ಒಂದು ವಾರದ ಹಿಂದಿನ ಮಾತು. ಸುಮಾರು 6 ವರ್ಷ 8 ತಿಂಗಳ ಗಂಡು ಮಗುವೊಂದನ್ನು ಹೆತ್ತವರು ಚಿಕಿತ್ಸೆಗಾಗಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಗೆ ಕರೆತಂದರು. ಆ ಮಗುವಿಗೆ 2 ದಿನಗಳಿಂದ ಅಪರಿಮಿತ ಜ್ವರ, ಕುತ್ತಿಗೆ ನೋವು, ಕುತ್ತಿಗೆಯ ಬಲ ಭಾಗದಲ್ಲಿ ಕರಳೆ ಕಂಡು ಬಂದಿತ್ತು. ಪರೀಕ್ಷಿಸಿ ನೋಡಿದಾಗ ಮಗುವಿಗೆ 102 ಡಿಗ್ರಿ ಜ್ವರ ಇತ್ತು. ಮಗು ತುಂಬಾ ಸುಸ್ತಾಗಿತ್ತು. ಕುತ್ತಿಗೆಯ ಬಲ ಭಾಗದಲ್ಲಿದ್ದ ಕರಳೆ ಮುಟ್ಟಿದ ತಕ್ಷಣವೇ ಮಗು ನೋವಿನಿಂದ ಜೋರಾಗಿ ಕೂಗುತ್ತಿತ್ತು. ರಕ್ತ ಪರೀಕ್ಷೆಯ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಲಾಯಿತು. ಮೊದಲಿಗೆ ಇದು ಕುತ್ತಿಗೆಯ ಕರಳೆಯ ಸಮಸ್ಯೆ ಎಂದು ಅದಕ್ಕೆ ಸಂಬಂಧಪಟ್ಟ ಔಷಧಗಳನ್ನು ನೀಡಿ ಚಿಕಿತ್ಸೆ ನೀಡಲಾಯಿತು.
ಆದರೆ ಒಂದೆರಡು ದಿನಗಳಲ್ಲಿ ಮಗುವಿಗೆ ಜ್ವರ ಜಾಸ್ತಿಯಾಗುತ್ತಾ ಹೋಯಿತು. ಜ್ವರದೊಂದಿಗೆ ಹೊಟ್ಟೆ ನೋವು, ವಾಂತಿಯೂ ಪ್ರಾರಂಭವಾಯಿತು. ಮಗುವಿನ ಮೂತ್ರದ ಮಾದರಿ ಪರೀಕ್ಷೆಯ ವರದಿ ಆಧರಿಸಿ ಔಷಧಿಯಲ್ಲಿ ಬದಲಾವಣೆ ಮಾಡಿದೆವು. ಆದರೆ ಮುಂದಿನ ದಿನಗಳಲ್ಲಿಯೂ ಮಗುವಿಗೆ 103 ಡಿಗ್ರಿ ಜ್ವರ ಮುಂದುವರಿಯಿತು. ಇದರ ಜೊತೆಗೆ ಮಗುವಿನ ಮಲದ್ವಾರವು ಕೆಂಪಾಯಿತು. ಕಣ್ಣುಗಳು ಕೆಂಪು ಬಣ್ಣಕ್ಕೆ ತಿರುಗಿದವು. ನಾಲಗೆಯು ಸ್ಟ್ರಾಬೆರಿ ಹಣ್ಣಿನ ಬಣ್ಣಕ್ಕೆ ಬದಲಾಯಿತು. ಮಗುವಿನ ಆ ಮುದ್ದು ತುಟಿಗಳು ಒಡೆದು ಕೆಂಪಾಗಲು ಶುರುವಾಯಿತು. ಅತಿಯಾದ ನೋವು ಮತ್ತು ಕಿರಿಕಿರಿಯಿಂದ ಮಗು ನಿರಂತರ ಅಳುತ್ತಿತ್ತು. ಊಟ ತಿಂಡಿ ಸ್ವೀಕರಿಸುತ್ತಿರಲಿಲ್ಲ. ಚರ್ಮದ ಮೇಲೆ ಕೆಂಪು ಬಣ್ಣದ ಕಲೆಗಳು ಮೂಡಲಾರಂಭಿಸಿದವು. ಕೈ-ಕಾಲುಗಳು ಸ್ವಲ್ಪ ಊದಿಕೊಂಡವು. ಬಿಳಿ ರಕ್ತಕಣಗಳ ಸಂಖ್ಯೆಯೂ ಹೆಚ್ಚಾಗಿತ್ತು. ಕೊರೊನಾ ಪರೀಕ್ಷೆಯು ನೆಗೆಟಿವ್ ಬಂದಿತ್ತು. ಮಗುವಿಗೆ ಮಲೇರಿಯಾ, ಡೆಂಗೀ, ಇಲಿಜ್ವರ, ಟೈಫಾಯಿಡ್ ಪರೀಕ್ಷೆಗಳನ್ನು ಮಾಡಿಸಿದಾಗ ಇದಾವುದೂ ಆ ಮಗುವಿಗೆ ಇಲ್ಲ ಎಂಬುದು ಖಚಿತವಾಯಿತು.
