ಉಜಿರೆ: ಮಾ.1ರಿಂದ ದೇಶಾದ್ಯಂತ 3ನೇ ಹಂತದ ಕೋವಿಡ್ ಲಸಿಕೆ ವಿತರಣೆ ಕಾರ್ಯಕ್ರಮ ಆರಂಭವಾಗಿದ್ದು, ಈ ಹಿನ್ನಲೆಯಲ್ಲಿ ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಾರ್ವಜನಿಕರಿಗೆ ಉಚಿತ ಕೋವಿಡ್- 19 ನಿರೋಧಕ ಲಸಿಕೆ ವಿತರಣೆ ಕಾರ್ಯಕ್ರಮಕ್ಕೆ ಫೆ.2 ರಂದು ಚಾಲನೆ ದೊರೆತಿದೆ.
60ವರ್ಷ ಮೇಲ್ಪಟ್ಟವರಿಗೆ ಹಾಗೂ ಇತರ ರೋಗಗಳಿಂದ ಬಳಲುತ್ತಿರುವ 45 ವರ್ಷ ಪ್ರಾಯದ ಮೇಲಿನವರಿಗೆ ಮೊದಲು ಆದ್ಯತೆ ನೀಡಲಾಗುತ್ತಿದ್ದು, ನೋಂದಣಿ ಮಾಡಿಕೊಂಡ ಅಭ್ಯರ್ಥಿಗಳು ಲಸಿಕೆ ಪಡೆಯಬಹುದಾಗಿದೆ.
ನೋಂದಣಿ ಪ್ರಕ್ರಿಯೆ ಹೇಗೆ ?
selfregistration.cowin.gov.in ಸೈಟಿಗೆ ಹೋಗಿ ಮೊಬೈಲ್ ನಂಬರ್ ನೋಂದಣಿಸಬೇಕು. ಒಂದು ಮೊಬೈಲ್ ಫೋನ್ ನಿಂದ ನಾಲ್ಕು ಜನರ ಹೆಸರು ನೋಂದಾಯಿಸಬಹುದು. ಆಧಾರ್ ಕಾರ್ಡ್, ಪಾನ್ ಅಥವಾ ಚಾಲನಾ ಪರವಾನಿಗೆ ನಂಬರ್ ಕೊಟ್ಟು, ಹೆಸರು, ಲಿಂಗ, ಹುಟ್ಟಿದ ವರ್ಷ, ಜಿಲ್ಲೆ, ತಾಲ್ಲೂಕು, ಊರು ಇತ್ಯಾದಿ ಮಾಹಿತಿ ನೀಡಿದಾಗ ಹೆಸರು ನೋಂದಣಿ ಖಚಿತ ಪಡಿಸಲಾಗುತ್ತದೆ. ಇದೇ ಮಾಹಿತಿ ಆಸ್ಪತ್ರೆಯ ಸಿಸ್ಟಮ್ ಗೂ ಹೋಗುತ್ತದೆ.
ಪ್ರತಿದಿನ ಬೆಳಿಗ್ಗೆ 10.00 ರಿಂದ ಸಂಜೆ 4.00 ಗಂಟೆಯ ವರೆಗೆ ಲಸಿಕೆ ವಿತರಣೆ ನಡೆಯಲಿದ್ದು, ಲಸಿಕೆ ಪಡೆದ ಬಳಿಕ ಅರ್ಧ ಗಂಟೆ ಸಮಯ ಆಸ್ಪತ್ರೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳಬೇಕಾಗುತ್ತದೆ. ಜೊತೆಗೆ ಒಂದು ಬಾರಿ ಲಸಿಕೆ ಪಡೆದವರು 28 ದಿನಗಳ ಬಳಿಕ ಮತ್ತೊಮ್ಮೆ ಲಸಿಕೆ ಹಾಕಿಸಿಕೊಳ್ಳಬೇಕಾಗುತ್ತದೆ.