ವಿಶ್ವ ಮಹಿಳಾ ದಿನಾಚರಣೆ ವಿಶೇಷ: ಸಿರಿ ಪಾಡ್ದನಗಳ ವಿದ್ವಾಂಸೆ, ನಾಟಿ ವೈದ್ಯೆ ಕರ್ಗೀ ಶೆಡ್ತಿ ಅವರಿಗೆ ಸನ್ಮಾನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಇಂದು ಗದ್ದೆ ಬೇಸಾಯ ಕಡಿಮೆ ಆಗಿದೆ. ಅದು ಇರುವಲ್ಲಿ ನೇಜಿ ನೆಡುವ ಸಂದರ್ಭದಲ್ಲಿ ಓ ಬೇಲೆ,ಸಂಧಿ ಪಾಡ್ದನಗಳು ಮರೆಯಾಗಿ ಸಿನಿಮಾ ಹಾಡುಗಳು, ಧಾರಾವಾಹಿಗಳ ಚರ್ಚೆಯೇ ಹೆಚ್ಚಾಗಿದೆ ಎಂದು ಸಿರಿ ಪಾಡ್ದನಗಳ ವಿದ್ವಾಂಸೆ, ನಾಟಿ ವೈದ್ಯೆ ಕರ್ಗೀ ಶೆಡ್ತಿ ಹೇಳಿದರು.

ಫಲ್ಗುಣಿ ಸ್ವಸಹಾಯ ಸಂಘ ಸೂಳಬೆಟ್ಟು ಇದರ ನೇತೃತ್ವದಲ್ಲಿ, ಮಹಿಳಾ ಜ್ಞಾನವಿಕಾಸ ಹಾಗೂ ಸ್ತ್ರೀ ಶಕ್ತಿ ತಂಡದ ಸಹಕಾರದಲ್ಲಿ ಬರಯ ಶ್ರೀಗೋಪಾಲಕೃಷ್ಣ ದೇವಸ್ಥಾನದ ವಠಾರದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸಮ್ಮಾನ ಸ್ವೀಕರಿಸಿ‌ ಅವರು ಮಾತನಾಡಿದರು.

ಯಾವುದೇ ಫಲಾಪೇಕ್ಷೆ ಇಲ್ಲದೆ ಜಾತಿ ಭೇದವಿಲ್ಲದೆ ಸಂಧಿ- ಪಾಡ್ದನಗಳನ್ನು ಹಲವಾರು ಕಡೆ ಹೇಳಿದ್ದೇನೆ. ನಾಲ್ಕು ನೂರಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿಸಿದ್ದೇನೆ. ಇದರ ಫಲವಾಗಿ ನನ್ನನ್ನು ಜರ್ಮನಿ, ಫಿನ್ಲೆಂಡ್ ನಂತಹ ವಿದೇಶದವರೂ ಗುರುತಿಸಿದ್ದಾರೆ. ಅಳದಂಗಡಿ ಅರಸರ, ಸಾಹಿತಿ ವಿವೇಕ ರೈ ಗಳ, ಅಶೋಕ ಆಳ್ವ ಅವರ, ಜರ್ಮನಿಯ ಸಂಶೋಧಕರ ಪ್ರೋತ್ಸಾಹ ಮರೆಯುವಂತಿಲ್ಲ ಎಂದರು.
ಮನಸ್ಸಿನೊಳಗೊಂದು, ಬಾಯಿಯಲ್ಲೊಂದು ವಿಚಾರಗಳು ನಮ್ಮಲ್ಲಿ ಎಂದೂ ಇರಬಾರದು. ಇಂತಹ ಸ್ವಭಾವ ತುಳುನಾಡಿನ ಮಣ್ಣಿಗೆ ತಕ್ಕುದಲ್ಲ. ಇಂತಹ ಸಂಗತಿಗಳು ನಮ್ಮ ಜನಪದ ಸಾಹಿತ್ಯದಲ್ಲಿ ಸಾಕಷ್ಟು ಇವೆ ಎಂದು ಕರ್ಗೀ‌ ಶೆಡ್ತಿ ವಿವರಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಇವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಕರ್ಗೀಯವರು ಸಿರಿ ಹುಟ್ಟುವ ಮೊದಲಿನ ಪಾಡ್ದನವನ್ನು ಪ್ರಸ್ತುತಪಡಿಸಿದರು. ಫಲ್ಗುಣಿ ಸಂಘದ ಅಧ್ಯಕ್ಷೆ ರೇಖಾ ಮೆಹೆಂದಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜ್ಞಾನವಿಕಾಸ ತಂಡದ ಅಧ್ಯಕ್ಷೆ ವಿಮಲ ಉಪಸ್ಥಿತರಿದ್ದರು. ಪದ್ಮಶ್ರೀ ಚಿಪ್ಳೂಣಕರ್ ಸ್ವಾಗತಿಸಿದರು. ಸ್ತ್ರೀ ಶಕ್ತಿಯ ಕಾರ್ಯದರ್ಶಿ ಶ್ರೀದೇವಿ ಮರಾಠೆ ವಂದಿಸಿದರು. ರಮ್ಯಾ ಜೋಶಿ ಸಮ್ಮಾನಿತರ ಪರಿಚಯವಿತ್ತರು. ಚೈತ್ರಾ ನಾತು ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಸದಸ್ಯೆಯರಿಂದ ಕವನ ವಾಚನ, ಪಿಕ್ ಎಂಡ್ ಆ್ಯಕ್ಟ್, ಸಂಗೀತ ಕುರ್ಚಿ ಆಟ ನಡೆದವು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.