ಅಸಮರ್ಪಕ ವಿದ್ಯುತ್ ಪೂರೈಕೆ-ಪೆಟ್ರೋಲ್, ಡಿಸೇಲ್ ದರ ಏರಿಕೆ ವಿರೋಧಿಸಿ ಬ್ಲಾಕ್ ಕಾಂಗ್ರೆಸ್‌ನಿಂದ ಪ್ರತಿಭಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಬ್ಲಾಕ್ ಕಾಂಗ್ರೆಸ್ ಬೆಳ್ತಂಗಡಿ ನಗರ ಮತ್ತು ಗ್ರಾಮೀಣ ಘಟಕ ಇದರ ವತಿಯಿಂದ ತಾಲೂಕಿನಲ್ಲಿ ವಿದ್ಯುತ್ ಕಣ್ಣಾಮುಚ್ಚಾಳೆ, ಅಸಮರ್ಪಕ ವಿದ್ಯುತ್ ಪೂರೈಕೆ ಆಡಳಿತ ಸರಕಾರದ ವಿಫಲತೆಯನ್ನು ಖಂಡಿಸಿ ಹಾಗೂ ಪೆಟ್ರೋಲ್, ಡಿಸೇಲ್, ಗ್ಯಾಸ್ ಹಾಗೂ ಇನ್ನಿತರ ಅಗತ್ಯ ವಸ್ತುಗಳ ಬೆಲೆಯೇರಿಕೆಯನ್ನು ವಿರೋಧಿಸಿ ಬೆಳ್ತಂಗಡಿ ಮೆಸ್ಕಾಂಗೆ ಮುತ್ತಿಗೆ ಹಾಗೂ ಪ್ರತಿಭಟನಾ ಸಭೆಯು ಮಾ.17ರಂದು ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾಜಿ ಶಾಸಕ ಕೆ. ವಸಂತ ಬಂಗೇರ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ನಿರಂತರವಾಗಿ ವಿದ್ಯುತ್ ಪೂರೈಕೆಯಾಗುತ್ತಿದ್ದು, ಇಂಧನ ಸಚಿವರಾಗಿದ್ದ ಡಿ.ಕೆ ಶಿವಕುಮಾರ್ ವಿದ್ಯುತ್ ಉತ್ಪಾದನೆಗೆ ಅನೇಕ ಯೋಜನೆಗಳನ್ನು ಮಾಡಿದ್ದರು. ನಂತರ ಅಧಿಕಾರಕ್ಕೆ ಬಂದು ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿ ವಿದ್ಯುತ್‌ನ ತೀವ್ರ ಕೊರತೆಯುಂಟಾಗಿದೆ. ಬೇಕಾದಷ್ಟು ವಿದ್ಯುತ್ ಇದ್ದರೂ ರಾಜ್ಯ ಸರಕಾರ ಪೂರೈಕೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದರು.

