ಧರ್ಮಸ್ಥಳ ಸೇರಿದಂತೆ ಜಿಲ್ಲೆಯ ಪ್ರತಿಷ್ಠಿತ ದೇವಸ್ಥಾನಗಳಲ್ಲಿ ಸೇವೆಗಳಿಗೆ ನಿರ್ಬಂಧ

ಆ.5 ರಿಂದ 15 ರವರೆಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶ: ದ.ಕ ಜಿಲ್ಲಾಧಿಕಾರಿ ಆದೇಶ

ಬೆಳ್ತಂಗಡಿ: ದ.ಕ ಜಿಲ್ಲೆಯ ಪ್ರತಿಷ್ಠಿತ ದೇವಸ್ಥಾನಗಳಾದ  ಶ್ರೀ ಕ್ಷೇತ್ರ ಧರ್ಮಸ್ಥಳ  ಸೇರಿದಂತೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕಟೀಲು ಮತ್ತು ಶ್ರೀ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೊರರಾಜ್ಯದಿಂದ ಹಾಗೂ ಹೊರ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ವಾರಾಂತ್ಯದಲ್ಲಿ ಆಗಮಿಸುತ್ತಿರುವುದರಿಂದ ಕೋವಿಡ್-19 ಸಂಭಾವ್ಯ 3ನೇ ಅಲೆಯನ್ನು ಸಮರ್ಪಕವಾಗಿ ನಿಯಂತ್ರಿಸಲು ಇನ್ನೂ ಹೆಚ್ಚಿನ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ದ.ಕ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆವಿ ರವರು ಆದೇಶಿಸಿದ್ದಾರೆ
ಆ.5 ರಿಂದ 15ರವರೆಗೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕಟೀಲು, ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳು ಭಕ್ತಾದಿಗಳಿಗೆ ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಮಾತ್ರ ತೆರೆದಿರುತ್ತದೆ. ಈ ಸಂದರ್ಭದಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ, ಅಗತ್ಯ ಕೋವಿಡ್ ನಿಯಂತ್ರಣ ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಭಕ್ತಾದಿಗಳಿಗೆ ಕೇವಲ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ತೀರ್ಥ ಪ್ರಸಾದ, ಸೇವೆಗಳು, ಅನ್ನಸಂತರ್ಪಣೆಗೆ ಅವಕಾಶವಿರುವುದಿಲ್ಲ.
ವಾರಾಂತ್ಯದಲ್ಲಿ (ಶನಿವಾರ ಮತ್ತು ಭಾನುವಾರ) ಭಕ್ತಾದಿಗಳ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದ್ದು, ವಸತಿ ಗೃಹಗಳಲ್ಲಿ ತಂಗುವುದಾಗಲೀ ಅಥವಾ ದೇವರ ದರ್ಶನಕ್ಕಾಗಲೀ ಅವಕಾಶವಿರುವುದಿಲ್ಲ.
ಶನಿವಾರ ಮತ್ತು ಭಾನುವಾರಗಳಂದು ಎಲ್ಲಾ ರೀತ್ಯಾ ಉತ್ಸವ / ಸೇವೆಗಳು, ತೀರ್ಥ, ಪ್ರಸಾದ, ಮುಡಿ ಸೇವೆ ವಸತಿಗಳನ್ನು ನಿರ್ಬಂಧಿಸಿ, ಅರ್ಚಕರುಗಳಿಂದ ಸಾಂಪ್ರದಾಯಿಕ ಪೂಜೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ವಾರಾಂತ್ಯ ದಿನಗಳನ್ನು ಹೊರತುಪಡಿಸಿ (ಶನಿವಾರ ಮತ್ತು ಭಾನುವಾರ) ಉಳಿದ ದಿನಗಳಲ್ಲಿ ವಸತಿ ಗೃಹಗಳಲ್ಲಿ ತಂಗಲು ಬಯಸುವವರು ೭೨ ಗಂಟೆಯೊಳಗೆ ಆರ್‌ಟಿ-ಪಿಸಿಆರ್ ಟೆಸ್ಟ್ ಮಾಡಿಸಿ, ನೆಗಟಿವ್ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರತಕ್ಕದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಹಾಗೂ ಕೋವಿಡ್ ಶಿಷ್ಟಾಚಾರ ನಿಯಮ ಪಾಲಿಸುವ ದೃಷ್ಟಿಯಿಂದ ಕೂಠಡಿಗಳಲ್ಲಿ ಕಡ್ಡಾಯವಾಗಿ ಹೆಚ್ಚುವರಿ ವ್ಯಕ್ತಿಗಳು ತಂಗಲು ಅವಕಾಶವಿರುವುದಿಲ್ಲ.
ಎಲ್ಲಾ ಕೊಠಡಿಗಳನ್ನು ವಾಸ್ತವ್ಯಕ್ಕೆ ಮುಂಚೆ ಸ್ಯಾನಿಟೈಸ್ ಮಾಡತಕ್ಕದ್ದು ಹಾಗೂ ಭಕ್ತಾದಿಗಳು ಮಾಸ್ಕ್‌ನ್ನು ಕಡ್ಡಾಯವಾಗಿ ಧರಿಸಬೇಕು. ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಕಲಂ 51 ರಿಂದ 60 ರನ್ವಯ, ಐಪಿಸಿ ಕಲಂ 188 ರಂತೆ ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ 2020 ರ ಕಲಂ 4,5 ಮತ್ತು 10 ರಂತ ಕ್ರಮ ಜರಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.