ಉಡುಪಿ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಶ್ರೀ ಜನಾರ್ದನ ದೇವಸ್ಥಾನಕ್ಕೆ ಭೇಟಿ

ಉಜಿರೆ: ಮುಂದಿನ ಜ 18 ರಂದು ಉಡುಪಿ ಶ್ರೀ ಕೃಷ್ಣ ಮಠದ ಅಧಿಕಾರ ಹಾಗು ಎರಡು ವರ್ಷ ಕಾಲ ಶ್ರೀ ಕೃಷ್ಣನ ಪೂಜಾ ಕಾರ್ಯವನ್ನು ನಿರ್ವಹಿಸಲು ನಾಲ್ಕನೇ ಬಾರಿ ಪರ್ಯಾಯ ಸರ್ವಜ್ಞ ಪೀಠಾರೋಹಣ ಗೈಯಲಿರುವ ಉಡುಪಿ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಡಿ .31 ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನಕ್ಕೆ ಭೇ ಟಿ ನೀಡಿ ಪರಿವಾರ ದೇವರ ದರ್ಶನ ಪಡೆದು,ಸೇವೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು .

ಶ್ರೀ ಮಧ್ವಾಚಾರ್ಯರು ಕುಳಿತು ಮಧ್ವವಿಜಯ ಗ್ರಂಥ ರಚಿಸಿದ ಸನ್ನಿಧಾನದ ಮಧ್ವ ಮಂಟಪಕ್ಕೆ ತೆರಳಿ ಪೂಜೆ ನೆರವೇರಿಸಿ ದರು. ದೇವಸ್ಥಾನದ ಪರವಾಗಿ ಆಡಳಿತ ಮೊಕ್ತೇಸರ ವಿಜಯರಾಘವ ಪಡುವೆಟ್ನಾಯರು ಶ್ರೀಗಳಿಗೆ ಮಾಲಾರ್ಪಣೆಗೈದು, ಫಲಕಾಣಿಕೆ ಸಮರ್ಪಿಸಿದರು. ಶರತ್ ಕೃಷ್ಣ ಪಡುವೆಟ್ನಾಯರು ಶ್ರೀಗಳವರನ್ನು ಸಕಲ ಗೌರವಗಳೊಂದಿಗೆ ಬರಮಾಡಿಕೊಂಡರು.ಅರ್ಚಕ ವೇದಮೂರ್ತಿ ರಾಮಚಂದ್ರ ಹೊಳ್ಳ ಪೂಜಾ ಕಾರ್ಯ ನೆರವೇರಿಸಿದರು .

