‘ವಿಠಲ ಮಲೆಕುಡಿಯ ನಿರ್ದೋಷಿ’ ನ್ಯಾಯಾಲಯದ ತೀರ್ಪು: ವಿವಿಧ ಸಂಘಟನೆಗಳಿಂದ ಅಭಿನಂದನಾ ಸಭೆ

ಬೆಳ್ತಂಗಡಿ:  ನಕ್ಸಲರಿಗೆ ಬೆಂಬಲ ಮತ್ತು ನಕ್ಸಲ್ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದರೆಂಬ ಆರೋಪದಡಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದ  ಕುತ್ಲೂರು ಗ್ರಾಮದ ಲಿಂಗಣ್ಣ ಯಾನೆ ಲಿಂಗಪ್ಪ ಮಲೆಕುಡಿಯ ಹಾಗೂ ಅವರ ಪುತ್ರ ಸ್ನಾತಕೋತ್ತರ ಪದವಿ ಪಡೆದಿರುವ, ಪತ್ರಕರ್ತ ವಿಠಲ ಮಲೆಕುಡಿಯರ ಮೇಲಿನ ಆರೋಪ ಸಾಬೀತಾಗದ ಹಿನ್ನಲೆಯಲ್ಲಿ ಇವರಿಬ್ಬರನ್ನು ನಿದೋರ್ಷಿಗಳೆಂದು ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ.

 ಈ ಪ್ರಯುಕ್ತ ಆದಿವಾಸಿ/ದಲಿತ/ಯುವಜನ/ಕಾರ್ಮಿಕ ಸಂಘಟನೆಗಳ  ಜಂಟಿ ವೇದಿಕೆಯಿಂದ ಬೆಳ್ತಂಗಡಿ ಮುಖ್ಯ ಬಸ್ಸುತಂಗುದಾಣದ ಬಳಿ  ಅಭಿನಂದನಾ ಸಭೆ ಅ.25 ರಂದು ಜರುಗಿತು.

ಮಾಜಿ ಶಾಸಕ ಕೆ ಬಂಗೇರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ನ್ಯಾಯ ಕೇಳುವ ಜನರ ಮೇಲೆ ದೇಶದ್ರೋಹದ ಕೇಸು ದಾಖಲಿಸಿದ ಅಂದಿನ ಬಿಜೆಪಿ ಸರಕಾರಕ್ಕೆ ಮುಖಭಂಗವಾಗಿದ್ದು, ಲಿಂಗಣ್ಣ  ಮಲೆಕುಡಿಯ ಹಾಗೂ ಅವರ ಪುತ್ರ ವಿಠಲ ಮಲೆಕುಡಿಯರವರಿಗೆ ನ್ಯಾಯಾಲಯವು ನಿರ್ದೋಷಿಗಳೆಂದು ತೀರ್ಪು ನೀಡಿದ್ದು, ಇದು ಹೋರಾಟಕ್ಕೆ- ನ್ಯಾಯಕ್ಕೆ ದೊರೆತ ಜಯವಾಗಿದೆ ಎಂದರು. ಇದೇ ಸಂದರ್ಭದಲ್ಲಿ  ಈ ಇಬ್ಬರಿಗೂ ಮಾಜಿ ಶಾಸಕರು ಆಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.

ಹಿರಿಯ ಕಮ್ಯೂನಿಸ್ಟ್ ನಾಯಕ ಬಿ.ಎಂ.ಭಟ್ ಮಾತನಾಡಿ, ಜನರ ಬದುಕಿನ ಅಭಿವೃದ್ದಿಗೆ ಹೋರಾಟ ಮತ್ತು ಸಂಘಟನೆ ಮೇಲೆ ನಂಬಿಕೆ ಇರಬೇಕು. ಹೋರಾಟದ ದಾರಿ ಹಿಡಿಯದಿರುತ್ತಿದ್ದರೆ ಬಡಪಾಯಿಗಳ ಬೇಡಿಕೆ ಈಡೇರಿಸಲು ಮನಸ್ಸಿಲ್ಲದೆ ಕಾರ್ಪರೇಟ್ ಪರ ಸರಕಾರ ಈ ರೀತಿ ಸುಳ್ಳು ದೇಶದ್ರೋಹದ ಕೇಸ್ ಹಾಕಿ ಜೈಲಿಗೆ ತಳ್ಳಿ ಜನರ ಬದುಕಿನ ಭವಿಷ್ಯವನ್ನು ಕಸಿಯುತ್ತದೆ. ಇದು ಬ್ರೀಟೀಶರಿಂದ ಪ್ರಾರಂಭವಾಗಿ ಬಿಜೆಪಿ ಸರಕಾರದ ತನಕವೂ ಮುಂದುವರಿದಿದೆ. ಆದರೆ ನಾವು ಕಮ್ಯೂನಿಸ್ಟರು ನ್ಯಾಯದ ದಾರಿಯನ್ನು ಎಂದೂ ಬಿಟ್ಟು ಕೊಡದೆ ಹೋರಾಟ ಮುನ್ನಡೆಸಿದ್ದರಿಂದ ಹೋರಾಟದ ಹಾದಿಗೆ ದೊರೆತ ಅಭೂತಪೂರ್ವ ಗೆಲುವು ಇದಾಗಿದೆ ಎಂದರು.

ಈ ಸಂದರ್ಭದಲ್ಲಿ ವಿಠಲ ಮಲೆಕುಡಿಯ,  ಲಿಂಗಣ್ಣ ಮಲೆಕುಡಿಯ,  ಎಲ್. ಮಂಜುನಾಥ್ , ಶ್ಯಾಮ್ ರಾಜ್, ಮೊದಲಾದವರು ಅಭಿನಂದನಾ ಸಭೆಯಲ್ಲಿ ಭಾಗವಹಿಸಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.