ಬೆಳ್ತಂಗಡಿ ಡಿಕೆಆರ್‌ಡಿಎಸ್ ಸಂಸ್ಥೆಯಿಂದ ವಿಶ್ವ ಏಡ್ಸ್ ದಿನಾಚರಣೆ

ಏಡ್ಸ್ ರೋಗದ ಕುರಿತು ಮುಂಜಾಗ್ರತೆ ಅಗತ್ಯ: ಬಿಷಪ್ ಲಾರೆನ್ಸ್ ಮುಕ್ಕುಯಿ

ಬೆಳ್ತಂಗಡಿ: ಹೆಚ್‌ಐವಿ ರೋಗ ಹರಡುವಿಕೆ ಈಗ ಕಡಿಮೆಯಾಗಿದೆ. ಇದರ ಬಗ್ಗೆ ಬಹಳಷ್ಟು ಜನಜಾಗೃತಿ ಉಂಟಾಗಿದೆ. ರೋಗ ಪೀಡಿತರು ಮರಣ ಹೊಂದುತ್ತಾರೆ ಎಂಬ ಅಭಿಪ್ರಾಯ ಇತ್ತು. ನಮ್ಮ ಡಿಕೆಆರ್‌ಡಿಎಸ್ ಸಂಸ್ಥೆಯಿಂದ ಏಡ್ಸ್ ಬಾಧಿತರಿಗೆ ಮತ್ತು ಸೋಂಕಿತರಿಗೆ ಎಲ್ಲರಂತೆ ಸಮಾನ ಬದುಕು ಕಟ್ಟಿಕೊಡಲು ಕೆಲಸ ಮಾಡಿಕೊಂಡು ಬರುತ್ತಿದ್ದೇವೆ. ಏಡ್ಸ್ ರೋಗದ ಕುರಿತು ಮುಂಜಾಗ್ರತೆ ಅಗತ್ಯವಿದೆ. ಎಲ್ಲರೂ ಅವರ ಸೇವೆಗೆ ಸ್ವಯಂ ಪ್ರೇರಿತರಾಗಿ ತೊಡಗಿಕೊಳ್ಳಬೇಕು ಎಂದು ಡಿಕೆಆರ್‌ಡಿಎಸ್ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ ಹೇಳಿದರು.
ದಕ್ಷಿಣ ಕನ್ನಡ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಬೆಳ್ತಂಗಡಿ (ಡಿಕೆಆರ್‌ಡಿಎಸ್) ನೇತೃತ್ವದಲ್ಲಿ ಸ್ನೇಹ ಜ್ಯೋತಿ ಮಹಿಳಾ ತಾಲೂಕು ಒಕ್ಕೂಟ ಬೆಳ್ತಂಗಡಿ, ನವಚೈತನ್ಯ ಸಂಘ ಬೆಳ್ತಂಗಡಿ ಇವುಗಳ ಆಶ್ರಯದಲ್ಲಿ ಡಿ.1 ರಂದು ಸಾಂತೋಮ್ ಟವರ್ ಸಭಾಂಗಣದಲ್ಲಿ ನಡೆದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದರು.

ಸಮಾರಂಭವನ್ನು ಉದ್ಘಾಟಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಹಾಯಕ ಅಧಿಕಾರಿ ರತ್ನಾವತಿ ಅವರು ಮಾತನಾಡಿ, ಏಡ್ಸ್ ಬಾಧಿಸಿದರೆ ಅದು ಮೂರನೇ ಹಂತಕ್ಕೆ ಬರುವುದಿಲ್ಲ. ಮೊದಲ ಹಂತದಲ್ಲೇ ಅದನ್ನು ಪತ್ತೆಹಚ್ಚಿ ಅಂತವರಲ್ಲಿ ಆತ್ಮಸ್ಥೈರ್ಯ ಮೂಡಿಸುವ ಕಾರ್ಯವನ್ನು ಹಾಗೂ ರೋಗವನ್ನು ಬಾರದಂತೆ ಮುನ್ನೆಚ್ಚರಿಕೆಯ ಜಾಗೃತಿ ಮೂಡಿಸುವ ಕಾರ್ಯವನ್ನು ಡಿಕೆಆರ್‌ಡಿಎಸ್ ಸಂಸ್ಥೆ ನಡೆಸಿಕೊಂಡು ಬರುತ್ತಿದೆ ಎಂದರು.
ಏಡ್ಸ್ ಪೀಡಿತರಿಗೆ ಹಾಗೂ ಬಾಧಿತರಿಗೆ ಪೌಷ್ಠಿಕ ಆಹಾರವನ್ನು ಕುಟ್ರುಪಾಡಿ ಚರ್ಚ್‌ನ ಧರ್ಮಗುರು ಫಾ. ಜೋಸ್ ಅಯಾಂಗುಡಿ ವಿತರಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿದ್ದ ಕಕ್ಕಿಂಜೆಶ್ರೀ ಕೃಷ್ಣ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಮುರಳಿಕೃಷ್ಣ ಇರ್ವತ್ರಾಯ,ಬೆಳ್ತಂಗಡಿ ಆರೋಗ್ಯ ಕೇಂದ್ರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ ಎ, ಮಾತನಾಡಿ, ಏಡ್ಸ್ ರೋಗದ ಗುಣ ಲಕ್ಷಣಗಳು, ಬಾರದಂತೆ ಮತ್ತು ಹರಡದಂತೆ ವಹಿಸಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು.
ಸಮಾರಂಭದಲ್ಲಿ ನವ ಚೈತನ್ಯ ಸಂಘ ಬೆಳ್ತಂಗಡಿ ಅಧ್ಯಕ್ಷೆ ಲಲಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಂದಾದೀಪ ತಂಡದವರಿಂದ ಜಾಗೃತಿ ಗೀತೆ ಮೊಳಗಿತು. ಈ ಹಿಂದೆ 11 ವರ್ಷ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ನೆಲ್ಯಾಡಿ ಕುಟ್ರುಪ್ಪಾಡಿ ಸೈಂಟ್ ಮೇರಿಸ್ ಚರ್ಚ್ ಧರ್ಮಗುರುಗಳಾದ ಫಾ. ಜೋಸ್ ಅಯಾಂಗುಡಿ ಅವರನ್ನು ಬಿಷಪ್ ಅವರು ಸನ್ಮಾನಿಸಿದರು.
ಪ್ರಸ್ತುತ ನಿರ್ದೇಶಕ ಫಾ. ಬಿನೋಯ್ ಎ.ಜೆ ಪ್ರಸ್ತಾವನೆಗೈದು ಸ್ವಾಗತಿಸಿದರು. ಸಿಸಿಲಿಯಾ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳು ಸಹಕರಿಸಿದರು.
ಕಾರಿತಾಸ್ ಇಂಡಿಯಾ ಸಂಸ್ಥೆಯಿಂದ ನೀಡಲಾದ ಸುರಕ್ಷಾ ಕಿಟ್ ವಿತರಿಸಲಾಯಿತು. ಮುಂಡಾಜೆ ಸ್ಟಾರ್ ಸಂಘದ ಸದಸ್ಯರು ಪ್ರಾರ್ಥನಾ ಗೀತೆ ಹಾಡಿದರು. ಸ್ನೇಹ ಜ್ಯೋತಿ ಮಹಿಳಾ ತಾಲೂಕು ಒಕ್ಕೂಟದ ಅಧ್ಯಕ್ಷೆ ಏಲಿಯಮ್ಮ ವಂದಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.