ಈ ಸಂದರ್ಭದಲ್ಲಿ ಆಶೀರ್ವಚನಗೈದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಗಳವರು ಉಡುಪಿ ಶ್ರೀ ಕೃಷ್ಣ ಮಠದ ಪರಂಪರೆಯಲ್ಲಿ ಸರದಿಯಂತೆ 501 ನೇ ವರ್ಷದ ಪರ್ಯಾಯ ಪೀಠಾರೋಹಣಗೈಯಲಿದ್ದು ಶ್ರೀ ಕೃಷ್ಣನ ಮದ್ಯಾಹ್ನ ಮಹಾಪೂಜೆ ಹಾಗು ರಾತ್ರಿಯ ಚಾಮರಸೇವೆಯನ್ನು ಪರ್ಯಾಯ ಶ್ರೀಗಳವರೇ ನಿರ್ವಹಿಸಿ,ಉಳಿದ ಪೂಜೆಗಳನ್ನು ಅಷ್ಟ ಮಠ ದ ಯತಿಗಳು ನಡೆಸುವುದು ನಡೆದುಕೊಂಡು ಬಂದಿದೆ. ಎರಡು ವರ್ಷ ಕಾಲ ಪರ್ಯಾಯ ಯತಿಗಳು ಮಠದ ಜ್ಞಾನಯಜ್ಞ, ಅನ್ನದಾನ ,ಹಾಗು ಅಭಯ ದಾನ ನಡೆಸುವುದು ಪದ್ಧತಿ . ತೀರ್ಥಯಾತ್ರೆಮಾಡಿ ಅಭಿಮಾನಿಗಳಿಗೆ ಪರ್ಯಾಯಕ್ಕೆ ಅಹ್ವಾನ ನೀಡಿ ಉಜಿರೆ ಶ್ರೀ ಜನಾರ್ದನ ಕ್ಷೇತ್ರಕ್ಕೆ ಬಂದು ದರ್ಶನ ಪಡೆದಿದ್ದೇವೆ. ಆಚಾರ್ಯ ಮಧ್ವರು ಉಚ್ಚಭೂತಿ (ಉಜಿರೆ) ಗೆ ಬಂದು ಇಲ್ಲಿ ಮಧ್ವ ವಿಜಯ ಗ್ರಂಥ ರಚಿಸಿದ ಉಲ್ಲೇಖವಿದ್ದು ಅವರು ಕುಳಿತುಕೊಂಡ ಬಂಡೆಕಲ್ಲು ಸಂದರ್ಶಿಸಿ ಅವರಲ್ಲಿ ಪರ್ಯಾಯ ನಿರ್ವಿಗ್ನವಾಗಿ ನಡೆಯುವಂತೆ ಪ್ರಾರ್ಥಿಸಿದ್ದೇವೆ . ಮಠದ ಅಭಿಮಾನಿಗಳು ಹಾಗು ಭಕ್ತರನ್ನು ಪರ್ಯಾಯ ಅವಧಿಯಲ್ಲಿ ಬಂದು ದರ್ಶನ ಪಡೆಯುವಂತೆ ಆಹ್ವಾನಿಸುತ್ತಿದ್ದೇವೆ. ಉಜಿರೆಯ ಅಭಿಮಾನಿಗಳ ಭಕ್ತಿಪೂರ್ವಕ ಸ್ವಾಗತದಿಂದ ಸಂತೋಷವಾಗಿದೆ ಎಂದು ನುಡಿದು ನೆರೆದ ಭಕ್ತಾದಿಗಳಿಗೆ ಫಲ ಮಂತ್ರಾಕ್ಷತೆ ನೀಡಿ ,ಪರ್ಯಾಯ ಮಹೋತ್ಸವದ ರಾಯಸ ಆಮಂತ್ರಣ ನೀಡಿ ಅನುಗ್ರಹಿಸಿದರು. ಪರ್ಯಾಯ ಅವಧಿಯಲ್ಲಿ ಜ್ಞಾನಯಜ್ಞ , ಭಕ್ತಾದಿಗಳಿಗೆ ಅನ್ನದಾನ ಹಾಗು ಧಾರ್ಮಿಕ ಕಾರ್ಯಕ್ರಮಗಳನ್ನು ಸರಕಾರದ ನಿಯಮಾನುಸಾರ ನಡೆಸಲು ಯೋಜಿಸಿದ್ದೇವೆ ಎಂದರು.

ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ,ಶ್ರೀ ಜನಾರ್ದನ ಸೊಸೈಟಿ ಅಧ್ಯಕ್ಷ ಗಂಗಾಧರ ರಾವ್ ಕೆವುಡೇಲು, ದಯಾನಂದ ಎಳಚಿತ್ತಾಯ ,ಶ್ರೀಪತಿ ಜೋಗಿತ್ತಾಯ , ಜಯರಾಮ ಪಡ್ಡಿಲ್ಲಾಯ , ಶ್ರೀಕಾಂತ ರಾವ್ ಮುಂದ್ರುಪ್ಪಾಡಿ , ಸಾಂತೂರು ಶ್ರೀನಿವಾಸ ತಂತ್ರಿ ,ಸತ್ಯನಾರಾಯಣ ಎರ್ಕಾಡಿತ್ತಾಯ , ತುಳು ಶಿವಳ್ಳಿ ಮಹಿಳಾ ಘಟಕಾಧ್ಯಕ್ಷೆ ಸ್ವರ್ಣಾ ಶ್ರೀರಂಗ ನೂರಿತ್ತಾಯ ,ಶೋಭಾ ಕುದ್ರೆನ್ತಯ ,ಸರೋಜಾ ಕೆದಿಲಾಯ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.