ವಾಹನದ ದಾಖಲೆಗಳನ್ನು ಎಗರಿಸಿ ಪರಾರಿಯಾದ ಖತರ್ನಾಕ್ ಕಳ್ಳರು
ಸಾವ್ಯ: ಮನೆಯಂಗಳದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಕದ್ದೊಯ್ಯಲು ಯತ್ನಿಸಿದ ಕಳ್ಳರು, ಕೊನೆಗೆ ವಿಫಲಗೊಂಡು ವಾಹನದ ಡಿಕ್ಕಿಯಲ್ಲಿರುವ ಅಗತ್ಯ ದಾಖಲೆಗಳನ್ನು ಎಗರಿಸಿ ಪರಾರಿಯಾದ ಘಟನೆ ಸಾವ್ಯ ಗ್ರಾಮದಲ್ಲಿ ಜು.26 ರಂದು ರಾತ್ರಿ ನಡೆದಿದೆ.
ಸಾವ್ಯ ಗ್ರಾಮದ ರಂಜಿತಾ ನಿವಾಸ ಮನೆಯ ತಿಮ್ಮಪ್ಪ ಪೂಜಾರಿಯವರ ಪುತ್ರಿ ರಂಜಿತಾ ಎಂಬವರು ತಮ್ಮ ಕೆ.ಎ 19ಹೆಚ್ 06378ಹೋಂಡಾ ಡಿಯೋ ವಾಹನವನ್ನು ಪಕ್ಕದ ಮನೆಯವರ ಅಂಗಳದಲ್ಲಿ ನಿಲ್ಲಿಸಿದ್ದರು.
ರಾತ್ರಿ ಜೋರಾಗಿ ಮಳೆ ಸುರಿಯುತ್ತಿದ್ದು, ಪಕ್ಕದ ಮನೆಯವರು ಮಲಗಿದ್ದ ವೇಳೆ ಅಂಗಳದಲ್ಲಿ ನಿಲ್ಲಿಸಿರುವ ವಾಹನದ ಮುಂಭಾಗದಲ್ಲಿರುವ ವಿ-ಪ್ಯಾನಲ್ ಭಾಗವನ್ನು ಬಿಚ್ಚಿಸಿ ಕದ್ದೊಯ್ಯಲು ಯತ್ನಿಸಿದ್ದಾರೆ. ಆದರೆ ಆ ಪ್ರಯತ್ನ ವಿಫಲಗೊಂಡಿದ್ದು, ಬಳಿಕ ಗಾಡಿಯ ಡಿಕ್ಕಿಯಲ್ಲಿರುವ ವಾಹನದ ಆರ್.ಸಿ, ಇನ್ಶೂರೆನ್ಸ್ ಹಾಗೂ ಇತರ ಅಗತ್ಯ ದಾಖಲೆ ಪತ್ರಗಳನ್ನು ಎಗರಿಸಿದ್ದಾರೆ ಎಂದು ತಿಳಿದು ಬಂದಿದೆ.
ಬೆಳಗ್ಗಿನ ಜಾವ ಈ ವಿಚಾರ ಗಮನಕ್ಕೆ ಬಂದಿದ್ದು, ಕೂಡಲೇ ಮನೆಯವರು ಈ ಬಗ್ಗೆ ಬೀಟ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.