ಸಾಮಾನ್ಯವಾಗಿ ಹತೋಟಿಗೆ ಬಾರದ ಜ್ವರ, ಕೆಂಪು ಒಡೆದ ತುಟಿಗಳು, ಸ್ಟ್ರಾಬೆರಿ ಹಣ್ಣಿನಂತಹ ನಾಲಗೆ, ನೋವಿನಿಂದ ಕೂಡಿದ ಕೊರಳಿನ ಗಂಟು, ಮೈಮೇಲಿನ ಕೆಂಪು ಕಲೆಗಳು, ಸದಾ ಅಳುತ್ತಿದ್ದ ಮಗು, ರಕ್ತ ಪರೀಕ್ಷೆಯ ಫಲಿತಾಂಶಗಳು ಇವೆಲ್ಲವನ್ನೂ ಗಣನೆಗೆ ತೆಗೆದುಕೊಂಡಾಗ ಈ ಕಾಯಿಲೆಯು ಕವಾಸಕಿ ಕಾಯಿಲೆ ಎಂಬುದು ನಮಗೆ ದೃಢವಾಯಿತು. ತಕ್ಷಣವೇ ಮಗುವಿಗೆ ದುಬಾರಿಯಾದರೂ ಅಗತ್ಯವಿದ್ದ ಇಮ್ಯೂನೊಗ್ಲೊಬ್ಯೂಲಿನ್ ಔಷಧಿ ಸೇರಿದಂತೆ ಸಮರ್ಪಕವಾದ ಚಿಕಿತ್ಸೆ ನೀಡಿದೆವು. ಮಗುವಿನ ಹೃದಯದ ಎಕೋ ಪರೀಕ್ಷೆಯೂ ನಾರ್ಮಲ್ ಬಂದಿತ್ತು. ಮಗುವಿನಲ್ಲಿ ರೋಗಲಕ್ಷಣಗಳು ಹತೋಟಿಗೆ ಬಂದು ಮುಂದಿನ ದಿನಗಳಲ್ಲಿ ಮಗು ಗುಣಮುಖವಾಯಿತು ಎಂಬುದೇ ನಮಗೆ ಸಂತಸ ಹಾಗೂ ಆತ್ಮತೃಪ್ತಿ ತಂದ ಸಂಗತಿಯಾಗಿದೆ.
ಕವಾಸಕಿ ಕಾಯಿಲೆಯು ಅತಿ ಅಪರೂಪದ ಕಾಯಿಲೆಯಾದರೂ ಮಕ್ಕಳನ್ನೇ ಕಾಡುತ್ತದೆ. ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆಯನ್ನು ಈ ಕಾಯಿಲೆ ಪ್ರಾರಂಭವಾಗಿ 7 ದಿನಗಳೊಳಗೆ ನೀಡಿದರೆ ಮಾತ್ರ ಮಕ್ಕಳು ಸುಲಭವಾಗಿ ಸಹಜ ಸ್ಥಿತಿಗೆ ಮರಳುತ್ತಾರೆ. 1967ರಲ್ಲಿ ಜಪಾನಿನ ಮಕ್ಕಳ ತಜ್ಞ ಟೋಮಿಸಾಕಿ ಕವಾಸಕಿ ಎಂಬುವವರು ಈ ಕಾಯಿಲೆಯನ್ನು ಕಂಡು ಹಿಡಿದರು. ಹೀಗಾಗಿ ಈ ಕಾಯಿಲೆಗೆ ಇವರ ಹೆಸರನ್ನೇ ನೀಡಲಾಗಿದೆ. ಮಕ್ಕಳನ್ನು ಕಾಡುವ ಅನೇಕ ಕಾಯಿಲೆಗಳ ಪೈಕಿ ಕವಾಸಕಿ ಕಾಯಿಲೆಯು ಅಪರೂಪವಾದರೂ ಪ್ರಮುಖವಾದದ್ದು. 1 ರಿಂದ 6 ವರ್ಷದ ಮಕ್ಕಳು ಈ ಕಾಯಿಲೆಗೆ ಹೆಚ್ಚಾಗಿ ತುತ್ತಾಗುತ್ತಾರೆ. ಈ ಕಾಯಿಲೆಯ ತೀವ್ರತೆ ಕಂಡು ಪೋಷಕರು ತುಂಬಾ ಭಯಭೀತರಾಗುತ್ತಾರೆ. ಆದರೆ ಸೂಕ್ತ ಚಿಕಿತ್ಸೆ ನೀಡಿದರೆ ಮಕ್ಕಳು ಸುಲಭವಾಗಿಯೇ ಸಹಜ ಸ್ಥಿತಿಗೆ ಮರಳುತ್ತಾರೆ. ಕವಾಸಾಕಿ ಕಾಯಿಲೆಯ ಅತಿ ದೊಡ್ಡ ದುಷ್ಪರಿಣಾಮವೆಂದರೆ ಮಕ್ಕಳಲ್ಲಿ ಹೃದಯ ಸಂಬಂಧಿ ಕಾಯಿಲೆ. ಇದರೊಂದಿಗೆ ಮುಂದೆ ಹಾರ್ಟ್ ಸ್ಟ್ರೋಕ್ ಉಂಟಾಗುವ ಸಾಧ್ಯತೆ ಕೂಡ ಇರುತ್ತದೆ, ಕೆಲವು ಸಲ ಇದನ್ನು ಪತ್ತೆ ಹಚ್ಚುವುದು ವೈದ್ಯರಿಗೆ ಕಷ್ಟವಾಗುತ್ತದೆ. ಪತ್ತೆ ಹಚ್ಚಿದ ಮೇಲೂ ಈ ಕಾಯಿಲೆಯ ವೆಚ್ಚವು ದುಬಾರಿಯಾಗಿರುವುದರಿಂದ ಬಡವರಿಗೆ ಚಿಕಿತ್ಸೆ ಪಡೆದುಕೊಳ್ಳುವ ಆಸೆ ಹಲವರಿಗೆ ಗಗನ ಕುಸುಮವೇ ಸರಿ.
