ಸ್ಥಳಕ್ಕೆ ಅಧಿಕಾರಿಗಳ ಭೇಟಿ; ಮುನ್ನೆಚ್ಚರಿಕೆ ವಹಿಸಲು ಸಾರ್ವಜನಿಕರಿಗೆ ಸೂಚನೆ
ಉಜಿರೆ: ಇಲ್ಲಿಯ ಓಡಲದ ಶ್ರೀ ವ್ಯಾಘ್ರಚಾಮುಂಡಿ ದೈವಸ್ಥಾನದ ಹಿಂಭಾಗದ ಸರಕಾರಿ ಜಾಗದಲ್ಲಿ ಕಳೆದೆರಡು ದಿನಗಳ ಹಿಂದೆ ಎರಡು ಕೋತಿಗಳು ಹಾಗೂ ಫೆ.26 ರಂದು ಒಂದು ಕೋತಿಯ ಮೃತದೇಹ ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿದೆ.
ಆರೋಗ್ಯ ಇಲಾಖಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೋತಿಗಳ ಕಳೇಬರವನ್ನು ಪರೀಕ್ಷೆಗಾಗಿ ಶಿವಮೊಗ್ಗ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಮಂಗನ ಕಾಯಿಲೆ ಮುಂಜಾಗ್ರತಾ ಕ್ರಮವಾಗಿ ಸ್ಥಳೀಯರಿಗೆ ಅಗತ್ಯ ಮಾಹಿತಿ ನೀಡಲಾಯಿತು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ನವೀನ್ ಚಂದ್ರ ಕುಲಾಲ್, ಜಿಲ್ಲಾ ಸರ್ವೈಕ್ಷಣಾಧಿಕಾರಿ ಡಾ| ಜಗದೀಶ್, ತಾಲೂಕು ಆರೋಗ್ಯಾಧಿಕಾರಿ ಡಾ| ಕಲಾಮಧು, ಉಜಿರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಅರ್ಚನಾ, ಹಿರಿಯ ಮಹಿಳಾ ಆರೋಗ್ಯ ಕಾರ್ಯಕರ್ತೆ ಮೇರಿ ಮ್ಯಾಥ್ಯೂ, ಕಿರಿಯ ಆರೋಗ್ಯ ಸಹಾಯಕಿ ಸುಜಾತ, ಜಿಲ್ಲಾ ಆರೋಗ್ಯ ಇಲಾಖೆಯ ಕೋವಿಡ್ ನೋಡೆಲ್ ಅಧಿಕಾರಿ ಅಶೋಕ್ ಕೀಟಶಾಸ್ತ್ರಜ್ಞೆ ಡಾ| ಮಂಜುಳಾ, ಆರೋಗ್ಯ ಸಹಾಯಕ ಸ್ವತಂತ್ರರಾವ್, ಸೋಮನಾಥ್, ಪ್ರದೀಪ್, ಆಶಾಕಾರ್ಯಕರ್ತೆ ವಿಶಾಲಾಕ್ಷಿ, ಉಜಿರೆ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೋತಿಗಳ ಉಣ್ಣೆಗಳ ಮಾದರಿಯನ್ನು ಸಂಗ್ರಹಿಸಿ ಮಂಗಳೂರು ಕೀಟ ತಂತ್ರಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬರುವವರೆಗೂ ಸುತ್ತಮುತ್ತಲಿರುವ ಮನೆಮಂದಿಗೆ ಮುನ್ನೆಚ್ಚರಿಕೆವಹಿಸುವಂತೆ ಸೂಚಿಸಲಾಗಿದೆ.