ಕೋವಿಡ್ ಲಸಿಕೆ ಎಡವಟ್ಟು: ಕುಕ್ಕ ಗೌಡರಿಗೆ ಕನಿಷ್ಠ ರೂ.5ಲಕ್ಷ ಪರಿಹಾರಕ್ಕೆ ಮಾಜಿ ಶಾಸಕರಿಂದ ಆಗ್ರಹ

ಉಜಿರೆ: ಕೋವಿಡ್ ಲಸಿಕೆಯ ಅವಾಂತರದಿಂದ ಉಜಿರೆ ಮತ್ತು ಮಂಗಳೂರಿನ ಆಸ್ಪತ್ರೆಗಳಲ್ಲಿ ಸುದೀರ್ಘ ಕಾಲ ಚಿಕಿತ್ಸೆ ಪಡೆದು ಮನೆಗೆ ಮರಳಿದ ಪುದುವೆಟ್ಟುವಿನ ಕೃಷಿಕ ಕುಕ್ಕ ಗೌಡ (65)  ಅವರು ಅ.18 ರಂದು ಹಠಾತ್ತಾಗಿ ಪ್ರಜ್ಞಾ ಹೀನರಾಗಿ ಉಜಿರೆಯ ಎಸ್.ಡಿ.ಎಂ ಆಸ್ಪತ್ರೆಗೆ ದಾಖಲಾಗಿ ಅಪಾಯಕಾರಿ ಸ್ಥಿತಿಯಲ್ಲಿದ್ದಾರೆ.

ಅವರನ್ನು ಭೇಟಿಯಾದ ಮಾಜಿ ಶಾಸಕ ಕೆ. ವಸಂತ ಬಂಗೇರ ರವರು ವೈದ್ಯರಲ್ಲಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿ ಲಸಿಕೆಯ ಎಡವಟ್ಟಿನಿಂದಾದ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಅವರ ಕುಟುಂಬಕ್ಕೆ ತಕ್ಷಣ ಕನಿಷ್ಠ ರೂ 5 ಲಕ್ಷ ಪರಿಹಾರ ಒದಗಿಸಿಕೊಡಬೇಕು. ಇಲ್ಲದಿದ್ದಲ್ಲಿ ತಾಲೂಕು ಆರೋಗ್ಯ ಕೇಂದ್ರದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಯಾವುದೇ ಕಾಯಿಲೆಯಿಲ್ಲದೆ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಆರೋಗ್ಯವಂತ ಕುಕ್ಕ ಗೌಡರನ್ನು ಆರೋಗ್ಯ ಇಲಾಖೆ ಲಸಿಕೆ ಪಡೆಯಲು ಒತ್ತಾಯಿಸಿದ್ದು, ಇಲ್ಲದಿದ್ದರೆ ಪಡಿತರ ಕಾರ್ಡ್ ರದ್ದು ಪಡಿಸಿ ಎಲ್ಲ ಸೌಲಭ್ಯ ಕಡಿತಗೊಳಿಸಲಾಗುವುದೆಂಬ ಬೆದರಿಕೆಯೊಡ್ಡಿ ನೆರಿಯದಲ್ಲಿ ಒತ್ತಾಯಪೂರ್ವಕವಾಗಿ ಲಸಿಕೆ ನೀಡಲಾಗಿತ್ತು.

ತತ್ಪರಿಣಾಮವಾಗಿ ದೇಹದ ಎಡ ಭಾಗ ಹಾಗೂ ಲಘು ಹೃದಯಘಾತ ಮತ್ತು ಪಾರ್ಶ್ವವಾಯು ಪೀಡಿತರಾಗಿ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲ್ಪಟ್ಟರು. ಪ್ರಾರಂಭದಲ್ಲಿ ಲಸಿಕೆಯ ಎಡವಟ್ಟಿನಿಂದಾದ ಪ್ರಕರಣ ಎಂದು ತಿಳಿಸಿದ ವೈದ್ಯರು ಬಳಿಕ ಹೇಳಿಕೆಯನ್ನು ತಿರುವಿದ್ದಾರೆ. 3 ತಿಂಗಳ ಬಳಿಕ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲ್ಪಟ್ಟು ಒಂದು ವಾರ ಚಿಕಿತ್ಸೆ ಪಡೆದು ಅಲ್ಪ ಗುಣಮುಖರಾದ ಅವರನ್ನು ಮನೆಗೆ ತಂದ ಕೆಲವೇ ದಿನಗಳಲ್ಲಿ ಮತ್ತೆ ಪ್ರಜ್ಞಾಹೀನರಾಗಿ ಉಜಿರೆಯ ಆಸ್ಪತ್ರೆಗೆ ಸೇರಿಸಬೇಕಾಯಿತು.

