ಭಕ್ತಾಧಿಗಳಿಂದ ಹೊರೆಕಾಣಿಕೆ ಸಮರ್ಪಣೆ
ನಾರಾವಿ: ಇಲ್ಲಿಯ ಶ್ರೀ ಸೂರ್ಯನಾರಾಯಣ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವವು ಫೆ.27 ರಂದು ಆರಂಭಗೊಂಡಿದ್ದು, ಮಾ. 5ರವರೆಗೆ ನಡೆಯಲಿದೆ.
ಆ ಪ್ರಯುಕ್ತ ಫೆ. 27 ರಂದು ಪುಣ್ಯಾಹವಾಚನ, ನವಕ ಕಲಶ ಪ್ರಧಾನ ಹೋಮ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ ನಡೆದು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ ತೋರಣ ಮುಹೂರ್ತ, ಧ್ವಜಾರೋಹಣ, ನಿತ್ಯಬಲಿ ಉತ್ಸವ, ವಸಂತ ಪೂಜೆ, ಮಹಾಪೂಜೆ, ದೀಪಬಲಿ ನಡೆಯಿತು.
ಫೆ.28 ರಂದು ನಾರಾವಿ ಪೇಟೆಯಿಂದ ದೇವಸ್ಥಾನದವರೆಗೆ ಭಕ್ತಾಧಿಗಳಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ ಮಧ್ಯಾಹ್ನ ನಿತ್ಯಬಲಿ ಉತ್ಸವ, ಮಹಾಪೂಜೆ ನಡೆದು ರಾತ್ರಿ ಶ್ರೀ ಕ್ಷೇತ್ರ ಹಿರಿಯಡ್ಕ ಶ್ರೀ ವೀರಭದ್ರ ಸ್ವಾಮಿ ದಶಾವತಾರ ಯಕ್ಷಗಾನ ಮಂಡಳಿಯಿಂದ ‘ಮಾಯಾದ ಅಜ್ಜೆ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಮಾ.1 ರಂದು ವೇ|ಮೂ. ವಿ ಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಬಳಿಕ ನಿತ್ಯಬಲಿ ಉತ್ಸವ, ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಇಂದು ಸಂಜೆ ಕಲರ್ಸ್ ಕನ್ನಡ ಖ್ಯಾತಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತುಳುನಾಡ ಗಾನ ಗಂಧರ್ವ ಬಿರುದಾಂಕಿತ ಪುತ್ತೂರು ಜಗದೀಶ ಆಚಾರ್ಯ ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ ನಡೆಯಲಿದೆ.
ಮಾ.2 ಮತ್ತು 3 ರಂದು ಎಂದಿನಂತೆ ನಿತ್ಯಬಲಿ ಉತ್ಸವ, ಮಹಾಪೂಜೆ, ದೀಪ ಬಲಿ, ಅನ್ನಸಂತರ್ಪಣೆ ನಡೆಯಲಿದೆ. ಮಾ.4ರಂದು ಮಧ್ಯಾಹ್ನ ಮಹಾಪೂಜೆ , ನಿತ್ಯಬಲಿ ಉತ್ಸವದ ಬಳಿಕ ಹಗಲು ತೇರು ನಡೆಯಲಿದೆ. ಸಂಜೆ ಮಹಾಪೂಜೆ, ಶ್ರೀ ಭೂತಬಲಿ ಕವಾಟ ಬಂಧನದ ಬಳಿಕ, ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ಮಾ.5 ರಂದು ಪ್ರಸನ್ನ ಪೂಜೆ, ನಿತ್ಯಬಲಿ ಉತ್ಸವ ಹೊರಟು, ಚೂರ್ಣೋತ್ಸವ, ಮಹಾಪೂಜೆ, ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ ನಡೆದು, ರಾತ್ರಿ ಶ್ರೀ ದೇವರ ಬಲಿ ಉತ್ಸವ, ಕೊಡಮಣಿತ್ತಾಯ ದೈವದ ನೇಮ, ಸೂಟೆದಾರ ಪೇಟೆ ಸವಾರಿ ಅವಭೃತ ಸ್ನಾನ, ಬಳಿಕ ಧ್ವಜಾವರೋಹಣ ಮಹಾಪೂಜೆ ನಡೆದು ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.