ವಾರಾಂತ್ಯ ಕರ್ಪ್ಯೂ ಮತ್ತು ಲಾಕ್‌ಡೌನ್ ಮುಂದುವರಿಕೆ ಬೇಡ: ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಒತ್ತಾಯ

ಬೆಳ್ತಂಗಡಿ: ವಾರಾಂತ್ಯದಲ್ಲಿ ಕರ್ಫ್ಯೂ ಮತ್ತು ಲಾಕ್‌ಡೌನ್‌ನ್ನು ಆ.29ರ ನಂತರ ಮುಂದುವರಿಸಬಾರದು ಎಂದು ಉಜಿರೆ, ಮಡಂತ್ಯಾರು ಮತ್ತು ಬೆಳ್ತಂಗಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವರ್ತಕರು ಆಗ್ರಹಿಸಿದರು.
ಅವರು ಆ.26ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಲಾಕ್‌ಡೌನ್ ಅವಧಿಯಲ್ಲಿ ಸುಮಾರು 64 ರಿಂದ 65 ದಿನಗಳ ಕಾಲ ವರ್ತಕರು ಸರಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದೇವೆ. ವಾರಾಂತ್ಯದ ಕರ್ಫ್ಯೂ ಮತ್ತು ಲಾಕ್‌ಡೌನ್ ಆದೇಶಗಳಿಗೆ ಸೂಕ್ತವಾಗಿ ಸ್ಪಂದಿಸಿರುತ್ತೇವೆ. ಇದರಿಂದಾಗಿ ವರ್ತಕರು ಸಂಕಷ್ಟ, ಆರ್ಥಿಕ ನಷ್ಟವನ್ನು ಅನುಭವಿಸಿದ್ದು, ಜೊತೆಗೆ ನೂರಾರು ನೌಕರರು ಕೆಲಸವನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ.
ವಾರಾಂತ್ಯದ ಲಾಕ್‌ಡೌನ್ ಮತ್ತು ಕರ್ಫ್ಯೂ ಸಮಯದಲ್ಲಿ ಕೆಲವೇ ವ್ಯಾಪಾರಿಗಳಿಗೆ ಮಧ್ಯಾಹ್ನ 2.00ಗಂಟೆಯವರೆಗೆ ಅವಕಾಶ ನೀಡಿದ್ದು ಉಳಿದ ವ್ಯಾಪಾರಿಗಳಿಗೆ ನಿರ್ಭಂಧಿಸಿರುವುದು ಅನ್ಯಾಯವಾಗಿದೆ. ರಾಜಕೀಯ ಸಭೆ, ರ್‍ಯಾಲಿಗಳಿಗೆ ನಿರ್ಬಂಧವಿಲ್ಲ. ಸರಕಾರಿ ಬಸ್ಸು, ರೈಲು, ವಿಮಾನ ಯಾನಕ್ಕೆ ಅವಕಾಶವಿದೆ. ಆದರೆ ಸರಕಾರದ ಕಾನೂನು ಪ್ರಕಾರ ವ್ಯವಹಾರ ಮಾಡುವವರಿಗೆ ಮಾತ್ರ ಎಲ್ಲಾ ಕಾನೂನು ಅನ್ವಯವಾಗುತ್ತದೆ. ಆನ್‌ಲೈನ್ ವಹಿವಾಟು ಮೂಲಕ ಬಹುರಾಷ್ಟ್ರೀಯ ಕಂಪೆನಿಗಳು ವ್ಯಾಪಾರ ಮಾಡುತ್ತಿದ್ದು, ಇದರಿಂದಾಗಿ ವರ್ತಕರು ತುಂಬಾ ನಷ್ಟ ಅನುಭವಿಸುತ್ತಿದ್ದಾರೆ.
ಸರಕಾರದ ಕಾನೂನು ಪ್ರಕಾರ ನೌಕರರ ವೇತನ, ವಿದ್ಯುತ್ ಶುಲ್ಕ, ಪಿ.ಎಫ್, ಇಎಸ್‌ಐ ಎಲ್ಲವನ್ನೂ ವರ್ತಕರು ಪಾವತಿಸುತ್ತಿದ್ದು, ಆ.29ರ ನಂತರ ಎಲ್ಲಾ ಲಾಕ್‌ಡೌನ್ ರದ್ದು ಮಾಡಬೇಕು ಎಂದು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮತ್ತು ಸರಕಾರವನ್ನು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಕೆ. ಅರವಿಂದ ಕಾರಂತ್, ಕಾರ್ಯದರ್ಶಿ ಲಕ್ಷ್ಮಣ ಗೌಡ, ಕೋಶಾಧಿಕಾರಿ ಅಬೂಬಕ್ಕರ್, ಮಡಂತ್ಯಾರು ವರ್ತಕರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ, ಕಿಶೋರ್ ಕುಮಾರ್, ಬೆಳ್ತಂಗಡಿಯ ಸಂಚಾಲಕರಾದ ಜಯರಾಮ ಗೌಡ, ರೊನಾಲ್ಡ್ ಲೋಬೊ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.