ನಕ್ಸಲ್‌ರಿಗೆ ಬೆಂಬಲ ಆರೋಪ: ವಿಠಲ ಮಲೆಕುಡಿಯ ಮತ್ತು ಲಿಂಗಣ್ಣ ಮಲೆಕುಡಿಯ ನಿರ್ದೋಷಿ

ಜಿಲ್ಲಾ ನ್ಯಾಯಾಲಯದ ತೀರ್ಪು ಪ್ರಕಟ

ಬೆಳ್ತಂಗಡಿ: ನಕ್ಸಲರಿಗೆ ಬೆಂಬಲ ಮತ್ತು ನಕ್ಸಲ್ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದರೆಂಬ ಆರೋಪದ ವಿಚಾರಣೆ ನಡೆಸಿದ ಮಂಗಳೂರು 3ನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರು ಆರೋಪಕ್ಕೆ ಒಳಗಾಗಿದ್ದ ತಂದೆ-ಮಗನನ್ನು ನಿರ್ದೋಷಿ ಎಂದು ಇಂದು ತೀರ್ಪು ನೀಡಿದೆ.
ಕುತ್ಲೂರು ಗ್ರಾಮದ ಕುತ್ಲೂರು ಗ್ರಾಮದ ಅಲಂಬ ಮಣಿಲಾ ಹೊಸಮನೆ ನಿವಾಸಿ ಲಿಂಗಣ್ಣ ಯಾನೆ ಲಿಂಗಪ್ಪ ಮಲೆಕುಡಿಯ ಹಾಗೂ ಅವರ ಪುತ್ರ ಸ್ನಾತಕೋತ್ತರ ಪದವಿ ಪಡೆದಿರುವ, ಪತ್ರಕರ್ತ ವಿಠಲ ಮಲೆಕುಡಿಯರ ಮೇಲಿನ ಆರೋಪ ಸಾಬೀತಾಗದ ಹಿನ್ನಲೆಯಲ್ಲಿ ಇವರಿಬ್ಬರನ್ನು ನಿದೋರ್ಷಿಗಳೆಂದು ಈ ಪ್ರಕರಣದ ತನಿಖೆ ನಡೆಸಿದ ನ್ಯಾಯಾಧೀಶರಾದ ಬಿ.ಬಿ ಜಕಾತಿ ಅವರು ಈ ತೀರ್ಪನ್ನು ನೀಡಿದ್ದಾರೆ.
2012ರಲ್ಲಿ ಕುತ್ಲೂರು ಪರಿಸರದಲ್ಲಿ ನಕ್ಸಲ್ ಚಟುವಟಿಕೆ ಗಳು ನಡೆಯುತ್ತಿದೆ ಎಂಬ ಸಂಶಯದಲ್ಲಿ ಕೂಬಿಂಗ್ ನಡೆಸುತ್ತಿದ್ದ ಕಾರ್ಕಳದ ಎ.ಎನ್.ಎಫ್ ಪೊಲೀಸರು ಮಾ.೩ರಂದು ಕಾರ್‍ಯಾಚರಣೆ ನಡೆಸಿ ಲಿಂಗಣ್ಣ ಅವರನ್ನು ಬಂಧಿಸಿದ್ದರು. ಈ ವಿಷಯ ಮನೆಯವರ ಮೂಲಕ ಆಗ ಮಂಗಳೂರಿನಲ್ಲಿದ್ದ ವಿಠಲ ಅವರಿಗೆ ತಿಳಿದು ಅವರು ಮನೆಗೆ ಆಗಮಿಸುತ್ತಿದ್ದಂತೆ ಪೊಲೀಸರು ವಿಠಲರನ್ನು ಬಂಧಿಸಿ, ನಕ್ಸಲರಿಗೆ ಬೆಂಬಲ ನೀಡುತ್ತಿದ್ದಾರೆಂದು ಆರೋಪಿಸಿ, ಕೇಸು ದಾಖಲಿಸಿಕೊಂಡಿದ್ದರು.
ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ಇಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಬಂಧಿತರ ಮನೆಯಿಂದ ಪತ್ರಿಕಾ ವರದಿ, ಹಳೆಯ ಕರಪತ್ರಗಳು, ಕಾಲು ಕೆ.ಜಿ ಕಾಫಿಹುಡಿ, ಉಪ್ಪು, ಸಕ್ಕರೆ ಹಾಗೂ ಬೈನಾಕುಲರ್, ಕಂಬಳಿ ದೊರಕಿದೆ ಇದು ನಕ್ಸಲರಿಗೆ ಸಹಾಯ ಮಾಡಲು ತಂದಿಟ್ಟ ವಸ್ತುಗಳಾಗಿವೆ ಎಂದು ಪೊಲೀಸರು ಕೇಸಿನಲ್ಲಿ ದಾಖಲಿಸಿದ್ದರು.
ನಂತರದ ದಿನಗಳಲ್ಲಿ ನಿರಾಪರಾಧಿಗಳಾದ ಲಿಂಗಣ್ಣ ಮಲೆಕುಡಿಯ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಯಾಗಿದ್ದ ವಿಠಲ ಮಲೆಕುಡಿಯರ ಬಂಧನವನ್ನು ವಿರೋಧಿಸಿ, ತಾಲೂಕು, ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಅವರ ಬಿಡುಗಡೆಗೆ ಆಗ್ರಹಿಸಿದ್ದರು. ವಿಠಲ ಮಲೆಕುಡಿಯ ನ್ಯಾಯಾಂಗ ಬಂಧನದಲ್ಲಿರುವ ಸಮಯವೇ ಮಂಗಳೂರು ವಿ.ವಿ.ಯ ಮೂಲಕ ಸ್ನಾತಕೋತ್ತರ ಪದವಿ ಪರೀಕ್ಷೆಯನ್ನು ಬರೆದು ಅದರಲ್ಲಿ ಪಾಸಾಗಿದ್ದರು. ನಂತರ ಅವರಿಬ್ಬರಿಗೂ ಜಾಮೀನು ದೊರಕಿತ್ತು.
ಮಂಗಳೂರು 3ನೇ ಹೆಚ್ಚುವರಿ ನ್ಯಾಯಾಲಯದಲ್ಲಿ ಈ ಪ್ರಕರಣದ ತನಿಖೆ ನಡೆದು ಎರಡು ಕಡೆಯವರ ವಾದ- ವಿವಾದಗಳನ್ನು ಆಲಿಸಿದ ನ್ಯಾಯಾದೀಶರು ಲಿಂಗಣ್ಣ ಮಲೆಕುಡಿಯ ಮತ್ತು ವಿಠಲ ಮಲೆಕುಡಿಯರ ಮೇಲೆ ಮಾಡಿರುವ ಆರೋಪವನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದಾರೆ. ಇವರಿಬ್ಬರ ಪರವಾಗಿ ನ್ಯಾಯವಾದಿಗಳಾದ ದಿನೇಶ್ ಹೆಗ್ಡೆ ವಾದಿಸಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.