ತಾನು ಶಾಸಕನಾಗಿದ್ದಾಗ ಬೆಳ್ತಂಗಡಿ ತಾಲೂಕಿಗೆ 6 ವಿದ್ಯುತ್ ಘಟಕಗಳನ್ನು ಮಂಜೂರುಗೊಳಿಸಿದ್ದು, ಅದರಲ್ಲಿ 4 ಘಟಕಗಳನ್ನು ಉದ್ಘಾಟಿಸಿದ್ದೆ. ಉಜಿರೆ ಮತ್ತು ನಾರಾವಿ ಘಟಕಗಳು ಆಗಿರಲಿಲ್ಲ. ನಂತರ ಬಂದ ಶಾಸಕರು ಇದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಬೆಳ್ತಂಗಡಿ ತಾಲೂಕಿನಿಂದ ವಗ್ಗ ಫೀಡರ್‌ಗೆ ಸಂಪರ್ಕ ಕಲ್ಪಿಸಿರುವುದು ವಿದ್ಯುತ್ ಅಭಾವಕ್ಕೆ ಕಾರಣವಾಗಿದೆ. ಇದನ್ನು ತಕ್ಷಣ ಕಟ್ ಮಾಡಬೇಕು. ಗುರುವಾಯನಕೆರೆಯಲ್ಲಿ ವಿದ್ಯುತ್ ಅಭಿವೃದ್ಧಿಗೆ ಹೆಚ್ಚುವರಿ ಫೀಡರ್ ಅಳವಡಿಸುವಂತೆ ಬಂಗೇರ ಆಗ್ರಹಿಸಿದರು. ಕೇಂದ್ರ ಹಾಗೂ ರಾಜ್ಯ ಸರಕಾರ ಆಡಳಿತದಲ್ಲಿಸಂಪೂರ್ಣ ವಿಫಲವಾಗಿದ್ದು, ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಜನಸಾಮಾನ್ಯರ ಜೀವನ ದುಸ್ತರವಾಗಿದೆ. ವಿದ್ಯುತ್ ಲೊವೋ, ಲೋಡ್‌ಶೆಡ್ಡಿಂಗ್‌ನಿಂದಾಗಿ ಕೃಷಿಕರು ಕಂಗಾಲಾಗಿದ್ದು, 15 ದಿವಸದ ಒಳಗೆ ವಿದ್ಯುತ್ ಸಮಸ್ಯೆ ನಿವಾರಿಸಿ ನಿರಂತರ ವಿದ್ಯುತ್ ಕೊಡಿಸುವ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ಮತ್ತೆ ನಿರಂತರ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ಉಜಿರೆ ವ್ಯಾಪ್ತಿಯಲ್ಲಿ ಪದ್ಮ ಪೂಜಾರಿ ಎಂಬವರಿಗೆ ಮೂರು ತಿಂಗಳು ಕಳೆದರೂ ಇನ್ನೂ ಟಿ.ಸಿ ಅಳವಡಿಸದಿರುವುದಕ್ಕೆ ಇಂಜಿನಿಯರ್‌ನ್ನು ತರಾಟೆಗೆ ತೆಗೆದುಕೊಂಡು ಎಪ್ರಿಲ್ 15ರೊಳಗೆ ಇದನ್ನು ಅಳವಡಿಸುವಂತೆ ತಾಕೀತು ಮಾಡಿದರು. ಮೆಸ್ಕಾಂ ಕಚೇರಿ ಎದುರು ಹಾಕಿರುವ ನಿರಂತರ ವಿದ್ಯುತ್ ಪೂರೈಕೆ ಬೋರ್ಡನ್ನು ತೆಗೆಯುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಜಿ.ಪಂ ಸದಸ್ಯ ಹಾಗೂ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ ಮಾತನಾಡಿ, ಲೋಡ್‌ಶೆಡ್ಡಿಂಗ್‌ನಿಂದಾಗಿ ಕೊಯ್ಯೂರು, ಕಿಲ್ಲೂರು, ಮಿತ್ತಬಾಗಿಲು, ಮುಂಡಾಜೆ, ಉಜಿರೆ, ಇಂದಬೆಟ್ಟು ಮೊದಲಾದ ಗ್ರಾಮದ ಕೃಷಿಕರಿಗೆ ಕೃಷಿಗೆ ಬಹಳಷ್ಟು ಸಮಸ್ಯೆಯಾಗಿದೆ. ಜೊತೆಗೆ ಪರೀಕ್ಷೆ ಸಮಯವಾಗಿದ್ದರಿಂದ ರಾತ್ರಿ ಮಕ್ಕಳಿಗೆ ಓದಲು ಕಷ್ಟವಾಗುತ್ತಿದೆ. ಹಿಂದೆ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ವಿದ್ಯುತ್‌ನ ಯಾವುದೇ ಸಮಸ್ಯೆ ಇರಲಿಲ್ಲ. ಈಗೀನ ಬಿಜೆಪಿ ಸರಕಾರದ ಅವಧಿಯಲ್ಲಿ ಈ ಸಮಸ್ಯೆ ಉಂಟಾಗಿದೆ. ವಿದ್ಯುತ್ ಇಲ್ಲದಿದ್ದರೂ, ದರ ಏರಿಕೆ ಮಾಡಿ ರೈತರ ಪಾಲಿಗೆ ಸಂಕಷ್ಟವನ್ನು ತಂದಿದ್ದಾರೆ ಎಂದು ಆಪಾದಿಸಿದರು.

ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಶೈಲೇಶ್ ಕುಮಾರ್ ಮಾತನಾಡಿ, ತಾಲೂಕಿನಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದರಿಂದ ಕುಡಿಯುವ ನೀರಿಗೆ ಸಮಸ್ಯೆ ಕಾಡಿದ್ದು, ಮೆಸ್ಕಾಂ ಕಚೇರಿಯಲ್ಲಿ ನಿರಂತರ ವಿದ್ಯುತ್ ಬೋರ್ಡು ಹಾಕಲಾಗಿದೆ. ಆದರೆ ವಿದ್ಯುತ್ ಪೂರೈಕೆ ನಿರಂತರ ಇಲ್ಲ ಎಂದು ತಿಳಿಸಿದರು. ಗ್ರಾಮೀಣ ಘಟಕದ ಅಧ್ಯಕ್ಷ ರಂಜನ್ ಜಿ. ಗೌಡ ಮಾತನಾಡಿ, ಅಚ್ಚೇ ದಿನ್ ಎಂದು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರದ ಅವಧಿಯಲ್ಲಿ ಪೆಟ್ರೋಲ್, ಡಿಸೇಲ್ ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಏರುತ್ತಿದೆ. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸವಾಗುತ್ತಿದ್ದು, ಇದನ್ನು ಸರಿಪಡಿಸದಿದಲ್ಲಿ ತಾಲೂಕಿನ ರೈತರು ಇಲಾಖೆಯ ಎದುರು ಮತ್ತೆ ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಸಿದರು. ಕಿಸಾನ್ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷ ಮೋಹನ್ ಗೌಡ ಕಲ್ಮಂಜ ಮಾತನಾಡಿ ವಿದ್ಯುತ್ ಸಮಸ್ಯೆಯನ್ನು ಶೀಘ್ರವಾಗಿ ನಿವಾರಿಸುವಂತೆ ಆಗ್ರಹಿಸಿದರು.

ಬಂಟ್ವಾಳ ವಿಭಾಗದ ಎಡಬ್ಲ್ಯೂಇ ರಾಮಚಂದ್ರ ಹಾಗೂ ಬೆಳ್ತಂಗಡಿ ಮೆಸ್ಕಾಂನ ಸ.ಕಾ.ಅಭಿಯಂತರ ಶಿವಶಂಕರ್ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಜಗೀಶ್ ಡಿ., ಅಬ್ದುಲ್‌ರಹಿಮಾನ್ ಪಡ್ಪು, ಆಶ್ರಫ್ ನೆರಿಯ, ಮನೋಹರ ಇಳಂತಿಲ, ಉಷಾಶರತ್, ಜಯವಿಕ್ರಮ್, ಇಸುಬು ಇಳಂತಿಲ, ಭರತ್‌ಕುಮಾರ್, ಎನ್.ಲಕ್ಷ್ಮಣ ಗೌಡ, ಅಯೂಬ್ ತಣ್ಣೀರುಪಂತ, ನಾಗರಾಜ ಲಾಯಿಲ, ಮೆಹಬೂಬ್, ಸಲೀಂ ಜಿ.ಕೆರೆ, ಪ್ರವೀಣ್ ಗೌಡ ಕೊಯ್ಯೂರು, ಜಯರಾಮ ಅಲಂಗಾರು, ಅಭಿನಂದನ್, ಕುಶಾಲಪ್ಪ ಗೌಡ ಶಿರ್ಲಾಲು, ವಿನ್ಸೆಂಟ್ ಮಡಂತ್ಯಾರು, ವೀರೇಶ್ವರ ಮರಾಠೆ, ಮಹಮ್ಮದ್ ಮೊದಲಾದವರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.