ಈ ಒಂದು ಸಂದರ್ಭದಿಂದ ನಮಗೆ ಪಾಠಗಳು ಹಲವು. ವೈದ್ಯರ ಮೇಲೆ ನಂಬಿಕೆ ಇಟ್ಟು ಜ್ವರ ಹಾಗೂ ಇನ್ನಿತರ ಲಕ್ಷಣಗಳು ಉಲ್ಬಣಿಸಿದಾಗಲೂ ಪೂರ್ಣ ಸಹಕಾರವನ್ನು ನೀಡಿದ ಹೆತ್ತವರ ಈ ಉತ್ತಮ ಗುಣವೇ ನಮಗೆ ಚಿಕಿತ್ಸೆ ನೀಡಲು ಪ್ರೇರಣೆಯಾಗಿ ನಿಂತದ್ದು. ಲಕ್ಷ ರೂಪಾಯಿಗೂ ಮೀರಿದ IVIG ಚಿಕಿತ್ಸೆ ದುಬಾರಿಯಾಗಿದ್ದರೂ ಮಗುವಿಗೊಂದು ಆರೋಗ್ಯ ವಿಮೆ ಇದ್ದ ಕಾರಣ ಕಷ್ಟ ಅಷ್ಟು ತಿಳಿಯದೇ ಲೀಲಾಜಾಲವಾಗಿ ನಡೆದದ್ದು ನಮಗೆಲ್ಲರಿಗೂ ಮತ್ತೊಂದು ಪಾಠ. ಆರೋಗ್ಯ ವಿಮೆ ಮಾಡಿಸುವುದರ ಹಿಂದಿನ ಮುಂದಾಲೋಚನೆ ಇದುವೇ ತಾನೇ. ವೈದ್ಯನಿಗೆ ಒಬ್ಬ ರೋಗಿಯು ಗುಣಮುಖನಾಗಿ ಆಸ್ಪತ್ರೆಯಿಂದ ತೆರಳಿದಾಗ ಸಿಗುವ ಆತ್ಮತೃಪ್ತಿಗೆ ನಿಜವಾಗಿಯೂ ಸರಿಸಾಟಿಯಿಲ್ಲ. ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಹಾಗೂ ನಮ್ಮ ಪರಮ ಪೂಜ್ಯ ವೀರೇಂದ್ರ ಹೆಗ್ಗಡೇಜಿಯವರ ಆಶೀರ್ವಾದದಿಂದ ಮತ್ತು ನಮ್ಮ ಆಸ್ಪತ್ರೆಯ ಆಡಳಿತ ಮಂಡಳಿಯ ಪ್ರೋತ್ಸಾಹ, ದಾದಿಯರ ಶೂಶ್ರುಷಾ ಗುಣ, ಆಸ್ಪತ್ರೆಯ ಪ್ರತಿ ವೈದ್ಯ ಹಾಗೂ ಇತರ ಸಿಬ್ಬಂದಿಗಳ ಪೂರ್ಣ ಸಹಕಾರದಲ್ಲಿ ಈ ಮಗು ಕವಾಸಕಿ ಕಾಯಿಲೆಯನ್ನು ಗೆದ್ದು ಮತ್ತೆ ತನ್ನ ಬಾಲ್ಯದ ಸವಿದಿನಗಳ ಸವಿಯುವ ಅತ್ಯಮೂಲ್ಯ ಅವಕಾಶದ ಮರುಜನ್ಮವನ್ನು ಪಡೆಯಿತು ಎಂದರೆ ಬಹುಷಃ ಅತಿಶಯೋಕ್ತಿಯಲ್ಲ.
ಡಾ| ಸಂದೀಪ್ ಹೆಚ್.ಎಸ್.
ಮಕ್ಕಳ ತಜ್ಞರು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ, ಉಜಿರೆ