ಜಲಕ್ರಾಂತಿಯ ನರೇಗಾ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಇತ್ತೀಚೆಗಷ್ಟೇ ವಿಶ್ವ ಜಲ ದಿನವನ್ನು ಆಚರಿಸಿದ್ದೇವೆ. ನೀರಿಗೂ ಬೆಲೆ ಕೊಡಿ ಈ ವರ್ಷದ ಘೋಷ ವಾಕ್ಯ. ಕಾಲ ಬದಲಾದಂತೆ ನೀರ ಸಂರಕ್ಷಣೆಯ ವ್ಯಾಖ್ಯೆಯೂ ಬದಲಾಗುತ್ತಿದೆ. ಮಾತ್ರವಲ್ಲ, ಸಂರಕ್ಷಣೆಯ ಆಯಾಮವೂ ಹಿಗ್ಗುತ್ತಿದೆ. ನೀರಿನ ಸಂರಕ್ಷಣೆಯಲ್ಲಿ ವೈಯಕ್ತಿಕ-ಸಮುದಾಯದ ಪಾತ್ರ ಬಹಳ ಹಿರಿದೇ. ಆದರೆ, ಹದಿನೈದು ವರ್ಷಗಳಿಂದಿಚೆಗೆ ಸರಕಾರಿ ಯೋಜನೆಯೊಂದು ಸದ್ದಿಲ್ಲದೇ ಜಲಕ್ರಾಂತಿ ಮಾಡಿದ್ದು ನಮ್ಮ ಕಣ್ಣಮುಂದಿದೆ. ಮಹಾತ್ಮಾ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅರ್ಥಾತ್ ನರೇಗಾ ಇದಕ್ಕೆ ಸಾಕ್ಷಿ.

ವರ್ಷವೊಂದರಲ್ಲಿ ಕನಿಷ್ಠ 100 ದಿನಗಳ ಉದ್ಯೋಗವನ್ನು ನೀಡುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಜೀವನ ಸಾಗಿಸಲು ಭದ್ರತೆಯನ್ನು ನೀಡುವ ಧ್ಯೇಯವನ್ನು ನರೇಗಾ ಹೊಂದಿದೆ. ನೀರನ್ನೂ ಒಳಗೊಂಡು ಸ್ವಾಭಾವಿಕ ಸಂಪನ್ಮೂಲಗಳ ನಿರ್ವಹಣೆ ನರೇಗಾ ವ್ಯಾಪ್ತಿಯಲ್ಲಿ ಬರುವ ಪ್ರಮುಖ ವರ್ಗದಲ್ಲೊಂದು. ವಿಶ್ವದ ಮೊದಲ ಅತಿದೊಡ್ಡ ಸಾಮಾಜಿಕ ಭದ್ರತೆ ಒದಗಿಸುವ ಕಾರ್ಯಕ್ರಮವೆಂದು ಹೆಗ್ಗಳಿಕೆ ಹೊಂದಿದ್ದ ಈ ಯೋಜನೆಯು ಫಲಪ್ರದವಾಗಲು ತುಸು ಹೆಚ್ಚೇ ಸಮಯವನ್ನು ತೆಗೆದುಕೊಂಡಿದೆ.

ಅದೇನೇ ಇರಲಿ, ಸಮೀಕ್ಷೆಯೊಂದು ಹೇಳುವಂತೆ ಯೋಜನೆಯಲ್ಲಿ ತೊಡಗಿಸಿದ ಶೇ.60 ನಿಧಿಯು ನೀರು ಹಾಗೂ ಮಣ್ಣಿನ ಸಂರಕ್ಷಣೆಗೇ ಬಳಕೆಯಾಗಿದ್ದುದು ಸಂತಸವೇ. ಇದರ ಸಹಾಯದಿಂದ ಸುಮಾರು 29 ಸಾವಿರ ದಶಲಕ್ಷ ಘನ ಮೀಟರುಗಳಷ್ಟು ನೀರನ್ನು ಉಳಿಸಲಾಗಿದೆ. ಇಷ್ಟೇ ಅಲ್ಲ, ಯೋಜನೆಯಿಂದ ನಿರ್ಮಿಸಲಾದ ಸಂರಕ್ಷಣಾ ಕಟ್ಟಡಗಳಿಂದ 15 ದಶಲಕ್ಷ ಹೆಕ್ಟೇರ್ ಕೃಷಿಭೂಮಿಗೆ ನೀರುಣಿಸಲಾಗಿದೆ.

