ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.
ಬ್ರಹ್ಮಶ್ರೀ ನಾರಾಯಣಗುರುಗಳ ಚಿತ್ರವಿದ್ದ ಸ್ತಬ್ಧಚಿತ್ರವನ್ನು ಕೇಂದ್ರದ ಗಣರಾಜ್ಯೋತ್ಸವ ಸಮಿತಿ ತಿರಸ್ಕರಿಸಿದೆ ಎಂದು ನಮಗೆ ಮಾಧ್ಯಮದ ಮೂಲಕ ತಿಳಿದುಬಂತು. ಯಾವ ಮಾನದಂಡದಲ್ಲಿ ಈ ಸ್ತಬ್ಧ ಚಿತ್ರವನ್ನು ತಿರಸ್ಕರಿಸಿದೆ ಎಂದು ನಮಗೆ ತಿಳಿದು ಬಂದಿಲ್ಲ. ಮನಕುಲದ ಒಳಿತಾಗಿ ನಿರಂತರ ಸೇವೆ ಸಲ್ಲಿಸುವವರು ಎಲ್ಲ ಜಾತಿ ಜನಾಂಗದ ಉದ್ಧಾರಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರು ದಾರ್ಶನಿಕರು. ಒಂದೊಮ್ಮೆಗೆ ಕೇರಳದಲ್ಲಿ ಜನಸಾಮಾನ್ಯರು ಅಶ್ಪೃಶ್ಯದ ಪೈಶಾಚಿಕೆಯಿಂದ ನರಳುತ್ತಿರುವ ಸಂದರ್ಭದಲ್ಲಿ ಯಾವುದೇ ದ್ವಂದ್ವ, ಗೊಂದಲ ಆಶಾಂತಿಯನ್ನು ಎಬ್ಬಿಸದೆ ವೇದ ಉಪನಿಷತ್ತುಗಳ ಶಾಂತಿ ಮಂತ್ರದ ಸಿದ್ಧಾಂತದಂತೆ ಸಮಾಜವನ್ನು ಪರಿವರ್ತಿಸಿದ ಏಕೈಕ ಮಹಾನ್ ದಾರ್ಶನಿಕರೇ ಬ್ರಹ್ಮಶ್ರೀ ನಾರಾಯಣಗುರುಗಳು. ಅಂತಹ ಗುರುಗಳಿಗೆ ಇಂದು ವಿಶ್ವದ ಮೂಲೆ ಮೂಲೆಯಲ್ಲಿ ಪೂಜೆ ನಡೆಯುತ್ತಿದೆ. ಅಂಥವರ ಸ್ತಬ್ದ ಚಿತ್ರಕ್ಕೆ ಅವಕಾಶ ನಿರಾಕರಿಸಿರುವುದು ಖಂಡನೀಯ ಎಂದು ತಿಳಿಸಿದ್ದಾರೆ.