ವಿಶ್ವ ಹಿಂದೂ ಪರಿಷತ್ ಕೇಂದ್ರಿಯ ಕಾರ್ಯಾಧ್ಯಕ್ಷ ಅಲೋಕ್‌ಕುಮಾರ್ ಧರ್ಮಸ್ಥಳ ಭೇಟಿ

ಧರ್ಮಸ್ಥಳ: ವಿಶ್ವ ಹಿಂದೂ ಪರಿಷತ್ ಕೇಂದ್ರಿಯ ಕಾರ್ಯಾಧ್ಯಕ್ಷ ಅಲೋಕ್‌ಕುಮಾರ್ ಅವರು ಅ.23ರಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ, ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ನಂತರ ಸನ್ನಿಧಿ ವಸತಿ ಗೃಹದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ವಿಶ್ವ ಹಿಂದೂ ಪರಿಷತ್‌ನ ಮಾರ್ಗದರ್ಶಕ ಮಂಡಳಿ ಕೇಂದ್ರ ಸರಕಾರದಲ್ಲಿ ಮನವಿ ಮಾಡುವುದೆನೆಂದರೆ ಹಿಂದೂ ಸಮಾಜದ ದೇವಸ್ಥಾನಗಳು ಸರಕಾರದ ಆಡಳಿತದಲ್ಲಿದ್ದು, ಹಿಂದೂ ದೇವಸ್ಥಾನ, ಧಾರ್ಮಿಕ ಕೇಂದ್ರಗಳನ್ನು ಹಿಂದೂ ಸಮಾಜಕ್ಕೆ ನೀಡಬೇಕು. ಹಿಂದೂ ದೇವಸ್ಥಾನಗಳಲ್ಲಿ ಬರುವ ಆದಾಯವನ್ನು ಹಿಂದೂ ಸಮಾಜದ ಅಭಿವೃದ್ಧಿಗೆ ಬಳಕೆ ಮಾಡಬೇಕು ಇದಕ್ಕೆ ಕೇಂದ್ರ ಸರಕಾರ ವಿಶೇಷ ಕಾನೂನು ಮಾಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ವಿಶ್ವಹಿಂದೂ ಪರಿಷತ್ ವಿಶೇಷ ಅಭಿಯಾನವನ್ನು ದೇಶದಲ್ಲಿ ಹಮ್ಮಿಕೊಳ್ಳಲಿದೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಲವ್‌ ಜಿಹಾದ್ ಮೂಲಕ ಹಿಂದೂ ಹೆಮ್ಮಕ್ಕಳ ಮತಾಂತರ ನಡೆಯುತ್ತಿದ್ದು, ಇದನ್ನು ವಿಶ್ವ ಹಿಂದೂ ಪರಿಷತ್ ಖಂಡಿಸುತ್ತದೆ. ಇದನ್ನು ತಡೆಯಲು ರಾಜ್ಯ ಸರಕಾರ ಕಠಿಣ ಕಾನೂನು ಮಾಡಬೇಕು. ಉತ್ತರ ಪ್ರದೇಶ, ಗುಜರಾತ್ ಸರಕಾರಗಳು ಈಗಾಗಲೇ ಕಠಿಣ ಕಾನೂನು ಜಾರಿಗೆ ತಂದಿದೆ. ಈ ಬಗ್ಗೆ ದೀಪಾವಳಿ ಬಳಿಕ ರಾಜ್ಯದ ಮುಖ್ಯ ಮಂತ್ರಿಗಳನ್ನು ವಿಶ್ವಹಿಂದೂ ಪರಿಷತ್ ಭೇಟಿ ಮಾಡಿ ಮಾತುಕತೆ ನಡೆಸಿ ಮನವಿ ಸಲ್ಲಿಸಲಿದೆ ಎಂದು ತಿಳಿಸಿದರು. ಕಾಶ್ಮೀರದಲ್ಲಿ ಹಿಂದೂ, ಸಿಖ್‌ರ ಮೇಲೆ ನಡೆಯುವ ದೌರ್ಜನ್ಯ ಮತ್ತು ಬಾಂಗ್ಲಾ ದೇಶದಲ್ಲಿ ನಡೆಯುತ್ತಿರುವ ಪ್ರಕರಣಗಳ ಬಗ್ಗೆಯೂ ಕೇಂದ್ರ ಸರಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಈ ಸಂದರ್ಭ ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿ.ಹಿಂ.ಪ ಕೇಂದ್ರಿಯ ಸಹ ಕಾರ್ಯದರ್ಶಿ ಕೋಟೇಶ್ವರ ಶ್ಯಾಮ್, ಪ್ರಾಂತ ಸಂಘಟನಾ ಕಾರ್ಯದರ್ಶಿ ಬಸವರಾಜ್, ಪ್ರಾಂತ ಸಹಕಾರ್ಯದರ್ಶಿ ಕೃಷ್ಣ ಮೂರ್ತಿ, ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪುವೆಲ್, ದ.ಕ ಜಿಲ್ಲಾಧ್ಯಕ್ಷ ಪ್ರಸನ್ನ ಕೆ, ಪುತ್ತೂರು ಜಿಲ್ಲಾ ಕಾರ್ಯಾಧ್ಯಕ್ಷ ಭಾಸ್ಕರ ಧರ್ಮಸ್ಥಳ, ಕಾರ್ಯದರ್ಶಿ ಸತೀಶ್, ತಾಲೂಕು ಅಧ್ಯಕ್ಷ ದಿನೇಶ್ ಚಾರ್ಮಾಡಿ, ಕಾರ್ಯದರ್ಶಿ ಮೋಹನ್ ಬೆಳ್ತಂಗಡಿ, ಸಂತೋಷ್ ಅತ್ತಾಜೆ, ಸಂಕೇತ್ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.