ಉಜಿರೆ: ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನದ ನಿರ್ದೇಶಕ ಡಾ. ವಿಘ್ನರಾಜ ಎಸ್.ಆರ್. ತುಳು ಸಾಹಿತ್ಯ ಅಕಾಡೆಮಿ ನೀಡುವ 2019ನೇ ಸಾಲಿನ ತುಳು ಸಾಹಿತ್ಯ ಗೌರವ ಪ್ರಶಸ್ತಿ ಲಭಿಸಿದೆ.
ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನದಲ್ಲಿ ಕಾಯನಿರ್ವಹಿಸುತ್ತಿರುವ ಡಾ.ಎಸ್.ಆರ್.ವಿಘ್ನರಾಜ ಅವರು ಹಸ್ತಪ್ರತಿ ಶಾಸ್ತ್ರದಲ್ಲಿ ವಿಶೇಷ ಪರಿಣತರಾಗಿದ್ದು, ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಹಸ್ತಪ್ರತಿಶಾಸ್ತ್ರ ಡಿಪ್ಲೋಮ ಪದವಿ ಪಡೆದಿದ್ದಾರೆ. ದಕ್ಷಿಣ ಭಾರತದ ಲಿಪಿಗಳಾದ ಕನ್ನಡ, ತುಳು, ಮಲೆಯಾಳ, ತೆಲುಗು, ನಂದಿನಾಗರಿ ಮತ್ತು ಮರಾಠಿ ಲಿಪಿಗಳಲ್ಲಿರುವ 12 ಸಾವಿರಕ್ಕೂ ಅಧಿಕ ವೈದಿಕ, ಜೈನ, ವೀರಶೈವ ಮೊದಲಾದ ಮತಧರ್ಮಗಳಿಗೆ ಸಂಬಂಧಪಟ್ಟ ಗ್ರಂಥಗಳನ್ನು ತಳಸ್ಪರ್ಶಿಯಾಗಿ ಅಧ್ಯಯನ ಮಾಡಿದ್ದಾರೆ.
ಪ್ರಾಚೀನ ಹಸ್ತ ಪ್ರತಿಗಳು ನಮ್ಮ ಸಂಸ್ಕೃತಿ, ಸಾಹಿತ್ಯ ಮತ್ತು ಇತಿಹಾಸ ಅಮೂಲ್ಯ ದಾಖಲೆಗಳಾಗಿದ್ದು, ನಮ್ಮ ಹಿರಿಯರು ಸಾವಿರಾರು ವರುಷಗಳಿಂದ ಕಂಡುಕೊಂಡ ಅನುಭವಗಳನ್ನು ಪುರಾಣ, ವ್ಯಾಕರಣ, ಕೋಶ, ಕಾವ್ಯ, ಗಣಿತ, ಜ್ಯೋತಿಷ್ಯ, ಆಯುರ್ವೇದಶಾಸ್ತ್ರ, ಅಶ್ವಶಾಸ್ತ್ರ, ಗಜಶಾಸ್ತ್ರ, ಕೂಪಶಾಸ್ತ್ರ ಮೊದಲಾದವುಗಳ ಮೂಲಕ ಮರದ ತೊಗಟೆ, ತಾಡ ಓಲೆ, ಕಾಗದ, ಬಟ್ಟೆ, ಲೋಹದ ಫಲಕ, ಶಿಲೆ ಮೊದಲಾದವುಗಳಲ್ಲಿ ಸಂಗ್ರಹಿಸಿಟ್ಟಿದ್ದಾರೆ
ಪ್ರಸ್ತುತ 6.175 ಹಸ್ತಪ್ರತಿಗಳು ಧರ್ಮಸ್ಥಳದ ‘ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನ”ದಲ್ಲಿ ಸಂಗ್ರಹಗೊಂಡಿದ್ದು, ಇವು ರಾಷ್ಟ್ರದ ಅಕ್ಷರಲಿಪಿ ಸಂಸ್ಕೃತಿಯ ಒಂದು ಭಾಗವಾಗಿ ಸಂರಕ್ಷಿತವಾಗಿದೆ. ತುಳು ಲಿಪಿಯಲ್ಲಿರುವ 3,500ಕ್ಕೂ ಹೆಚ್ಚು ಗ್ರಂಥಗಳನ್ನು ಅಧ್ಯಯನ ನಡೆಸಿ ಮೊಟ್ಟಮೊದಲ ಬಾರಿಗೆ ತುಳು ಗ್ರಂಥಗಳಲ್ಲಿರುವ ಅಂಕೆ ಸಂಖ್ಯೆಗಳನ್ನು ಅದರ ಸ್ವರೂಪವನ್ನು ಜನತೆಗೆ ಪರಿಚಯಿಸಿರುವ ವಿಘ್ನರಾಜರು ತುಳು ಸಾಹಿತ್ಯ ಸಂಸ್ಕೃತಿ ಸಂವರ್ಧನೆಗೆಅಪಾರ ಕೊಡುಗೆ ನೀಡಿದ್ದಾರೆ.