ಮುಂಡಾಜೆ: ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಧುಂಬೆಟ್ಟು ವಾಳ್ಯದ ಕಜೆ ಪ್ರದೇಶದ ತೋಟಗಳಿಗೆ ಮುಂಜಾನೆ 4 ಗಂಟೆ ಸುಮಾರಿಗೆ ಕಾಡಾನೆ ನುಗ್ಗಿ ಬೆಳೆ ನಾಶ ಮಾಡಿದ ಘಟನೆ ನಡೆದಿದೆ. ಕಜೆ ರತ್ನಾ, ಬಾಬು ಗೌಡ, ಜಿನ್ನಮ್ಮ ಮೊದಲಾದವರ ಅಡಕೆ,ತೆಂಗು ಹಾಗೂ ಬಾಳೆ ಕೃಷಿಗೆ ಹಾನಿಯಾಗಿದ್ದು, ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ ಒಂಟಿ ಸಲಗ ದಾಳಿ ನಡೆಸಿದೆ. ಇನ್ನು ಘಟನೆ ಕುರಿತು ಮಾಹಿತಿ ದೊರಕುತ್ತಿದ್ದಂತೆ ಇತರೆ ಕೃಷಿಕರು ಎಚ್ಚೆತ್ತು ಕೊಂಡಿದ್ದು, ಮತ್ತಷ್ಟು ತೋಟಗಳು ಹಾನಿಗೆ ತುತ್ತಾಗುವುದು ತಪ್ಪಿದೆ.
ಮನೆಗಳ ಸಮೀಪದವರೆಗೂ ಬಂದಿದ್ದ ಕಾಡಾನೆಗಳನ್ನು ಸ್ಥಳೀಯರು ಸೇರಿ ದೊಂದಿ ಬೆಳಕು ತೋರಿಸಿ ಕಾಡಿಗೆ ಅಟ್ಟಿದ್ದು, ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ ಎನ್ನಲಾಗಿದೆ.
ಇನ್ನು ಈ ಪ್ರದೇಶದಲ್ಲಿ ಆಗಾಗ ಕಾಡಾನೆಗಳ ದಾಳಿ ನಡೆಯುತ್ತಲ್ಲೇ ಇದ್ದು, ಬೆಳೆ ಹಾನಿಯಿಂದ ನಷ್ಟ ಎದುರಿಸುವ ಭೀತಿ ಕೃಷಿಕರನ್ನು ಕಾಡುತ್ತಿದೆ.