ಮನರೇಗಾದ ಅಡಿಯಲ್ಲಿ ಬರುವ ಸ್ವಾಭಾವಿಕ ಸಂಪನ್ಮೂಲಗಳ ನಿರ್ವಹಣೆಯು ಕೆರೆ ಪುನರುಜ್ಜೀವನ, ಕಿಂಡಿ ಅಣೆಕಟ್ಟು, ಒಡ್ಡು ನಿರ್ಮಾಣ, ಕಾಲುವೆಗಳ ದುರಸ್ತಿ, ಕೃಷಿ ಹೊಂಡ ಇವೇ ಮೊದಲಾದ ಕೆಲಸಗಳನ್ನು ನಿರ್ದೇಶಿಸಿದೆ. ಆಂಧ್ರಪ್ರದೇಶದ ಪ್ರಕಾಸಮ್ ಜಿಲ್ಲೆಯ ಗುರುವಾಜಿಪೇಟ ಗ್ರಾಮದಲ್ಲಿ ನೀರಿನ್ ಕೊರತೆ ಉಂಟಾದಾಗ, ನರೇಗಾ ಮೂಲಕ ಕೈಗೊಂಡ ೪೦ ಹೆಕ್ಟೇರ್ ಹಸಿರೀಕರಣ ಇವರ ಸಹಾಯಕ್ಕೆ ನಿಂತಿತು. ಇದರೊಂದಿಗೆ ವ್ಯವಸ್ಥಿತ ರೀತಿಯಲ್ಲಿ ತೋಡಿದ ಉದ್ದನೆಯ ಇಂಗು ಗುಂಡಿಗಳು ಕಡಿಮೆ ಮಳೆಯಲ್ಲಿಯೂ ಭೂ ಜಲ ಧಾರಣಾ ಸಾಮರ್ಥ್ಯ ಹೆಚ್ಚಿಸಿತು. ಇನ್ನು ಕೇರಳದ ಆಲಪ್ಪುಝ ಜಿಲ್ಲೆಯ ಕುಟ್ಟೆಂಪೆರೂರ್ ನದಿಯ ಮರುಜನ್ಮಕ್ಕೂ ನರೇಗಾ ಕೊಡುಗೆಯಿದೆ.

ಮೀನುಗಾರಿಕೆ, ಜಲಸಾರಿಗೆಗೆ ಹೇರಳವಾಗಿ ನಂಬಿಕೊಂಡಿದ್ದ ಈ ನದಿಯ ಹರಿವು ತ್ಯಾಜ್ಯಕ್ಕೆ ಸಿಕ್ಕಿ ನಲುಗಿ ಹೋಗಿದ್ದಾಗ ಗ್ರಾಮಸ್ಥರೇ ಧುಮುಕಿ ನದಿಯ ಸೆಲೆ ಉಕ್ಕಿಸಿದರು. ಉತ್ತರಪ್ರದೇಶದ ಫತೇಪುರ್ ಜಿಲ್ಲೆಯ ಸಸುರ್ ಮತ್ತು ಖದೇರಿ ನದಿಗಳ ಪುನರುಜ್ಜೀವನವೂ ಈ ನಿಟ್ಟಿನಲ್ಲಿ ಪ್ರಧಾನಮಂತ್ರಿಯವರ ಮನ್ ಕಿ ಬಾತ್‌ನಲ್ಲಿ ಉಕ್ತವಾದದ್ದು ನೆನಪಿಸಲೇ ಬೇಕು. ನದಿಯ ಸ್ವಾಸ್ಥ್ಯ ಎಂದ ಮೇಲೆ ಅವುಗಳ ಬಾಹುಗಳ ಅಂದರೆ ದಡದ ಸಂರಕ್ಷಣೆಯೂ ಮುಖ್ಯ. ಪಶ್ಚಿಮ ಬಂಗಾಳದೆಲ್ಲೆಡೆ ಸಾಬುಜಯನ್ ಯೋಜನೆ ಬಹಳ ಪ್ರಖ್ಯಾತ.