ಈ ಸಂದರ್ಭದಲ್ಲಿ ಮನೆಗೆ ಭೇಟಿ ನೀಡಿದ ಬೆಳ್ತಂಗಡಿ ತಾಲೂಕು ವೈದ್ಯಾಧಿಕಾರಿ ಕುಕ್ಕ ಗೌಡರಿಗೆ ಪ್ಲಾಸ್ಟಿಕ್ ಬೆಡ್ ಕಳಿಸಿ ಕೊಡುವುದಾಗಿ ಭರವಸೆ ನೀಡಿ ತೆರಳಿದವರು ಮತ್ತೆ ಯಾವುದೇ ರೀತಿ ಸ್ಪಂದಿಸಿಲ್ಲ ಎಂದು ವಸಂತ ಬಂಗೇರ ಆರೋಪಿಸಿದರು. ಜಿಲ್ಲಾ ಆರೋಗ್ಯಾಧಿಕಾರಿಗಳು ಅವರ ಆರೋಗ್ಯ ವಿಚಾರಿಸುವ ಮಾನವೀಯತೆ ತೋರಲಿಲ್ಲ. ಅವರ ಮಗ ಉದ್ಯೋಗಕ್ಕೆ ತೆರಳಲಾಗದೆ ಕಳೆದ 3 ತಿಂಗಳಿನಿಂದ ತಂದೆಯ ಆರೈಕೆಯಲ್ಲಿದ್ದಾರೆ. ಆಸ್ಪತ್ರೆ ಖರ್ಚು ವೆಚ್ಚಗಳಿಗಾಗಿ ಕುಟುಂಬ ವರ್ಗ ಈಗಾಗಲೇ ರೂ.2ಲಕ್ಷಕ್ಕೂ ಹೆಚ್ಚು ವ್ಯಯಿಸಿದ್ದಾರೆ.

ಸರಕಾರದ ಬೇಜವಾಬ್ಧಾರಿ ಲಸಿಕೆ ಎಡವಟ್ಟಿನಿಂದ ತಾಲೂಕಿನಲ್ಲಿ 5 ಪ್ರಕರಣಗಳಲ್ಲಿ ಇಬ್ಬರು ಸಾವನ್ನಪ್ಪಿದ್ದು ಇದು ಮೂರನೇ ಪ್ರಕರಣವಾಗಿದೆ. ಈ ತಪ್ಪಿಗೆ ಯಾರು ಹೊಣೆ ?. ಬಡಕುಟುಂಬ ಆರ್ಥಿಕ ಸಂಕಷ್ಟದಲ್ಲಿದ್ದು ಸರಕಾರ ತಕ್ಷಣ ಅವರ ಕುಟುಂಬಕ್ಕೆ ಕನಿಷ್ಠ ರೂ.5ಲಕ್ಷ ಪರಿಹಾರ ಕೊಡಬೇಕು. ಪತ್ರಿಕಾಗೋಷ್ಠಿ ಮೂಲಕ ಪ್ರಕರಣ ಬಯಲುಗೊಳಿಸಿದ್ದರೂ ಸರಕಾರ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ.

ಸ್ಪಂದಿಸದಿದ್ದಲ್ಲಿ ತಾಲೂಕು ಆರೋಗ್ಯಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು  ವಸಂತ ಬಂಗೇರ ಎಚ್ಚರಿಕೆ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಕುಕ್ಕ ಗೌಡರ ಮಗ ರಮೇಶ್ ಜೊತೆಗಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.