ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಪ್ರಯುಕ್ತ ಸಾಹಿತ್ಯ ಸಮ್ಮೇಳನ: 89 ನೇ ಅಧಿವೇಶನ ಉದ್ಘಾಟನೆ

ಸಾಹಿತ್ಯದಿಂದ ಸುಸ್ಥಿರ ಸಮಾಜ ನಿರ್ಮಾಣ : ಸಚಿವ ಡಾ. ಕೆ. ಸುಧಾಕರ್

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಲಕ್ಷದೀಪೋತ್ಸವದ ಅಂಗವಾಗಿ ಸಾಹಿತ್ಯ ಸಮ್ಮೇಳನ-89ನೇ ಅಧಿವೆಶನವು ಕಾರ್ಯಕ್ರಮವು ಇಂದು(ಡಿ.3) ಅಮೃತವರ್ಷಿಣಿ ಸಭಾ ಭವನದಲ್ಲಿ ಜರುಗಿತು.

ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ವಿ ಹೆಗ್ಗಡೆ ದಂಪತಿಯ ಉಪಸ್ಥಿತಿಯಲ್ಲಿ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ  ಉದ್ಘಾಟಿಸಿದರು.

ಬಳಿಕ ಅವರು ಮಾತನಾಡಿ, ದೀಪ ಬೆಳಕಿನ ಸಂಕೇತ. ಲಕ್ಷದೀಪೋತ್ಸವ ಕೇವಲ ಉತ್ಸವ ಅಲ್ಲ. ಶಿಕ್ಷಣ, ಮಾಹಿತಿ ಮತ್ತು ಜಾಗೃತಿಯೊಂದಿಗೆ ಭಕ್ತಿ ಮತ್ತು ಶರಣಾಗತಿ ಮೂಲಕ ದೇವರಿಗೆ ಕೃತಜ್ಞತೆ ಸಲ್ಲಿಸುವ ಉತ್ಸವವಾಗಿದೆ. ದೇವರಿಗೆ ದೀಪ ಹಚ್ಚುವುದು ಭಾರತೀಯ ಸಂಸ್ಕೃತಿಯ ಲಕ್ಷಣವಾಗಿದೆ. ಲಕ್ಷದೀಪೋತ್ಸವ ಸಂಸ್ಕೃತಿ ಉಳಿಸುವ, ಅಜ್ಞಾನದ ಅಂಧಕಾರವನ್ನು ತೊಲಗಿಸಿ ಸುಜ್ಞಾನದ ಸುಗಂಧವನ್ನು ಪಸರಿಸುವ ಮತ್ತು ಸಾಹಿತ್ಯವನ್ನು ಪೋಷಿಸುವ, ಜ್ಞಾನ, ಭಕ್ತಿ ಮತ್ತು ಆಧ್ಯಾತ್ಮದ ಬೆಳಕಿನಲ್ಲಿ ಸಕಲ ಸಂಕಷ್ಟಗಳ ನಿವಾರಣೆಯಾಗಲಿ ಎಂದು ಹಾರೈಸುವ ಉತ್ಸವವಾಗಿದೆ ಎಂದರು.

ಹಿರಿಯ ಸಾಹಿತಿ ಡಾ. ಮಲ್ಲೇಪುರಂ ಜಿ. ವೆಂಕಟೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯದಿಂದ ಅಂತರಂಗದ ಶುದ್ಧೀಕರಣವಾಗುತ್ತದೆ. ಸಾಹಿತ್ಯ ರಚನೆಯಲ್ಲಿ ತತ್ವದ ಧಾತು ಇರಬೇಕು. ಆಧ್ಯಾತ್ಮ ಸಾಹಿತ್ಯ ಮತ್ತು ರಂಜನೀಯ ಸಾಹಿತ್ಯದ ಮಧ್ಯೆ ಸಮನ್ವಯ ಅಗತ್ಯ. ಅಂತಕರಣದ ಶುದ್ಧೀಕರಣದಿಂದ ಲೋಕದ ಶುದ್ಧೀಕರಣವೂ ಆಗುತ್ತದೆ ಎಂದರು.

ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಧರ್ಮ ಮತ್ತು ಸಾಹಿತ್ಯ ಸಮಸ್ತ ಮಾನವ ಸಮಾಜದ ಏಳಿಗೆಗೆ ಪೂರಕ ಮತ್ತು ಪ್ರೇರಕವಾಗಿದೆ. ವ್ಯಕ್ತಿ ಮತ್ತು ಸಮಾಜಕ್ಕೆ ಹಿತವನ್ನುಂಟುಮಾಡುವುದೇ ಸಾಹಿತ್ಯ ಎಂದರು. ಸಾರ್ಥಕ ಉದ್ದೇಶವನ್ನು ಹೊಂದಿರುವ ಸಾಹಿತ್ಯ ಕೃತಿಗಳು ಆರೋಗ್ಯಪೂರ್ಣ ಸಮಾಜವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದುದರಿಂದ ಉತ್ತಮ ಸಾಹಿತ್ಯವನ್ನು ರಚಿಸುವ ಲೇಖಕರನ್ನು, ಪ್ರಕಾಶಕರನ್ನು ಹಾಗೂ ಓದುಗರನ್ನು ನಾವು ಸದಾ ಕೃತಜ್ಞತೆಯೊಂದಿಗೆ ಸ್ಮರಿಸಬೇಕಾಗಿದೆ. ಕನ್ನಡ ನಾಡಿಯಲ್ಲಿ ಎಂಟು ಮಂದಿ ಜ್ಞಾನಪೀಠ ಪುರಸ್ಕೃತರ ಸಾಹಿತ್ಯ ಸೇವೆ ಇತರರಿಗೆ ಮಾರ್ಗದರ್ಶಿಯಾಗಿದೆ. ಕೊರೊನಾ ಸಂದರ್ಭದಲ್ಲಿ ಸಾಹಿತ್ಯಾಭಿರುಚಿ ಹೆಚ್ಚಾಗಿದೆ. ಪತ್ರಿಕೆಗಳು ಕೂಡಾ ನಷ್ಟವನ್ನು ಅನುಭವಿಸಿದರೂ, ಪ್ರಸಾರದಲ್ಲಿ ಹಾಗೂ ವಿತರಣೆಯಲ್ಲಿ ಕೊರತೆಯಾಗದಂತೆ ಎಚ್ಚರ ವಹಿಸಿವೆ ಎಂದರು.

ಸಾಗರದ ಡಾ. ಗಜಾನನ ಶರ್ಮಾ, ಐತಿಹಾಸಿಕ ಸಾಹಿತ್ಯ ಸೃಷ್ಟಿಯಲ್ಲಿ ಎದುರಾಗುವ ಸವಾಲುಗಳು ಎಂಬ ವಿಷಯದ ಬಗ್ಯೆ, ಚಿತ್ರದುರ್ಗದ ಡಾ. ಪಿ. ಚಂದ್ರಿಕಾ, ಸಾಹಿತ್ಯ ಸಂವೇದನೆ ಮತ್ತು ಮಹಿಳಾ ಅಭಿವ್ಯಕ್ತಿ ವಿಷಯದಲ್ಲಿ ಹಾಗೂ ಬೆಂಗಳೂರಿನ ಡಾ. ಕೆ.ಪಿ. ಪುತ್ತೂರಾಯ ಶಿಕ್ಷಣ ಮತ್ತು ಸಂಸ್ಕೃತಿಯ ರಕ್ಷಣೆಯಲ್ಲಿ ಸಾಹಿತ್ಯದ ಪಾತ್ರ ಎಂಬ ವಿಷಯದ ಬಗ್ಯೆ ಉಪನ್ಯಾಸ ನೀಡಿದರು. ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್, ಡಿ.ಸುರೇಂದ್ರ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉಜಿರೆ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಎಂ. ಸುರೇಶ್ ಧನ್ಯವಾದವಿತ್ತರು. ಎಸ್.ಡಿ.ಎಂ. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಬಿ.ಪಿ. ಸಂಪತ್‌ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.