ನರೇಗಾದ ಅಡಿಯಲ್ಲಿ ಬರುವ ಸಾಬುಜಯನ್ ಯೋಜನೆಯಲ್ಲಿ ಪ್ರವಾಹಕ್ಕೊಳಗಾಗುವ ನದಿ ದಂಡೆಯ ಮೇಲೆ ಲಾವಂಚ ಜಾತಿಯ ಹುಲ್ಲನ್ನು ಬೆಳೆಸಲಾಗಿದೆ. ನದಿಯ ಅಭಿವೃದ್ಧಿಯ ಜೊತೆಗೆ ಲಾವಂಚದ ಪೂರಕ ಉದ್ಯಮಕ್ಕೂ ಸಹಾಯವಾಗಿದೆ. ರಾಜಸ್ಥಾನದ ಉದಯಪುರ್ ಜಿಲ್ಲೆಯಲ್ಲಿ ಕಾಲುವೆ, ಕಟ್ಟೆ, ಸ್ಲುಯಿಸ್ ಗೇಟ್ ಗಳ ನಿರ್ವಹಣೆಯ ಮಾತ್ರದಿಂದಲೇ ಕೃಷಿ ಚಟುವಟಿಕೆಗಳು ಗರಿಗೆದರಿವೆ. ನರೇಗಾದ ಅಡಿಯ ಹರಿತ್ ಧಾರಾ ಯೋಜನೆಯು ನಾಲಾ, ಬಾಂದ್, ಗೇಬಿಯನ್‌ಗಳ ನಿರ್ಮಾಣಕ್ಕೆ ರಾಜಸ್ಥಾನದಲ್ಲಿ ನಾಂದಿ ಹಾಡಿದೆ. ಹೀಗೆ ದೇಶದುದ್ದಗಲಕ್ಕೂ ನರೇಗಾ ಜಲಜಾಗೃತಿಗೆ ಹೊಸ ಮುನ್ನುಡಿಯನ್ನು ಬರೆಯುತ್ತಾ ಅಧ್ಯಾಯಗಳನ್ನು ತೆರೆಯುತ್ತಿವೆ.

ಜಲ ಸಂಗ್ರಹ ಎಂಬುದು ನೀವೂ ಓದಬಹುದಾದ ನರೇಗಾದ ಜಲ ಸಂರಕ್ಷಣಾ ಯಶೋಗಾಥೆಗಳ ಬರಹರೂಪದ ಗುಚ್ಛ (https://nrega.nic.in/netnrega/Data/JSA_sucessstory/Jal_Sangraha_Volume_1.pdf). ಮೂರು ಸಂಪುಟಗಳಲ್ಲಿ ಎಲ್ಲಾ ರಾಜ್ಯಗಳಿಂದಾಯ್ದ ನೂರಾರು ದೃಷ್ಟಾಂತಗಳನ್ನು ಚಿತ್ರದೊಂದಿಗೆ ಕಟ್ಟಿಕೊಟ್ಟ ದಾಖಲೆಯೂ ಹೌದು. ನರೇಗಾ ಸಾವಿರಾರು ಬಾವಿಗಳ ಮರುಪೂರಣವನ್ನು ಮಾಡಿದೆ. ಇದರಿಂದ, ಹೊಸ ರೀತಿಯ ಇಂಗು ಗುಂಡಿಗಳ, ಹೀರು ತಗ್ಗುಗಳ ವಿನ್ಯಾಸವೂ ಪ್ರಾದೇಶಿಕವಾಗಿ ಸಾಧ್ಯವಾಗಿದೆ.

ಸುಲಭವಾಗಿ ಮಾಡಿಕೊಳ್ಳಬಹುದಾದ ಚೆಕ್ ಡ್ಯಾಮ್ ಬಹಳ ಜನರ ಜೀವನ ಶೈಲಿಯನ್ನು ಬದಲಿಸಿದೆ. ಕಳೆದ ಹದಿನೈದು ವರ್ಷದ ದೇಶದಲ್ಲಿನ ಅತೀ ಹೆಚ್ಚು ಕೆರೆ-ದಿಣ್ಣೆ-ಕಾಲುವೆ-ಕಿಂಡಿಗಳ ಅಭಿವೃದ್ಧಿ ನರೇಗಾದ ಯಶಸ್ಸಿನ ಸಂಕೇತ. ಸಾಂಪ್ರದಾಯಿಕ, ನವೀನ ಎಲ್ಲಾ ರೀತಿಯ ವಿಧಾನಗಳನ್ನು ಕ್ರೋಡೀಕರಿಸಿ ನೀರನ್ನು ಹರಿಸುವ ಗುರಿಯತ್ತ ನಿಧಾನವಾಗಿಯಾದರೂ ಭರದಿಂದ ಹೆಜ್ಜೆಯಿಡುತ್ತಿದೆ. ಸರಕಾರದ ಯೋಜನೆಯೊಂದರ ಪರಿಸರಮುಖೀ ಪ್ರಭಾವ ದೇಶವ್ಯಾಪಿಯಾಗಿರುವುದು ಸಂತೋಷದ ಸಂಗತಿಯೇ.

ವಿಶ್ವನಾಥ ಭಟ್ 

ಎಸ್.ಡಿ.ಎಮ್. ಐ.ಟಿ. ಉಜಿರೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.