ಬೆಳ್ತಂಗಡಿ: ಪಡಿತರ ಸೋರಿಕೆ ತಡೆಗಟ್ಟುವ ಸಲುವಾಗಿ ಅಕ್ರಮ ಪಡಿತರ ಚೀಟಿಗಳನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಇಡೀ ದೇಶವೇ ಪಣ ತೊಟ್ಟಿ ನಿಂತಿದ್ದು, ಹಲವು ರಾಜ್ಯಗಳು ಅನರ್ಹ ಪಡಿತರನ್ನು ಮಟ್ಟ ಹಾಕಲು ವಿವಿಧ ಮಾನದಂಡಗಳನ್ನು ಅನುಸರಿಸುತ್ತಿದೆ. ಅಲ್ಲದೇ ಬಿಪಿಎಲ್ ಕಾರ್ಡ್ ಹೊಂದಿರುವ ಸರಕಾರಿ ನೌಕರರು, ಟ್ರಾಕ್ಟರ್ ಹಾಗೂ ಇತರೆ ವಾಹನ ಹೊಂದಿರುವವರು ತಮ್ಮ ಕಾರ್ಡ್ಗಳನ್ನು ಕೂಡಲೇ ಹಿಂತಿರುಗಿಸಿ, ರದ್ದುಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದೆ.
ಈ ಹಿನ್ನಲೆಯಲ್ಲಿ ರಾಜ್ಯದ ನಾನಾ ಭಾಗಗಳ್ಲಿ ಅನರ್ಹ ಪಡಿತರ ಚೀಟಿ ಹೊಂದಿರುವವರನ್ನು ಪತ್ತೆ ಹಚ್ಚುವ ಕಾರ್ಯಾಚರಣೆ ಪ್ರಾರಂಭಗೊಂಡಿದ್ದು, ಇದೀಗ ಬೆಳ್ತಂಗಡಿ ತಾಲೂಕಿನಲ್ಲಿಯೂ ನಕಲಿ ಪಡಿತರ ಚೀಟಿ ಉಳ್ಳವರ ಹುಡುಕಾಟ ಪ್ರಕ್ರಿಯೆ ಚುರುಕು ಪಡೆದುಕೊಂಡಿದೆ.
ಒಟ್ಟು ತಾಲೂಕಿನಲ್ಲಿ 3351 ಅಂತ್ಯೋದಯ ಹಾಗೂ 44803 ಆದ್ಯತಾ (ಬಿಪಿಎಲ್) ಪಡಿತರ ಚೀಟಿದಾರರು ಇದ್ದು, ಈ ಪೈಕಿ ಬಿಪಿಎಲ್ ಮಾನದಂಡಗಳನ್ನು ಮೀರಿ ಪಡಿತರ ಚೀಟಿ ಹೊಂದಿರುವ ಹಾಗೂ ಪಡಿತರ ಸೇರಿದಂತೆ ಮತ್ತಿತ್ತರ ಸರಕಾರಿ ಸೌಲಭ್ಯ ಪಡೆಯುತ್ತಿರುವ ಬಿಪಿಎಲ್ ಹೊಂದಿರುವ ಅನರ್ಹ ಕುಟುಂಬಗಳ ಪತ್ತೆ ಹಚ್ಚುವಲ್ಲಿ ಕಾರ್ಯನಿರತವಾಗಿದೆ.
ಈಗಾಗಲೇ ಸ್ವಂತ ಉಪಯೋಗಕ್ಕಾಗಿ ನಾಲ್ಕು ಚಕ್ರದ ವಾಹನ -ಕಾರು, ಜೀಪು ಹೊಂದಿರುವವರ ಮಾಹಿತಿಯನ್ನು RTO ಕಚೇರಿಯಿಂದ ಪಡೆಯಲಾಗಿದ್ದು, ಸರ್ವೆ ನಡೆಸಲಾಗುತ್ತಿದೆ. ಇನ್ನುಳಿದಂತೆ ನ್ಯಾಯಬೆಲೆ ಅಂಗಡಿವಾರು, ಪಂಚಾಯತ್ ವಾರು ಮಾಹಿತಿಯನ್ನು ಕೂಡ ಕಲೆ ಹಾಕಲಾಗುತ್ತಿದ್ದು, ಅನರ್ಹರೆಂದು ಪತ್ತೆಯಾದ್ದಲ್ಲಿ ಮಾರ್ಚ್ 16 ರಿಂದ ದಂಡ ಸಹಿತ ಪತ್ತೆ ಕಾರ್ಯ ನಡೆಯಲ್ಲಿದೆ.
ಇನ್ನು ವಾರ್ಷಿಕವಾಗಿ 1,20,000/- ಆದಾಯ ಹೊಂದಿರುವ ಕುಟುಂಬ, ಸರಕಾರಿ ಮತ್ತು ಅರೆ ಸರಕಾರಿ ನೌಕರರು, ಖಾಸಗಿ ಸಂಸ್ಥೆಗಳ ಖಾಯಂ ನೌಕರರು, ಸಹಕಾರಿ ಸಂಘಗಳ ನೌಕರರು, ಪಂಚಾಯತ್ ನ ಖಾಯಂ ಸಿಬ್ಬಂಧಿಗಳು, 3 ಹೆಕ್ಟೇರ್ ಭೂಮಿ ಹೊಂದಿರುವವರು , 4 ಚಕ್ರದ ಸ್ವಂತ ವಾಹನ, ಬಸ್, ಲಾರಿ, ಟಿಪ್ಪರ್ ಮಾಲಕರು, ಆದಾಯ ತೆರಿಗೆ ಪಾವತಿದಾರರು, ವಿದೇಶದಲ್ಲಿ ಉದ್ಯೋಗ ಹೊಂದಿರುವವರು ಒಂದೇ ಮನೆಯಲ್ಲಿದ್ದು ಒಂದಕ್ಕಿಂತ ಹೆಚ್ಚು ಪಡಿತರ ಚೀಟಿ ಮಾಡಿಸಿಕೊಂಡವರು, ನಗರ ಪ್ರದೇಶದಲ್ಲಿ 1000 ಚದರ ಅಡಿ ಮನೆ ಹೊಂದಿರುವವರು, ದೊಡ್ಡ-ದೊಡ್ಡ ಹೋಟೆಲ್ ಮಾಲಕರು, ಉದ್ಯಮದಾರರು BPL ಪಡಿತರ ಚೀಟಿ ಹೊಂದಿದ್ದಲ್ಲಿ , ಮಾರ್ಚ್ 15 ರ ಒಳಗೆ ಸ್ವಯಂ ಪ್ರೇರಿತರಾಗಿ ತಾಲೂಕು ಕಚೇರಿಯ ಆಹಾರ ಶಾಖೆಗೆ ಬಂದು ದಂಡ ರಹಿತವಾಗಿ ಸರೆಂಡರ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಹಾಗೂ ಮರಣ ಹೊಂದಿದವರ ಹೆಸರನ್ನು ಕೂಡಲೇ ಪಡಿತರ ಚೀಟಿಯಿಂದ ತೆಗೆಸಬೇಕೆಂದು ತಹಶೀಲ್ದಾರರು ತಿಳಿಸಿದ್ದಾರೆ.