ಧರ್ಮಸ್ಥಳ: ಜಾಗತಿಕ ಮಟ್ಟದಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕ್ಷೇತ್ರದಲ್ಲಿ ಮಾಡಿದ ಸೇವೆ, ಸಾಧನೆಯನ್ನು ಪರಿಗಣಿಸಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಅಮೇರಿಕಾದ ವೆಲ್ನೆಸ್ ವಿಶ್ವವಿದ್ಯಾಲಯದ ವತಿಯಿಂದ ನ.6 ರಂದು ಧರ್ಮಸ್ಥಳದಲ್ಲಿ ಮಹೋತ್ಸವ ಸಭಾ ಭವನದಲ್ಲಿ ನಡೆದ ಸಮಾರಂಭದಲ್ಲಿ ಆಚಾರ್ಯ ಪದವಿಯೊಂದಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.
ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಡಾ|ಹೆಗ್ಗಡೆಯವರು, ನಾವೆಲ್ಲರೂ ಇಂದು ಸುಮನಸರಾಗಬೇಕು. ವಿಶ್ವ ಕಲ್ಯಾಣವೇ ನಮ್ಮ ಗುರಿಯಾಗಬೇಕು ಸಮಸ್ತ ಮಾನವ ಕಲ್ಯಾಣ ಹಾಗೂ ಸಂತೋಷವೇ ಎಲ್ಲಾ ಸೇವೆಗಳ ಮುಖ್ಯ ಉದ್ದೇಶವಾಗಿದೆ. ಧರ್ಮಸ್ಥಳದಲ್ಲಿ ಜನರ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯ ಭಾಗ್ಯ ರಕ್ಷಣೆಗೆ ನಿರಂತರ ಮಾರ್ಗದರ್ಶನದೊಂದಿಗೆ ಅಭಯದಾನ ನೀಡಲಾಗುತ್ತದೆ . ಭಾರತೀಯ ಧರ್ಮ, ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಅರಿವು, ಜಾಗೃತಿ ಮೂಡಿಸಿ ಲೋಕ ಕಲ್ಯಾಣವಾಗುವಂತೆ ನಾವೆಲ್ಲರೂ ಶ್ರಮಿಸೋಣ ಎಂದರು.
ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ್ ಮತ್ತು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಆನ್ಲೈನ್ ಮೂಲಕ ಶುಭಾಶಂಸನೆ ಮಾಡಿ ಹೆಗ್ಗಡೆಯವರನ್ನು ಅಭಿನಂದಿಸಿದರು. ಬೆಂಗಳೂರಿನ ಕೃಷಿ ವಿಜ್ಞಾನ ವಿ.ವಿ.ಯ ವಿಜ್ಞಾನಿ ಡಾ. ಬಿ.ಎನ್. ಸತ್ಯನಾರಾಯಣ , ಬೆಂಗಳೂರು ವಿ.ವಿ. ಉಪಕುಲಪತಿ ಡಾ. ಕೆ.ಆರ್. ವೇಣುಗೋಪಾಲ್ ,ಮಣಿಪಾಲದ ಮಾಹೆ ವಿ.ವಿ.ಯ ಉಪಕುಲಪತಿ ಎಂ.ಡಿ. ವೆಂಕಟೇಶ್, ಸುರತ್ಕಲ್ ಎನ್.ಐ.ಟಿ.ಕೆ. ಯ ಪ್ರೊ. ಶ್ರೀಪತಿ ಆಚಾರ್ಯ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ , ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯರುಗಳಾದ ಕೆ. ಪ್ರತಾಪಸಿಂಹ ನಾಯಕ್ ಮತ್ತು ಕೆ. ಹರೀಶ್ ಕುಮಾರ್ ಉಪಸ್ಥಿತರಿದ್ದರು.
ಇದೇ ವೇಳೆ ಬ್ರಹ್ಮಶ್ರೀ ಪತ್ರಿಜಿ, ಸುಬಾ ಕೋಟಾ ಮತ್ತು ಆರ್ಯಾಂಬತ್ ಜನಾರ್ದನನ್ ಅವರಿಗೆ ಕೂಡಾ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು.
ನಾಟ್ಯ ಸಂಪದ ತಂಡದವರ ಭರತನಾಟ್ಯ, ಡಾ. ನಾಗೇಂದ್ರ ಶಾಸ್ತ್ರಿ ಮತ್ತು ತಂಡದವರ ಕರ್ನಾಟಕ ಸಂಗೀತ, ಡಾ. ಕೆ. ಸುರೇಶ್ ಮತ್ತು ಆದಿತ್ಯ ರಂಗನ್ ರವರ ವೇದ ಮಂತ್ರ ಪಠಣ ನಡೆಯಿತು.
ಅಮೇರಿಕಾದ ವೇದಿಕ್ ವೆಲ್ನೆಸ್ ವಿಶ್ವವಿದ್ಯಾಲಯದ ಅಧ್ಯಕ್ಷ ಕೃಷ್ಣಮೂರ್ತಿ ಸ್ವಾಗತಿಸಿ, ಉಪಾಧ್ಯಕ್ಷೆ ರಶ್ಮಿಕೃಷ್ಣಮೂರ್ತಿ ಧನ್ಯವಾದವಿತ್ತರು.