ಇಂದಬೆಟ್ಟು: ಇಲ್ಲಿಯ ಕುತ್ರೊಟ್ಟು ಬಂಗಾಡಿ ಹಾಡಿದೈವ ಉಳ್ಳಾಕುಳ ಕ್ಷೇತ್ರದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಲಾಯಿಲ ಗ್ರಾಮದ ವ್ಯಕ್ತಿಯೋರ್ವರಿಗೆ ವಿಷ ಪೂರಿತ ಹಾವು ಕಡಿದಿದ್ದು, ಆ ವೇಳೆ ಸ್ಥಳದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆಯರು ಗಾಯಾಳುವಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಿದ ಘಟನೆ ಮಾ.3 ರಂದು ನಡೆದಿದೆ.
ಘಟನೆಯ ವಿವರ: ಲಾಯಿಲ ಗ್ರಾಮದ ರಾಘವೇಂದ್ರ ನಗರ ನಿವಾಸಿ ವಿಶ್ವನಾಥ ಹೆಗ್ಡೆ ಎಂಬವರು ಇಂದಬೆಟ್ಟು ಗ್ರಾಮದ ಕುತ್ರೊಟ್ಟು ಬಂಗಾಡಿ ಹಾಡಿದೈವ ಉಳ್ಳಾಕುಳ ಕ್ಷೇತ್ರದ ಜಾತ್ರಾ ಮಹೋತ್ಸವಕ್ಕೆ ಹೋದಂತಹ ಸಂದರ್ಭದಲ್ಲಿ ಅವರಿಗೆ ವಿಷಪೂರಿತ ಹಾವೊಂದು ಅವರ ಕಾಲಿಗೆ ಕಚ್ಚಿತ್ತು. ಈ ಸಮಯದಲ್ಲಿ ಜಾತ್ರೆಗೆ ಬಂದಿದ್ದ ಕೋಯನಗರ ಅಂಗನವಾಡಿ ಕಾರ್ಯಕರ್ತೆ ಶಶಿಕಲಾ ಹಾಗೂ ಕಲ್ಲಾಜೆ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಲೀಲಾವತಿಯವರು ಕೂಡಲೇ ಸ್ಪಂದಿಸಿ, ಗಾಯಾಳುವಿಗೆ ಪ್ರಥಮ ಚಿಕಿತ್ಸೆ ನೀಡಿ ಆಟೋ ರಿಕ್ಷಾದಲ್ಲಿ ಅವರನ್ನು ಬದ್ಯಾರಿನಲ್ಲಿರುವ ಖಾಸಗಿ ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕಾರಿಯಾದರು.
ಗಾಯಾಳು ವಿಶ್ವನಾಥ ಹೆಗ್ಡೆಯವರು ಬದ್ಯಾರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರ ಸಮಯ ಪ್ರಜ್ಞೆ, ಆರೋಗ್ಯದ ಕಾಳಜಿ, ಸ್ಪಂದನೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.