ಬೆಳಾಲು: ಬಸವ ಜನ್ಮಭೂಮಿ ಪ್ರತಿಷ್ಠಾನ ವಿಜಯಪುರ, ಇವರು ಕೊಡಮಾಡುವ 2020ನೇ ಸಾಲಿನ ರಾಷ್ಟ್ರಮಟ್ಟ ಬಸವ ವಿಭೂಷಣ ಪ್ರಶಸ್ತಿಗೆ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಮಾಯಾ ಗಾಂಧಿನಗರ ನಿವಾಸಿ ಖ್ಯಾತ ಶಿಲ್ಪಕಲೆ ಕಲಾವಿದ ಶಶಿಧರ ಆಚಾರ್ಯ ಅವರು ಭಾಜನರಾಗಿದ್ದಾರೆ.
ಮಾ.14ರಂದು ವಿಜಯಪುರದಲ್ಲಿ ನಡೆಯಲಿರುವ 10ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶಶಿಧರ ಆಚಾರ್ಯ ಅವರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.
ಶಿಲ್ಪಾ ಕಲಾ ಕ್ಷೇತ್ರದಲ್ಲಿ ವಿಶೇಷ ತರಬೇತಿ ಪಡೆದಿರುವ ಇವರು ಹಲವಾರು ದೇವಸ್ಥಾನಗಳ ಕಲಾಕೃತಿಗಳ ವಿನ್ಯಾಸ ಮಾಡಿದ್ದು, ಹೊರ ರಾಜ್ಯಗಳಾದ ಗೋವಾ, ಮುಂಬಯಿ, ದೆಹಲಿ, ಮಧ್ಯಪ್ರದೇಶ ಹಾಗೂ ಗುಲ್ಬರ್ಗದಲ್ಲಿ ಸ್ಥಾಪಿತಗೊಂಡಿರುವ ಶರಣ ಬಸವೇಶ್ವರ ಮೂರ್ತಿ ಇವರ ಕೈಚಲಕದಿಂದ ಮೂಡಿದೆ.
ಉಡುಪಿಯ ಎಲ್ಲೂರು, ಮಂಗಳೂರು, ಧರ್ಮಸ್ಥಳ, ಕಟಪಾಡಿ, ವಾಮದಪದವು, ಮರೋಡಿ, ಮಧೂರು, ಮಾಯಾ, ಕೊಲ್ಪಾಡಿ, ಮಿಯ್ಯಾರು, ಆರಿಕೋಡಿ ಮೊದಲಾದ ದೇವಸ್ಥಾನಗಳ ಕಲಾಕೃತಿಗಳ ವಿನ್ಯಾಸ ಮಾಡಿದ್ದಾರೆ.
ಇನ್ನು ಶಶಿಧರ ಆಚಾರ್ಯರಿಗೆ ಇಲ್ಲಿಯವರೆಗೆ ಹಲವಾರು ಪ್ರಶಸ್ತಿ ಸಮ್ಮಾನ ಲಭಿಸಿದ್ದು, 2007ರಲ್ಲಿ ಮೂಡುಬಿದ್ರೆ ಆಳ್ವಾಸ್ನಲ್ಲಿ ನಡೆದ ರಾಷ್ಟ್ರಮಟ್ಟದ ಕ್ಯಾಂಪಸ್ಗಳಲ್ಲಿ ಭಾಗವಹಿಸಿ ವಾಸೋಜ ಬಿರುದು, ಗುಲ್ಬರ್ಗದ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಇವರು ಬೆಳಾಲಿನ ಆಲಡ್ಕ ಚಂದ್ರಯ್ಯ ಆಚಾರ್ಯ ಮತ್ತು ಜಾನಕಿ ದಂಪತಿ ಪುತ್ರ.